






ಪೊಲೀಸ್ ಜೀಪಿನೊಳಗೆ ನುಗ್ಗಿ ಹಲ್ಲೆಗೈದವರ ಮೇಲೆ ಏನು ಕ್ರಮಕೈಗೊಳ್ಳಲಾಗಿದೆ’ ದಾಖಲೆ ಸಮೇತ ವರದಿ ನೀಡಲು ಪೊಲೀಸರಿಗೆ ಹೈಕೋರ್ಟ್ ಸೂಚನೆ


ಪುತ್ತೂರು:ಇಲ್ಲಿನ ದರ್ಬೆಯಲ್ಲಿ ಕೆಲ ದಿನಗಳ ಹಿಂದೆ ನಡೆದಿರುವ ಅಹಿತಕರ ಘಟನೆ ಸಂದರ್ಭ ಪೊಲೀಸ್ ಜೀಪಿನೊಳಕ್ಕೆ ನುಗ್ಗಿ ಹಲ್ಲೆಗೈದವರ ವಿರುದ್ಧ ಯಾವ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಮತ್ತು ಇನ್ವೆಸ್ಟಿಗೇಶನ್ ಮಾಡಿ ಏನು ಕ್ರಮತೆಗೆದುಕೊಳ್ಳಲಾಗಿದೆ ಎಂದು ದಾಖಲೆ ಸಮೇತ ವರದಿ ನೀಡುವಂತೆ ಕರ್ನಾಟಕ ಹೈಕೋರ್ಟ್ ಪೊಲೀಸರಿಗೆ ಆದೇಶಿಸಿದೆ.
ದರ್ಬೆಯ ಲ್ಯಾಮಿನೇಶನ್ ಅಂಗಡಿಯಲ್ಲಿ ಲ್ಯಾಮಿನೇಶನ್ಗೆಂದು ನೀಡಲಾದ ದಾಖಲೆಯೊಂದಕ್ಕೆ ಹಾನಿಯಾದ ನಂತರದ ಬೆಳವಣಿಗೆಯಲ್ಲಿ ಅಲ್ಲಿ ಜನ ಸೇರಿ ಗಲಾಟೆ ನಡೆದಿತ್ತು.ಈ ಸಂಬಂಧ ಪೊಲೀಸರು ಅಂಗಡಿಯ ಮಾಲಕಿ ಅಂಜನಾ ಪೈ ಮತ್ತು ಅವರ ಮಗ ಸುದರ್ಶನ್ ಪೈ ವಿರುದ್ಧ ಕೊಲೆಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದರಲ್ಲದೆ ಆರೋಪಿ ಸುದರ್ಶನ್ ಪೈ ಅವರನ್ನು ಬಂಧಿಸಿದ್ದರು.
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಅಂಜನಾ ಪೈ ಮತ್ತವರ ಮಗ ಸುದರ್ಶನ್ ಪೈ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ಆ.27ರಂದು ನ್ಯಾಯಮೂರ್ತಿ ಎಂ.ನಾಗಪ್ಪಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬಂತು.ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ಶ್ಯಾಂ ಅವರು, ಈ ಪ್ರಕರಣದಲ್ಲಿ ಕೇಸ್-ಕೌಂಟರ್ ಕೇಸ್ ದಾಖಲಾಗಿದೆ. ಆದರೆ ಹಲ್ಲೆಗೊಳಗಾಗಿರುವ ದೂರುದಾರರಾದ ಅಂಜನಾ ಪೈ ಮತ್ತವರ ಮಗ ಸುದರ್ಶನ್ ಪೈ ಅವರ ವಿರುದ್ಧ ಪೊಲೀಸರು, ಕೊಲೆ ಯತ್ನದ ಗಂಭೀರ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆದರೆ ಗಲಾಟೆ ಸಂದರ್ಭದಲ್ಲಿ ಪೊಲೀಸ್ ಜೀಪಿನೊಳಗೇ ನುಗ್ಗಿ ಈ ಪ್ರಕರಣದ ದೂರುದಾರರ ಮೇಲೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿರುವವರ ವಿರುದ್ಧ ಲಘುವಾದ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.ಪೊಲೀಸರು ಇಲ್ಲಿ ಏಕಪಕ್ಷೀಯವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸ್ ಜೀಪಿನೊಳಗೆ ನುಗ್ಗಿ ಹಲ್ಲೆ ನಡೆಸಿದರೂ ಅವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿಲ್ಲ.ಬದಲಿಗೆ ಹಲ್ಲೆಗೊಳಗಾಗಿ ಗಾಯಗೊಂಡಿರುವವರ ಮೇಲೆಯೇ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಈ ರೀತಿಯ ಕ್ರಮ ಸರಿಯಲ್ಲ.ಅವರ ವಿರುದ್ಧವೂ ಅದೇ ರೀತಿಯ ಪ್ರಕರಣ ದಾಖಲಿಸಿಕೊಳ್ಳಬೇಕಾಗಿತ್ತು.ಕಾನೂನು ಎಲ್ಲರಿಗೂ ಒಂದೇ. ಎಲ್ಲರಿಗೂ ಸಮಾನ ನ್ಯಾಯ ನೀಡಬೇಕು.ಅದರ ಬದಲಿಗೆ ಪೊಲೀಸರು ಒನ್ಸೈಡೆಡ್ ಮಾಡಿದ್ದಾರೆ ಎಂದು ನ್ಯಾಯಪೀಠದ ಗಮನ ಸೆಳೆದರು.
ಈ ಕುರಿತು ಪೊಲೀಸರನ್ನು ತರಾಟೆಗೆತ್ತಿಕೊಂಡ ನ್ಯಾಯಪೀಠ, ಪೊಲೀಸರ ಎದುರೇ ಪೊಲೀಸ್ ಜೀಪಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆಂದಾರೆ ಇದು ಗಂಭೀರ ವಿಚಾರವಾಗಿದ್ದು ಅವರ ವಿರುದ್ಧ ಯಾವ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಮತ್ತು ಇನ್ವೆಸ್ಟಿಗೇಶನ್ ಮಾಡಿ ಏನು ಕ್ರಮಕೈಗೊಳ್ಳಲಾಗಿದೆ ಎಂದು ದಾಖಲೆ ಸಮೇತ ಆ.29ರಂದು ವರದಿ ನೀಡಬೇಕು ಎಂದು ಆದೇಶಿಸಿದೆ.ಮುಂದಿನ ವಿಚಾರಣೆ ಆ.29ರಂದು ನಡೆಯಲಿದೆ. ಈ ಪ್ರಕರಣದಲ್ಲಿ ವಕೀಲ ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದರು.













