ಬಜತ್ತೂರು ಶೌರ್ಯ ತಂಡದ ಮಾನವೀಯ ಸೇವೆ : ಬಡಮಹಿಳೆ ಜಾನಕಿ ಅವರಿಗೆ ನೂತನ ಮನೆ ಹಸ್ತಾಂತರ

0

ನೆಲ್ಯಾಡಿ: ಶೌರ್ಯ ವಿಪತ್ತು ನಿರ್ವಹಣಾ ತಂಡ ಉಪ್ಪಿನಂಗಡಿ ಬಜತ್ತೂರು ಘಟಕದ ವತಿಯಿಂದ ಬಜತ್ತೂರು ಗ್ರಾಮದ ಮಣ್ಣಿಮೇರು ಎಂಬಲ್ಲಿ ಏಕಾಂಗಿಯಾಗಿ ವಾಸ್ತವ್ಯವಿದ್ದ ಬಡ ಮಹಿಳೆ ಜಾನಕಿ ಎಂಬವರಿಗೆ ನಿರ್ಮಿಸಲಾದ ನೂತನ ಮನೆಯ ಹಸ್ತಾಂತರ ಸೆ.4ರಂದು ಬೆಳಗ್ಗೆ ನಡೆಯಿತು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಇದರ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ವಿಭಾಗದ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮನೆಯಲ್ಲಿ ಪೂಜಾ ಕಾರ್ಯಕ್ರಮ ನಡೆಸುವುದರ ಮಹತ್ವದ ಬಗ್ಗೆ ತಿಳಿಸಿದರು. ನೂತನ ಮನೆಯಲ್ಲಿ ಭಜನಾ ಕಾರ್ಯಕ್ರಮ ನಡೆಸಿ ಬಳಿಕ ಮನೆಯನ್ನು ಹಸ್ತಾಂತರಿಸಿರುವುದು ಅತ್ಯಂತ ಸಂತೋಷ ತಂದಿದೆ ಎಂದರು. ಗಣಪತಿಗೆ ಅಕ್ಕಿಯ ಮೇಲೆ ತೆಂಗಿನಕಾಯಿ ಇಡುವ ವಿಧಾನದ ಕುರಿತು ಹಾಗೂ ತೆಂಗಿನಕಾಯಿಯನ್ನು ಯಾವ ದಿಕ್ಕಿನಲ್ಲಿ ತಿರುಗಿಸಿ ಇಡುವುದರಿಂದ ಯಾವ ಯಾವ ದೇವತೆಗಳಿಗೆ ಸಂಬಂಧಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದ ವಿವೇಕ್ ವಿನ್ಸೆಂಟ್ ಪಾಯ್ಸ್ ಅವರು, ಶೌರ್ಯ ತಂಡವು ಮಾಡುತ್ತಿರುವ ಸೇವಾ ಕಾರ್ಯಗಳು ಜಿಲ್ಲೆಗೆ ಮಾದರಿಯಾಗಿವೆ. ಈ ತಂಡ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಿ ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದರು. ಜಾನಕಿ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.


ಮುಖ್ಯ ಅತಿಥಿಯಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ. ಮಾತನಾಡಿ, ಜಾನಕಿ ಅವರಿಗಾಗಿ ಮನೆ ನಿರ್ಮಾಣ ಕಾರ್ಯದಲ್ಲಿ ಸೇವೆ ಸಲ್ಲಿಸಿದ ಹಾಗೂ ಸಹಕರಿಸಿದ ಎಲ್ಲರಿಗೂ ಶುಭ ಹಾರೈಸಿ, ತಂಡದ ಸಮಾಜಮುಖಿ ಸೇವಾ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ ಎಂದು ಹೇಳಿದರು. ಇನ್ನೋರ್ವ ಅತಿಥಿ ವಳಾಲು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ ವಳಾಲು ದಡ್ಡು ಮಾತನಾಡಿ, ಶೌರ್ಯ ತಂಡವು ಬಜತ್ತೂರು ಗ್ರಾಮದಲ್ಲಿ ಅತ್ಯುತ್ತಮವಾದ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ತಂಡದ ಸಾಧನೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.


ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸೇವಾ ಸಮಿತಿಯ ನಾರಾಯಣ ಪೂಜಾರಿ ನೀರಕಟ್ಟೆ, ತುಳುನಾಡ ತುಡರ್ ಆರೋಗ್ಯ ಸೇವಾ ಟ್ರಸ್ಟ್‌ನ ಕೋಶಾಧಿಕಾರಿ ಸುಮನ್ ನೀರಕಟ್ಟೆ, ಬಜತ್ತೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಪಂರ್ದಾಜೆ, ಮಾಜಿ ಸದಸ್ಯೆ ಚಂಪಾ, ಪ್ರಗತಿಬಂಧು ಸ್ವಸಹಾಯ ಸಂಘಗಳ ಕಾಂಚನ ಒಕ್ಕೂಟದ ಅಧ್ಯಕ್ಷ ದಿನೇಶ್ ಮೇಲೂರು ಉಪಸ್ಥಿತರಿದ್ದರು. ಜಗದೀಶ್ ಬಾರಿಕೆ ನಿರೂಪಿಸಿದರು.

ಸೇವಾ ಸದಸ್ಯರಿಗೆ ಗೌರವ
ಮನೆ ನಿರ್ಮಾಣ ಕಾರ್ಯದಲ್ಲಿ ಶ್ರಮ ಹಾಗೂ ಸೇವೆಯನ್ನು ನೀಡಿ ಸಹಕರಿಸಿದ ಹೃದಯವಂತ ಶೌರ್ಯ ತಂಡದ ಸದಸ್ಯರಾದ ಮಮತಾ ಆಲಾಜೆ, ಮನೋಜ್ ಮಣಿಕ್ಕಳ, ಸುಜಾತಾ ರೆಂಜಾಳ, ಬೇಬಿ ಬಾರಿಕೆ, ಗೋಪಾಲ ಬಾರಿಕೆ, ಸದಾನಂದ ಶಿಬಾರ್ಲ, ಸುರೇಶ್ ಶಿಬಾರ್ಲ, ಹರೀಶ್ ಓರಂಬೋಡಿ, ರವೀಂದ್ರ ಓರಂಬೋಡಿ, ವಾಸಪ್ಪ ಹಿರೇಬಂಡಾಡಿ, ಭವ್ಯ ಪಂಜಳ, ವಾಸುದೇವ್ ರೆಂಜಾಳ, ರಾಜೇಶ್ ಪಿಜಕ್ಕಳ, ಇಂದಿರಾ ಪೊರೊಳಿ, ಗ್ರಾಮಸ್ಥರಾದ ಹರೀಶ್ ಪೆಲತ್ರೋಡಿ, ಸತೀಶ್ ರೆಂಜಾಳ ಅವರ ಸೇವೆಯನ್ನು ಸ್ಮರಿಸಲಾಯಿತು. ಸೇವೆ ಸಲ್ಲಿಸಿದ ಶೌರ್ಯ ತಂಡದ ಸದಸ್ಯರಿಗೆ ನೆನಪಿನ ಕಾಣಿಕೆ ಹಾಗೂ ಸ್ಮರಣಿಕೆ ನೀಡಿ ಗೌರವಿಸಿ, ಅವರ ಸೇವಾ ಮನೋಭಾವಕ್ಕೆ ಅಭಿನಂದನೆ ಸಲ್ಲಿಸಲಾಯಿತು. ಮನೆ ನಿರ್ಮಾಣಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ದಾನಿಗಳಿಗೆ, ಹಿತೈಷಿಗಳಿಗೆ ಶೌರ್ಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

ಒಬ್ಬಂಟಿ ತಾಯಿಯ ಬದುಕಿಗೆ ಸುರಕ್ಷಿತ ನೆಲೆಯಾಗಿ ರೂಪುಗೊಂಡಿರುವ ಈ ನೂತನ ಮನೆ ಕೇವಲ ಕಟ್ಟಡವಲ್ಲ, ಸಮಾಜದ ಸಹೃದಯತೆ, ಸೇವಾ ಮನೋಭಾವ, ಒಗ್ಗಟ್ಟು ಹಾಗೂ ಮಾನವೀಯತೆಯ ಪ್ರತೀಕವಾಗಿದೆ. ಶೌರ್ಯ ತಂಡದ ಸದಸ್ಯರು, ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ಜಾನಕಿ ಅವರ ಬದುಕಿನಲ್ಲಿ ಹೊಸ ಭರವಸೆಯ ಬೆಳಕು ಮೂಡಿದೆ.

LEAVE A REPLY

Please enter your comment!
Please enter your name here