







ಪುತ್ತೂರು: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮೈರೋಳ್ತಡ್ಕದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಜನರೇಟರ್ನಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ಆರೋಪದಡಿ ಧರ್ಮಸ್ಥಳ ಠಾಣಾ ಪೊಲೀಸರ ವಶವಾಗಿದ್ದ ಮೂವರನ್ನು ಠಾಣಾ ಜಾಮೀನು ಪಡೆದು ಬಿಡುಗಡೆಗೊಳಿಸಲಾಗಿದೆ.


ಬಂದಾರು ಗ್ರಾಮದ ಮೈರೋಳ್ತಡ್ಕದಲ್ಲಿರುವ ಏರ್ಟೆಲ್ ಮೊಬೈಲ್ ಟವರ್ನ ಜನರೇಟರ್ನಿಂದ ಕಳೆದ ಹಲವಾರು ದಿನಗಳಿಂದ ಡೀಸೆಲ್ ಕಳ್ಳತನವಾಗುತ್ತಿರುವ ಬಗ್ಗೆ ತೀವ್ರ ಅನುಮಾನವಿತ್ತು. ಈ ಹಿನ್ನೆಲೆಯಲ್ಲಿ ಏರ್ಟೆಲ್ ಸಂಸ್ಥೆಗೆ ಸೇರಿದ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸ್ಥಳೀಯರು ಆ.೨೩ರಂದು ರಾತ್ರಿ ಕಾವಲು ಕಾಯುತ್ತಾ ಕುಳಿತಿದ್ದರು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಮೂವರು ಡೀಸೆಲ್ ಕಳ್ಳತನ ಮಾಡಲು ಯತ್ನಿಸುತ್ತಿದ್ದ ವೇಳೆ ಅವರನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ಈ ಬಗ್ಗೆ ಧರ್ಮಸ್ಥಳ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.



ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಗೆ ಒಳಪಡಿಸಿದ ವೇಳೆ ಅವರು ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೋಡಿಯಡ್ಕದ ಸೋಮಪ್ಪ ಗೌಡ ಅವರ ಪುತ್ರ ದೀಕ್ಷನ್, ಕಠಾರದ ಬಾಲಚಂದ್ರ ರೈಯವರ ಪುತ್ರ ವಿಖ್ಯಾತ್ ಮತ್ತು ಕೊಡಪೊಟ್ಯದ ನೋಣಯ್ಯ ಪೂಜಾರಿಯವರ ಪುತ್ರ ಹೇಮಂತ್ ಎಂಬುದು ಗೊತ್ತಾಗಿದೆ. ಈ ಪ್ರಕರಣ ಏಳು ವರ್ಷಕ್ಕಿಂತ ಕೆಳಗಿನ ಅವಧಿಯ ಶಿಕ್ಷಾರ್ಹ ಅಪರಾಧವಾಗಿರುವ ಹಿನ್ನೆಲೆಯಲ್ಲಿ ಬಂಧಿತ ದೀಕ್ಷನ್, ವಿಖ್ಯಾತ್ ಮತ್ತು ಹೇಮಂತ್ಗೆ ಠಾಣಾ ಜಾಮೀನು ನೀಡಿ ನೊಟೀಸ್ ಜಾರಿಗೊಳಿಸಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ವಿಚಾರಣೆ ನಡೆಸಲಾಗುತ್ತಿದೆ:
ಇಂಡಸ್ ಮೊಬೈಲ್ ಟವರ್ ಸಂಸ್ಥೆಯ ಸೆಕ್ಯೂರಿಟಿ ಸೂಪರ್ ವೈಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಗಳೂರು ಕಾವೂರು ನಿವಾಸಿ ದಿನೇಶ್ ಕೆ. (53) ಎಂಬವರ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಳ್ತಂಗಡಿ ಬಂದಾರು ಗ್ರಾಮದಲ್ಲಿರುವ ಇಂಡಸ್ ಮೊಬೈಲ್ ಟವರ್ ಟೆಕ್ನಿಷಿಯನ್ ಆಗಿ ಕೆಲಸ ಮಾಡಿಕೊಂಡಿರುವ ದಿಕ್ಷೀತ್ ಎಂಬವರು ಆ. 23ರಂದು ರಾತ್ರಿ ವೇಳೆ ಟವರ್ ಪರಿಶೀಲನೆ ನಡೆಸುತ್ತಿದ್ದಾಗ ಸಮೀಪದ ರಸ್ತೆಯ ಹತ್ತಿರ ನಿಲ್ಲಿಸಿದ್ದ ಕಾರಿಗೆ ಮೂವರು ವ್ಯಕ್ತಿಗಳು 2 ಕ್ಯಾನ್ ಗಳಲ್ಲಿ ಡೀಸಿಲ್ ತುಂಬಿಸುತ್ತಿರುವುದನ್ನು ಕಂಡು ಕಾರಿನ ಬಳಿಗೆ ಹೋದಾಗ ಮೂವರು ಕಾರು ನಂಬ್ರ KA 20 D 7442 ರಲ್ಲಿ ಡೀಸಿಲ್ ಕ್ಯಾನ್ ಸಮೇತ ಓಡಿ ಹೋಗಿದ್ದಾರೆ. ಓಡಿ ಹೋದವರ ಪೈಕಿ ಓರ್ವ ಈ ಹಿಂದೆ ಸದ್ರಿ ಟವರ್ ನಲ್ಲಿ ಟೆಕ್ನೀಶಿಯನ್ ಆಗಿದ್ದ ದೀಕ್ಷನ್ ಎಂಬುದಾಗಿದ್ದು ಆತ ಹಾಗೂ ಇತರ ಇಬ್ಬರು ಸೇರಿ ಸುಮಾರು ರೂ 6,000/- ಮೌಲ್ಯದ ಸುಮಾರು 60 ಲೀಟರ್ ಡೀಸಿಲ್ ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿಅ.ಕ್ರ. 62/2026, ಕಲಂ 303(2) BNS-2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಆರೋಪಿ ದೀಕ್ಷಣ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.










