






ಸಾಮಾಜಿಕ ಜಾಲತಾಣದಲ್ಲಿ ಬಂದ್ ಕರೆ-ದಿನೇಶ್ ಪಂಜಿಗ ವಿರುದ್ದ ಬಲವಂತದ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ


ಪುತ್ತೂರು:ಇಲ್ಲಿನ ದರ್ಬೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಘಟನೆಗ ಸಂಬಂಧಿಸಿ ಧಾರ್ಮಿಕ ವೈಮನಸ್ಸು ಉಂಟಾಗುವಂತಹ ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕದಡುವಂತಹ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ಬಂದ್ಗೆ ಕರೆಕೊಟ್ಟ ಆರೋಪದಲ್ಲಿ ಪ್ರಕರಣ ದಾಖಲಾಗಿದ್ದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಮುಖಂಡ ದಿನೇಶ್ ಪಂಜಿಗ ಅವರ ವಿರುದ್ಧ ಮುಂದಿನ ಆದೇಶದ ತನಕ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ರಾಜ್ಯ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ.
ಪುತ್ತೂರು ದರ್ಬೆ ಎಂಬಲ್ಲಿನ ಅಂಗಡಿಯೊಂದರಲ್ಲಿ ಇತ್ತೀಚೆಗೆ ನಡೆದ ಗಲಾಟೆಗೆ ಸಂಬಂಧಿಸಿದಂತೆ, ದಿನೇಶ್ ಪಂಜಿಗ ಎಂಬ ವಾಟ್ಸಾಪ್ ಖಾತೆಯನ್ನು ಹೊಂದಿರುವ ವ್ಯಕ್ತಿಯು, ಸಾಮಾಜಿಕ ಜಾಲತಾಣದ (ವಾಟ್ಸಾಪ್) ಮೂಲಕ ಧಾರ್ಮಿಕ ವೈಮನಸ್ಸು ಉಂಟಾಗುವಂತಹ ಹಾಗೂ ಸಾರ್ವಜನಿಕ ವಲಯದಲ್ಲಿ ಭಯ ಉಂಟು ಮಾಡುವಂತಹ ಸಂದೇಶವನ್ನು ಪ್ರಸಾರ ಮಾಡುವ ಮೂಲಕ, ಬಂದ್ಗೆ ಕರೆಕೊಟ್ಟು, ಜನರು ಅಕ್ರಮಕೂಟ ಸೇರಿ ಕಾನೂನುಬಾಹಿರ ಕೃತ್ಯವೆಸಗಲು ದುಷ್ಪ್ರೇರಣೆ ನೀಡಿರುವುದು ಕಂಡುಬಂದಿದೆ.ಸದ್ರಿ ಸಂದೇಶವನ್ನು ಪ್ರಸಾರ ಮಾಡಿದ ದಿನೇಶ್ ಪಂಜಿಗ ಎಂಬ ವಾಟ್ಸಾಪ್ ಖಾತೆಯನ್ನು ಹೊಂದಿರುವ ದಿನೇಶ್ ಪಂಜಿಗ ಅವರ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 353(2),57,189ಬಿಎನ್ಎಸ್ 2023ರಂತೆ ಪ್ರಕರಣ(ಅ.ಕ್ರ.100/2026)ದಾಖಲಾಗಿತ್ತು.
ಹೈಕೋರ್ಟ್ ಮೊರೆ: ತನ್ನ ವಿರುದ್ಧ ದಾಖಲಾಗಿರುವ ಎ-ಐಆರ್ ರದ್ದುಪಡಿಸುವಂತೆ ಕೋರಿ ದಿನೇಶ್ ಪಂಜಿಗ ಅವರು ಕರ್ನಾಟಕ ಹೈಕೋರ್ಟ್ಗೆ ಕ್ರಿಮಿನಲ್ ರಿಟ್ ಅರ್ಜಿ ಸಲ್ಲಿಸಿದ್ದರು.ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಮುಂದಿನ ಆದೇಶದ ತನಕ ದೂರುದಾರ ದಿನೇಶ್ ಪಂಜಿಗ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪೊಲೀಸರಿಗೆ ನಿರ್ದೇಶನ ನೀಡಿ ಮಧ್ಯಂತರ ಆದೇಶ ನೀಡಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಆ.31ಕ್ಕೆ ಮುಂದೂಡಿದ್ದಾರೆ.ಪ್ರಕರಣದಲ್ಲಿ ದೂರುದಾರ ದಿನೇಶ್ ಪಂಜಿಗ ಅವರ ಪರವಾಗಿ ಹಿರಿಯ ವಕೀಲ ಅರುಣ್ಶ್ಯಾಂ ಪುತ್ತೂರು ವಾದಿಸಿದ್ದರು.ವಕೀಲ ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದರು.













