ಕಿಸಾನ್ ಸಮ್ಮಾನ್ ನಿಧಿ ಕಡಿತ, ಬೆಳೆ ವಿಮೆ ವಂಚನೆ: ಸರಕಾರದ ವಿರುದ್ಧ ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ

0

ಪುತ್ತೂರು: ರಾಜ್ಯದಲ್ಲಿ ಪ್ರಾಕೃತಿಕ ವಿಕೋಪ, ಸಾಲದ ಬಾಧೆ ಹಾಗೂ ಬೆಳೆ ನಷ್ಟದಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರೂ, ಸಂಕಷ್ಟದಲ್ಲಿರುವ ಅನ್ನದಾತರಿಗೆ ಪರಿಹಾರ ವಿತರಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಹಾಗೂ ವಂಚನೆ ಮಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪಿಸಿದ್ದಾರೆ.


ಇತ್ತೀಚೆಗೆ ವಿಧಾನಪರಿಷತ್ತಿನಲ್ಲಿ ರಾಜ್ಯದ ರೈತರ ಆತ್ಮಹತ್ಯೆ ಹಾಗೂ ಪರಿಹಾರ ವಿತರಣೆಗೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಕೃಷಿ ಸಚಿವರು ನೀಡಿರುವ ಲಿಖಿತ ಉತ್ತರವು ಸರ್ಕಾರದ ರೈತ ವಿರೋಧಿ ನೀತಿಯನ್ನು ಬಹಿರಂಗಪಡಿಸಿದೆ ಎಂದು ಅವರು ಹೇಳಿದ್ದಾರೆ.


ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 1,254, 2024-25ರಲ್ಲಿ 1,213 ಹಾಗೂ 2025-26ನೇ ಸಾಲಿನಲ್ಲಿ 1,081 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಮೂರು ವರ್ಷಗಳಲ್ಲಿ 3,500ಕ್ಕೂ ಅಧಿಕ ರೈತರು ಪ್ರಾಣ ಕಳೆದುಕೊಂಡಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ತಿಳಿಸಿದ್ದಾರೆ.

11 ವರ್ಷ ಹಳೆಯ ಪರಿಹಾರ ಮೊತ್ತ
2015ರ ನವೆಂಬರ್ 11ರಂದು ಹೊರಡಿಸಲಾದ ಸರ್ಕಾರಿ ಆದೇಶದಂತೆ ಕೃಷಿ ಸಾಲದ ಹೊರೆಯಿಂದ ಮೃತಪಟ್ಟ ರೈತರ ಕುಟುಂಬಗಳಿಗೆ ರೂ.5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಕೃಷಿ ವೆಚ್ಚ ಹಾಗೂ ಜೀವನ ನಿರ್ವಹಣೆಯ ಖರ್ಚುಗಳು ಗಣನೀಯವಾಗಿ ಹೆಚ್ಚಿರುವ ಇಂದಿನ ಪರಿಸ್ಥಿತಿಯಲ್ಲಿ ಪರಿಹಾರ ಮೊತ್ತವನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಕಿಶೋರ್ ಕುಮಾರ್ ಹೇಳಿದ್ದಾರೆ.

ಬಾಕಿ ಉಳಿದಿರುವ ಪರಿಹಾರ ಪ್ರಕರಣಗಳ ಮಾಹಿತಿಯನ್ನು ‘ಅನುಬಂಧ-3’ರಲ್ಲಿ ನೀಡಲಾಗಿದೆ ಎಂದು ಸರ್ಕಾರ ಉತ್ತರಿಸಿದ್ದರೂ, ಸದರಿ ಅನುಬಂಧ ದಾಖಲೆಗಳಲ್ಲಿ ಲಭ್ಯವಿಲ್ಲ. ಪರಿಹಾರ ವಿತರಣೆಯಲ್ಲಿನ ಲೋಪಗಳನ್ನು ಮುಚ್ಚಿಹಾಕುವ ಉದ್ದೇಶದಿಂದ ಈ ಮಾಹಿತಿ ನೀಡಲಾಗಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯದ ರೂ. 4 ಸಾವಿರ ಕಿಸಾನ್ ಸಮ್ಮಾನ್ ನೆರವು ಸ್ಥಗಿತ
ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ವಾರ್ಷಿಕ ರೂ.6 ಸಾವಿರ ನೆರವು ದೊರೆಯುತ್ತಿದೆ. ಇದರ ಜೊತೆಗೆ ಹಿಂದಿನ ರಾಜ್ಯ ಸರ್ಕಾರವು ರೂ.4 ಸಾವಿರ ಹೆಚ್ಚುವರಿ ನೆರವು ನೀಡುತ್ತಿತ್ತು. ಆದರೆ ಪ್ರಸ್ತುತ ಸರ್ಕಾರ ಈ ಹೆಚ್ಚುವರಿ ನೆರವನ್ನು ಸ್ಥಗಿತಗೊಳಿಸಿರುವುದು ರೈತರಿಗೆ ಅನ್ಯಾಯವಾಗಿದೆ ಎಂದು ಅವರು ಟೀಕಿಸಿದ್ದಾರೆ. ಅದೇ ರೀತಿ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ‘ರೈತ ವಿದ್ಯಾನಿಧಿ’ ಯೋಜನೆಯನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕೆಟ್ಟು ನಿಂತ ಮಳೆಮಾಪನ ಯಂತ್ರಗಳಿಂದ ಬೆಳೆ ವಿಮೆ ಸಮಸ್ಯೆ
ಕರಾವಳಿ ಹಾಗೂ ಮಲೆನಾಡು ಭಾಗದ ರೈತರು ಕೋವಿಡ್ ನಂತರ ಎಲೆಚುಕ್ಕೆ ರೋಗ, ಹಳದಿ ರೋಗ, ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಅತಿಯಾದ ಮಳೆಯಿಂದ ಬೆಳೆ ಹಾನಿಯಾಗುತ್ತಿದ್ದರೂ ಅನೇಕ ರೈತರಿಗೆ ಬೆಳೆ ವಿಮೆ ಪರಿಹಾರ ದೊರೆಯುತ್ತಿಲ್ಲ ಎಂದು ಕಿಶೋರ್ ಕುಮಾರ್ ಹೇಳಿದ್ದಾರೆ.

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ಪ್ರಮುಖ ಮಾನದಂಡವಾಗಿರುವ ಮಳೆಮಾಪನ ಯಂತ್ರಗಳು ಹಲವು ಕಡೆಗಳಲ್ಲಿ ಕೆಟ್ಟು ನಿಂತಿದ್ದು, ಅವುಗಳನ್ನು ಸಮಯಕ್ಕೆ ಸರಿಯಾಗಿ ದುರಸ್ತಿ ಮಾಡದಿರುವುದರಿಂದ ಮಳೆಯ ಪ್ರಮಾಣದ ದಾಖಲೆಗಳಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಪರಿಣಾಮವಾಗಿ ಬೆಳೆ ಹಾನಿಗೊಳಗಾದ ರೈತರಿಗೆ ವಿಮೆ ಪರಿಹಾರ ನಿರಾಕರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಕೆಟ್ಟು ನಿಂತಿರುವ ಮಳೆಮಾಪನ ಯಂತ್ರಗಳನ್ನು ತಕ್ಷಣ ದುರಸ್ತಿಪಡಿಸಬೇಕು, ಸ್ಥಗಿತಗೊಂಡಿರುವ ರೂ.4 ಸಾವಿರ ರಾಜ್ಯ ಕಿಸಾನ್ ಸಮ್ಮಾನ್ ನೆರವನ್ನು ಮರುಜಾರಿಗೊಳಿಸಬೇಕು. ರೈತರ ಆತ್ಮಹತ್ಯೆ ಪ್ರಕರಣಗಳ ಪರಿಹಾರ ಮೊತ್ತವನ್ನು ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚಿಸಿ, ಬಾಕಿ ಇರುವ ಎಲ್ಲ ಪ್ರಕರಣಗಳಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ರೈತರನ್ನು ಸಂಘಟಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಕಿಶೋರ್ ಕುಮಾರ್ ಪುತ್ತೂರು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here