






ಉಪ್ಪಿನಂಗಡಿ:ದ.ಕ. ಜಿಲ್ಲೆಯ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಉತ್ತಮ ಸೇವೆಯಿಂದ ಹೆಸರು ಪಡಕೊಂಡ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ 2025-26ನೇ ಸಾಲಿನಲ್ಲಿ 564 ಕೋಟಿ ವ್ಯವಹಾರ ನಡೆಸಿ, 4 ಕೋಟಿ 13 ಲಕ್ಷ 34 ಸಾವಿರದ 556.62 ಲಾಭ ಗಳಿಸಿರುತ್ತದೆ ಎಂದು ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು ತಿಳಿಸಿದರು.
ಗುರುವಾರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿ ಪ್ರಸಕ್ತ ಸಾಲಿನಲ್ಲಿ ಸಂಘವು ವಿವಿಧ ವ್ಯಾಪಾರಗಳಿಂದ 1 ಕೋಟಿ 41 ಲಕ್ಷ ರೂಪಾಯಿ ಲಾಭ ಗಳಿಸಿರುತ್ತದೆ. ಸಂಘದಲ್ಲಿ ವರ್ಷಾಂತ್ಯಕ್ಕೆ ಒಟ್ಟು 9217 ಸದಸ್ಯರಿದ್ದು 10.74 ಕೋಟಿ ಶೇರು ಬಂಡವಾಳವನ್ನು ಸಂಗ್ರಹಿಸಲಾಗಿದೆ. ಸಂಘವು ವರದಿ ಸಾಲಿನಲ್ಲಿ 109.73 ಕೋಟಿ ಠೇವಣಿ ಹೊಂದಿದ್ದು 172.61 ಕೋಟಿ ಹೊರ ಬಾಕಿ ಸಾಲ ಇರುತ್ತದೆ. ವರ್ಷಾಂತ್ಯದಲ್ಲಿ ಶೇಕಡಾ 97.94 ಸಾಲ ವಸೂಲಾತಿ ಆಗಿರುತ್ತದೆ. ಸಂಘದ ಕಾಯ್ದಿಟ್ಟ ನಿಧಿ ಮತ್ತು ಇತರ ನಿಧಿಗಳು 18.83 ಕೋಟಿ ಇರುತ್ತದೆ. ಸಂಘವು ಒಟ್ಟು 3.69 ಕೋಟಿ ಸ್ಥಿರಾಸ್ತಿಯನ್ನು ಹೊಂದಿರುತ್ತದೆ. ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಇದೇ ಭಾನುವಾರ ನೇತ್ರಾವತಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದರು.
46 ಮಂದಿಗೆ ಸುವರ್ಣ ಸಂಗಮ ನಿಧಿ:
ವರದಿ ಸಾಲಿನಲ್ಲಿ ಮೃತಪಟ್ಟ 37 ಸದಸ್ಯರ ವಾರಿಸುದಾರರಿಗೆ ರೂಪಾಯಿ 20,000/- ಮತ್ತು 9 ಸದಸ್ಯರ ವಾರಿಸುದಾರರಿಗೆ ರೂಪಾಯಿ 25,000/- ಸುವರ್ಣ ಸಂಗಮ ನಿಧಿ ಸೌಲಭ್ಯ ನೀಡಲಾಗುತ್ತದೆ. ವರದಿ ಸಾಲಿನಲ್ಲಿ ಒ ಟ್ಟು 46 ಮಂದಿ ಮೃತ ಸದಸ್ಯರ ವಾರೀಸುದಾರರಿಗೆ ರೂಪಾಯಿ 9,65,000/-ಮೊತ್ತವನ್ನು ನೀಡಲಾಗಿದೆ. ಸಂಘದ ಕೃಷಿ ಸಾಲಗಾರರನ್ನು “ಪಾಯಸ್” (ವೈಯಕ್ತಿಕ ಅಪಘಾತ ವಿಮೆ) ಮತ್ತು ಹವಾಮಾನ ಆಧಾರಿತ ಫಸಲ್ ಬಿಮಾ ಯೋಜನೆಗೆ ಒಳಪಡಿಸಿರುತ್ತೇವೆ. ಎಲ್ಲಾ ರೈತರ ಕೃಷಿ ಸಾಲಗಳ ಮೇಲೆ ಸಂಪೂರ್ಣ ಅಮೃತ ವಿಮಾ ಸೌಲಭ್ಯವನ್ನು 50:50 ಅನುಪಾತದಲ್ಲಿ ವಿಮಾ ಕಂತು ಪಾವತಿಯೊಂದಿಗೆ ನೂತನ ಯೋಜನೆಯನ್ನು ಪ್ರಾರಂಭಿಸಿರುತ್ತೇವೆ.
“ರೈತ ನಿಧಿ ಯೋಜನೆ”:
ಪ್ರಾಕೃತಿಕ ವಿಕೋಪದಿಂದ ಬಹಳಷ್ಟು ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ, ಆದರೆ ಸರ್ಕಾರ ಕೊಡುವ ಪರಿಹಾರ ಮೊತ್ತ ಅತೀ ಕಡಿಮೆ ಮತ್ತು ಅದು ಸಿಗುವಾಗ ಮತ್ತೊಂದು ವರ್ಷ ಆಗಿರುತ್ತದೆ. ಆದ ಕಾರಣ ರೈತರಿಗೆ ತಕ್ಷಣಕ್ಕೆ ಸಿಗುವ ರೀತಿಯಲ್ಲಿ ಸಂಘದಿಂದ ರೈತ ನಿಧಿ ಯೋಜನೆಯೊಂದನ್ನು ರೂಪಿಸಿ, ಕರ‍್ಯರೂಪಕ್ಕೆ ತರುವ ಚಿಂತನೆ ನಡೆಸಿದ್ದೇನೆ. ಮಹಾಸಭೆಯಲ್ಲಿ ಈ ಬಗ್ಗೆ ಬೈಲಾ ಸಿದ್ಧಪಡಿಸಿ, ನಿರ್ಣಯ ಅಂಗೀಕರಿಸಿ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಹಾಗೂ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ ಶೆಟ್ಟಿ ಪೂರಕ ಮಾಹಿತಿ ನೀಡಿದರು. ಉಪಾಧ್ಯಕ್ಷ
ದಯಾನಂದ ಸರೋಳಿ, ನಿರ್ದೇಶಕರುಗಳಾದ ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಸುಬ್ರಹ್ಮಣ್ಯ ಕುಮಾರ್ ಅಗರ್ತ, ವಸಂತ ಪಿ., ಶ್ರೀರಾಮ, ಸುಂದರ ಕೆ., ಉಷಾ ಮುಳಿಯ, ಸಂಧ್ಯಾ, ಗೀತಾ ಉಪಸ್ಥಿತರಿದ್ದರು.












