






ಮಾತೆಯರಿಂದ ಸಾಮೂಹಿಕ ಪೂಜೆ; ಸನಾತನ ಪರಂಪರೆ ಉಳಿಸಿ ಬೆಳೆಸುವ ಸಂಕಲ್ಪಕ್ಕೆ ಕರೆ


ನೆಲ್ಯಾಡಿ : ಶ್ರೀರಾಮ ವಿದ್ಯಾಲಯ, ಶ್ರೀರಾಮ ಶಿಶು ಮಂದಿರ ನೆಲ್ಯಾಡಿ, ದೋಂತಿಲದ ಚಾಮುಂಡೇಶ್ವರಿ ಭಜನಾ ಮಂಡಳಿ ಹಾಗೂ ನೆಲ್ಯಾಡಿಯ ಮಾತೃ ಭಜನಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ 17ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ ಹಾಗೂ ಧಾರ್ಮಿಕ ಸಭೆ ಶುಕ್ರವಾರ ಶ್ರೀರಾಮ ವಿದ್ಯಾಲಯ, ಸೂರ್ಯನಗರ ನೆಲ್ಯಾಡಿಯಲ್ಲಿ ನಡೆಯಿತು.



ಬೆಂಗಳೂರು ನಿವೃತ್ತ ಉಪ ನರ್ಸಿಂಗ್ ಅಧೀಕ್ಷಕಿ ವಸಂತಿ ಆರ್.ಪಿ. ದಗ್ಗೋಡಿ ಅವರು ದೀಪ ಪ್ರಜ್ವಲಿಸುವ ಮೂಲಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆಗೆ ಚಾಲನೆ ನೀಡಿದರು. ಅನಂತ ಪದ್ಮನಾಭ ನೂಜಿನ್ನಾಯ ಹಾಗೂ ಶ್ರೀಧರ ನೂಜಿನ್ನಾಯ ಅವರು ವೈದಿಕ ವಿಧಿವಿಧಾನಗಳೊಂದಿಗೆ ಪೂಜಾ ಕಾರ್ಯವನ್ನು ನೆರವೇರಿಸಿದರು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಬೆಂಬಲಿಸಿದ್ದು, ತಾಯಂದಿರ ವಿಶೇಷ ಆಶೀರ್ವಾದ ತಮ್ಮ ಮೇಲಿರುವುದಾಗಿ ಹೇಳಿದರು.
ಹಿಂದುತ್ವ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಪ್ರಮುಖ ಆದ್ಯತೆ ನೀಡುವುದು ತಮ್ಮ ಬದ್ಧತೆಯಾಗಿದೆ. ಯಾವುದೇ ಒತ್ತಡ ಬಂದರೂ ಸತ್ಯ, ಧರ್ಮ ಮತ್ತು ನ್ಯಾಯದ ಮಾರ್ಗವನ್ನು ಬಿಟ್ಟು ಯಾವುದೇ ಕಾರಣಕ್ಕೂ ತಪ್ಪು ಹೆಜ್ಜೆ ಇಡುವುದಿಲ್ಲ. ಜಿಲ್ಲೆಯ ಅಭಿವೃದ್ಧಿಯೇ ತಮ್ಮ ಮೊದಲ ಗುರಿಯಾಗಿದ್ದು, ಸನಾತನ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಬದ್ಧರಾಗಿರುವುದಾಗಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ವಿಕಸಿತ ಭಾರತ ನಿರ್ಮಾಣದ ಕಲ್ಪನೆ ಸಾಕಾರಗೊಳ್ಳಲಿದೆ. ಸನಾತನ ಧರ್ಮದ ಸಾರವನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಕಾರ್ಯ ನಡೆಯಲಿದೆ. ತಾಯಂದಿರು ಮನಸ್ಸು ಮಾಡಿದರೆ ಸ್ವಚ್ಛ ಗ್ರಾಮ ಹಾಗೂ ಸ್ವಚ್ಛ ನೆಲ್ಯಾಡಿ ನಿರ್ಮಾಣ ಮಾಡಲು ಸಾಧ್ಯ ಹಾಗಾಗಿ ಎಲ್ಲ ಮಾತೆಯರು ಸಂಕಲ್ಪವನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಪುತ್ತೂರು ವಿವೇಕಾನಂದ ಬಿಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಶೋಭಿತಾ ಸತೀಶ್ ಅವರು ಧಾರ್ಮಿಕ ಉಪನ್ಯಾಸ ನೀಡಿ, ಹಿಂದೆ ಎಲ್ಲರೂ ಒಟ್ಟಾಗಿ ಸೇರಿ ಮನೆಯಲ್ಲಿ ಹಬ್ಬಗಳನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹಾಗೂ ಬಂಧುಗಳ ನಡುವೆ ಬಾಂಧವ್ಯ ಗಟ್ಟಿಯಾಗುತ್ತಿತ್ತು. ಆದರೆ ಆಧುನಿಕ ಜೀವನಶೈಲಿಯಿಂದಾಗಿ ಸಂಬಂಧಗಳ ಬೆಲೆ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದರು. ಎಲ್ಲರೂ ಒಗ್ಗಟ್ಟಿನಿಂದ ಸೇರಿ ಕೆಲಸ ಮಾಡಿದರೆ ಯಶಸ್ಸು ಖಚಿತ. ಭಗವಂತನಿಗಾಗಿ ಪ್ರಾಮಾಣಿಕವಾಗಿ ಸೇವೆ ಮಾಡುವಲ್ಲಿ ಭಗವಂತನ ಸಾನ್ನಿಧ್ಯವಿದೆ. ಭಾರತದ ಮಣ್ಣಿನಲ್ಲಿ ಬಾಂಧವ್ಯಗಳಿಗೆ ವಿಶೇಷ ಮಹತ್ವವಿದ್ದು, ಶಾಂತಿ, ನೆಮ್ಮದಿ ಹಾಗೂ ಐಶ್ವರ್ಯಕ್ಕಾಗಿ ಹಿಂದೂಗಳು ವಿಶಿಷ್ಟ ರೀತಿಯಲ್ಲಿ ಹಬ್ಬಗಳನ್ನು ಆಚರಿಸುತ್ತಾರೆ ಎಂದು ಹೇಳಿದರು.

ಹಬ್ಬಗಳು ವೈದಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕವಾಗಿ ಮಹತ್ವವನ್ನು ಹೊಂದಿವೆ. ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳುವ ಪ್ರಮುಖ ಮಾರ್ಗಗಳಲ್ಲಿ ಭಜನೆಯೂ ಒಂದಾಗಿದೆ. ಭಜನಾ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಭಾರತೀಯ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸಿ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿಯ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ ಹೊಸವಕ್ಲು ವಹಿಸಿ, ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಶ್ರೀರಾಮ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಮುರಳಿಧರ ಹಾಗೂ ಬೆಂಗಳೂರು ನಿವೃತ್ತ ಉಪ ನರ್ಸಿಂಗ್ ಅಧೀಕ್ಷಕಿ ವಸಂತಿ ಆರ್.ಪಿ. ದಗ್ಗೋಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಸನ್ಮಾನಿಸಲಾಯಿತು. ಭಾಗೀರಥಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ದೋಂತಿಲ ಚಾಮುಂಡೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು, ಶ್ರೀರಾಮ ವಿದ್ಯಾಲಯ ಮತ್ತು ಮಾತೃ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಶಾಲಾ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ, ಮುಖ್ಯಶಿಕ್ಷಕಿ ಕಾವ್ಯ, ಶಿಕ್ಷಕಿಯರು ಹಾಗೂ ಶ್ರೀ ವರಮಹಾಲಕ್ಷ್ಮಿ ವ್ರತಧಾರಿಗಳು ಉಪಸ್ಥಿತರಿದ್ದರು.










