







ಕಡಬ: ಕಡಬ ಪೇಟೆಯ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರನ್ನು ಸೇರಿಸಿ ನಿಷೇಧಿತ ಹಣ ಪರಿಚಲನಾ ಯೋಜನೆ (ಮನಿ ಸರ್ಕ್ಯುಲೇಷನ್ ಸ್ಕೀಮ್) ಮೂಲಕ ಹಣ ಸಂಗ್ರಹಿಸುತ್ತಿದ್ದ ಜಾಲವನ್ನು ಕಡಬ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮಾಲೀಕರು ಹಾಗೂ ಸ್ಥಳೀಯ ಏಜೆಂಟರು ಸೇರಿದಂತೆ ಎಂಟು ಮಂದಿ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.


ಆಗಸ್ಟ್ 23ರಂದು ಬೆಳಗ್ಗೆ ಕಡಬ ಪೊಲೀಸ್ ಠಾಣೆಯ ಗುಪ್ತವಾರ್ತೆ ಸಿಬ್ಬಂದಿಗೆ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರನ್ನು ಸೇರಿಸಿ ಅಕ್ರಮ ಹಣಗಳಿಕೆ ಜಾಲದ ಸಭೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಹಾವೇರಿ ಮೂಲದ ಕಿಂಗ್ಸ್ ಬಜಾರ್ (KINGS Bazaar) ಎಂಬ ಕಂಪನಿಯ ಹೆಸರಿನಲ್ಲಿ ಸಾರ್ವಜನಿಕರನ್ನು ಸದಸ್ಯರನ್ನಾಗಿ ಮಾಡಿಕೊಳ್ಳುವ ಚಟುವಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.



ಕಂಪನಿಗೆ ಸದಸ್ಯರಾಗಿ ಹಣ ತೊಡಗಿಸಿದರೆ ಶೀಘ್ರವಾಗಿ ಹೆಚ್ಚಿನ ಲಾಭ ಗಳಿಸಬಹುದು, ಬೆಲೆಬಾಳುವ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದು ಹಾಗೂ ಇತರರನ್ನು ಸದಸ್ಯರನ್ನಾಗಿ ಸೇರ್ಪಡೆಗೊಳಿಸಿದರೆ ಪ್ರತಿದಿನ ಕಮಿಷನ್ ದೊರೆಯುತ್ತದೆ ಎಂದು ಸಾರ್ವಜನಿಕರಿಗೆ ಆಮಿಷವೊಡ್ಡಿ ಹಣ ಸಂಗ್ರಹಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್ಐಆರ್ನಲ್ಲಿ ಉಲ್ಲೇಖಿಸಲಾದ ಆರೋಪಿಗಳು:
ಕಿಂಗ್ಸ್ ಬಜಾರ್ ಸಂಸ್ಥೆಯ ಮಾಲಕರು, ಹಾವೇರಿ, ಸುಬ್ರಹ್ಮಣ್ಯ ಶಾಗ್ರಿತ್ತಾಯ (50), ತೋಟದ ಮೂಲೆ, ಕೊಕ್ಕಡ, ಬೆಳ್ತಂಗಡಿ, ಗುರುಮೂರ್ತಿ (54), ಹಳ್ಳಿಂಗೇರಿ, ಕೊಕ್ಕಡ, ಬೆಳ್ತಂಗಡಿ, ಸುರೇಶ್ ಆರ್. (55), ಪರ್ಲ ಮನೆ, ಬಿಳಿನೆಲೆ, ಕಡಬ, ಬಾಲಕೃಷ್ಣ ಪಿ.ಹೆಚ್. (42), ಅಲಂಪಾಡಿ ಮನೆ, ಕೌಕ್ರಾಡಿ, ಕಡಬ, ಕಿರಣ್ ಕುಮಾರ್ (21), ನೆಟ್ಟಣ, ಬಿಳಿನೆಲೆ, ಕಡಬ, ಶ್ರೀನಾಥ್ (48), ನೆಟ್ಟಣ, ಸಂದೇಶ್ ಪುತ್ತೂರು
ಸಾರ್ವಜನಿಕರಲ್ಲಿ ಹೆಚ್ಚಿನ ಲಾಭದ ಆಸೆ ಹುಟ್ಟಿಸಿ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 100/2026ರಂತೆ Prize Chits and Money Circulation Schemes (Banning) Act, 1978ರ ಕಲಂ 4, 5 ಮತ್ತು 6ರ ಅಡಿಯಲ್ಲಿ ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಲಾಗಿದೆ. ಠಾಣಾಧಿಕಾರಿ ಜಂಬುರಾಜ್ ಮಹಾಜನ್ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ.










