ಸಂಪಾಜೆ ಪತಿ ಮನೆಯಲ್ಲಿ ಸಾರೆಪುಣಿಯ ಫಾತಿಮತ್ ನಿಶಾನ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು

0

ಕಾಣಿಯೂರು: ಸುಳ್ಯ ಸಂಪಾಜೆ ಕಡೆಪಾಲದಲ್ಲಿ ವಿವಾಹಿತ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರು ಆರೋಪಿಗಳಿಗೆ ಪುತ್ತೂರು ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


ಕುಂಬ್ರ ಸಮೀಪದ ಸಾರೆಪುಣಿ ನಿವಾಸಿ ಜುಬೈದಾ ಎಂಬವರ ಪುತ್ರಿ,ಸಂಪಾಜೆ ಕಡೆಪಾಲ ಆಲಿಗುಡ್ಡೆ ನಿವಾಸಿ ಸಿ.ಪಿ.ಅಳವಿ ಕುಟ್ಟಿ ಎಂಬವರ ಮಗ ಅನ್ಸಾರ್ ಎಂಬವರ ಪತ್ನಿ ಫಾತಿಮತ್ ನಿಶಾನ(22ವ.)ಅವರು ಜು.18ರಂದು ಪತಿ ಮನೆಯಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದರು.


ಮಗಳನ್ನು ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದ ತಾಯಿ:
‘ಮಗಳು ಫಾತಿಮತ್ ನಿಶಾನಳನ್ನು ನಾಲ್ಕು ವರ್ಷಗಳ ಹಿಂದೆ ಅನ್ಸಾರ್‌ಗೆ ಮದುವೆ ಮಾಡಿಕೊಡಲಾಗಿತ್ತು.ದಂಪತಿಗೆ ಒಂದು ಗಂಡು ಮಗುವಿದೆ.ಜು.18ರಂದು ರಾತ್ರಿ 8.35 ಗಂಟೆಗೆ ಮಗಳು ನನಗೆ ಕರೆ ಮಾಡಿ ಮಾತನಾಡಿದ್ದು, ನನಗೆ ಮಾವ ಅಲವಿ, ಅತ್ತೆ ಆಯಿಷ, ನಾದಿನಿ ಫಸೀಲಾ ಅವರು ಕಿರುಕುಳ ನೀಡುತ್ತಾ ಇದ್ದಾರೆ ಎಂದು ತಿಳಿಸಿದ್ದಳು.ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾರೆ ಎಂದೂ ತಿಳಿಸಿದ್ದಳು.ನಾನು ಸುಳ್ಯದ ಅರಂಬೂರು ಎಂಬಲ್ಲಿಗೆ ತಲುಪುವ ತನಕ ಮಗಳಲ್ಲಿ ಮಾತನಾಡುತ್ತಾ ಇದ್ದು, ಇದರ ಮಧ್ಯೆ ಮಗಳ ಕೈಯಿಂದ ಫೋನ್ ಕಸಿದುಕೊಂಡು ಮಗಳ ಮಾವ ನನ್ನಲ್ಲಿ ಮಾತನಾಡಿದ್ದು,ನಿನ್ನ ಮಗಳನ್ನು ಕರೆದುಕೊಂಡು ಹೋಗು.ಇಲ್ಲವಾದರೆ ನಾನು ಅವಳನ್ನು ಕೊಂದು ಜೈಲಿಗೆ ಹೋಗುತ್ತೇನೆ ಎಂದಿದ್ದು, ನಾವು ಅರಂಬೂರುನಿಂದ ಕಡೆಪಾಲಕ್ಕೆ ಹೋಗುವುದಕ್ಕಿಂತ ಮೊದಲು ಮಗಳನ್ನು ಕೊಂದು ಮನೆಯ ಹೊರಾಂಗಣದಲ್ಲಿ ಮಲಗಿಸಿದ್ದರು.ನಂತರ ಒಂದು ಆಂಬುಲೆನ್ಸ್‌ನಲ್ಲಿ ಕೆವಿಜಿ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ರಾತ್ರಿ 10.36ಕ್ಕೆ ಮಗಳು ಫಾತಿಮತ್ ನಿಸಾನಳನ್ನು ಪರಿಶೀಲಿಸಿದ ವೈದ್ಯಾಽಕಾರಿಗಳು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದರು.ನನ್ನ ಮಗಳ ಗಂಡ ಅನ್ಸಾರ್ ಬೆಂಗಳೂರಿನಲ್ಲಿದ್ದು ಆತನು ಆಕೆಯನ್ನು ಬೆಂಗಳೂರಿರಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದ.ನೀನು ಅವಳನ್ನು ಬೆಂಗಳೂರುಗೆ ಕರೆದುಕೊಂಡು ಹೋದರೆ ಮತ್ತೆ ಮನೆಗೆ ಬರಬಾರದು ಎಂದು ಬೆದರಿಸಿ ಮಗಳನ್ನು ಆಕೆಯ ಅತ್ತೆ,ಮಾವ ಮನೆಯಲ್ಲಿ ಇರಿಸಿಕೊಂಡರು.ನನ್ನ ಮಗಳನ್ನು ಆಕೆಯ ಮಾವ ಅಳವಿ,ಅತ್ತೆ ಆಯಿಷ ಹಾಗೂ ನಾದಿನಿ ಫಸೀಲ ಸೇರಿಕೊಂಡು ಕೊಂದಿರುವುದಾಗಿ’ಆರೋಪಿಸಿ ಜುಬೈದಾ ಅವರು ಪೊಲೀಸರಿಗೆ ದೂರು ನೀಡಿದ್ದರು.


ಘಟನೆಗೆ ಸಂಬಂಧಿಸಿ ಸುಳ್ಯ ಪೊಲೀಸರು ಕಲಂ 85,103(1) ಋ/ಢ 3(5)ಬಿಎನ್‌ಎಸ್ 2023ರಡಿ ಪ್ರಕರಣ ದಾಖಲಸಿಕೊಂಡು, ಪ್ರಕರಣದ ಆರೋಪಿಗಳಾಗಿ ಮೃತ ಫಾತಿಮತ್ ನಿಶಾನ ಅವರ ಮಾವ ಸಿ.ಪಿ.ಅಳವಿ(54ವ.),ಅತ್ತೆ ಆಯಿಷಾ ಸಿ.ಎ.(44ವ.)ಹಾಗೂ ನಾದಿನಿ ಫಸಿಲಾ ಸಿ.ಎ.(28ವ.)ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾದ ಆಯಿಷಾ ಸಿ.ಎ.ಮತ್ತು ಫಸಿಲಾ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ವಕೀಲರಾದ ಎಂ.ವೆಂಕಪ್ಪ ಗೌಡ,ಚಂಪಾ ವಿ.ಗೌಡ,ರಾಜೇಶ್ ಬಿ.ಜಿ.,ಶ್ಯಾಮ್‌ಪ್ರಸಾದ್ ಎನ್.ಕೆ.,ವಿಮಲೇಶ್ ಆರ್.ಗೌಡ ವಾದಿಸಿದ್ದರು.

LEAVE A REPLY

Please enter your comment!
Please enter your name here