











ಪುತ್ತೂರು: ಮಂಗಳೂರು ಹಾಗೂ ಉಡುಪಿ ಮಾರ್ಗವಾಗಿ ಗೋವಾದಿಂದ ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಜಾಲವೊಂದನ್ನು ಅಬಕಾರಿ ಇಲಾಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಾಲಕೃಷ್ಣ ಸಿ.ಹೆಚ್. ಅವರ ಆದೇಶದ ಮೇರೆಗೆ ದಕ್ಷಿಣ ಕನ್ನಡ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಅವರ ನಿರ್ದೇಶನದಲ್ಲಿ ಅಬಕಾರಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಈ ಜಾಲವನ್ನು ಪತ್ತೆ ಹಚ್ಚಿದೆ.
ಹೆಜಮಾಡಿ ಟೋಲ್ ಗೇಟ್ ಬಳಿ ಗೋವಾದಿಂದ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಗ್ಯಾಂಗ್ವೊಂದನ್ನು ವಿಶೇಷ ತಂಡ ಪತ್ತೆ ಹಚ್ಚಿದ್ದು ಒಂದು ಸ್ವಿಫ್ಟ್ ಡಿಸೈರ್ ಕಾರು ಹಾಗೂ ಒಟ್ಟು 438 ಲೀಟರ್ ಅಕ್ರಮ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ. ವಾಹನದ ಚಾಲಕ ಬಸವರಾಜು ಬೋವಿ ಹಾಗೂ ನಾಗವೇಣಿ ನಾಯಕರ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಈ ವಿಶೇಷ ಕಾರ್ಯಾಚರಣೆಯಲ್ಲಿ ಮಂಗಳೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಗಾಯತ್ರಿ ಸಿ.ಹೆಚ್., ಬಂಟ್ವಾಳ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಸಂತೋಷ್ ಮೋಡಗಿ, ಬಂಟ್ವಾಳ ತಾಲೂಕು ವಲಯದ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಶಿವಣಗಿ, ತಲಪಾಡಿ ಚೆಕ್ಪೋಸ್ಟ್ನ ಅಬಕಾರಿ ನಿರೀಕ್ಷಕ ದತ್ತಗುರು ಅಥಣಿ, ಅಬಕಾರಿ ಉಪ ನಿರೀಕ್ಷಕ ಅಭಿಷೇಕ ಬೋರಕರ, ಜಯಪ್ಪ ಲಮಾಣಿ, ಶಿವಶಂಕರ್ ಹಾಗೂ ಅಬಕಾರಿ ಪೇದೆ ಪ್ರಕಾಶ್ ಭಾಗವಹಿಸಿದ್ದರು.
ಜಂಟಿ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕಿ ಸುನಿತಾ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.










