






ಪುತ್ತೂರು: ಪ್ರಸ್ತಾವಿತ ಬೆಂಗಳೂರು–ಮಂಗಳೂರು ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲಿಗೆ ದಕ್ಷಿಣ ಕನ್ನಡದ ಗ್ರಾಮೀಣ ಭಾಗದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಕಬಕ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ನೀಡಬೇಕೆಂದು ಆಗ್ರಹಿಸಿ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದಾರೆ.


ಪ್ರಸ್ತುತ ರೈಲಿನ ಸಂಚಾರ ವೇಳಾಪಟ್ಟಿ ಹಾಗೂ ನಿಲ್ದಾಣಗಳನ್ನು ಅಂತಿಮಗೊಳಿಸುವ ನಿರ್ಣಾಯಕ ಹಂತದಲ್ಲಿದ್ದು, ಪುತ್ತೂರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರ ಬಹುದೊಡ್ಡ ಬೇಡಿಕೆಗೆ ಸ್ಪಂದಿಸಿರುವ ಶಾಸಕರು, ಕಬಕ ಪುತ್ತೂರು ನಿಲ್ದಾಣವನ್ನು ಸೇರ್ಪಡೆಗೊಳಿಸುವಂತೆ ಕೇಂದ್ರ ಸಚಿವರ ಗಮನ ಸೆಳೆದಿದ್ದಾರೆ.



ನಾಲ್ಕು ತಾಲೂಕುಗಳ ಜೀವನಾಡಿ:
ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ನಿಲ್ದಾಣದ ಮಹತ್ವವನ್ನು ವಿವರಿಸಿರುವ ಕಿಶೋರ್ ಕುಮಾರ್, “ಈ ನಿಲ್ದಾಣವು ಕೇವಲ ಪುತ್ತೂರಿಗೆ ಸೀಮಿತವಾಗಿರದೆ ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳ ಜನರಿಗೂ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಸುಮಾರು 8.88 ಲಕ್ಷ ಜನಸಂಖ್ಯೆ ಹೊಂದಿರುವ ಈ ಭಾಗದ ಅಪಾರ ಸಂಖ್ಯೆಯ ಐಟಿ ಉದ್ಯೋಗಿಗಳು, ವ್ಯಾಪಾರಸ್ಥರು, ವಿದ್ಯಾರ್ಥಿಗಳು ಹಾಗೂ ನೌಕರರು ಪ್ರತಿನಿತ್ಯ ಬೆಂಗಳೂರಿನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಹಾಗಾಗಿ ಈ ಪ್ರೀಮಿಯಂ ರೈಲಿನ ನಿಲುಗಡೆಗೆ ಕಬಕ ಪುತ್ತೂರು ಅತ್ಯಂತ ಸೂಕ್ತ,” ಎಂದು ಪ್ರತಿಪಾದಿಸಿದ್ದಾರೆ.
ಆರ್ಥಿಕ ಲಾಭ ಹಾಗೂ ಪ್ರವಾಸೋದ್ಯಮಕ್ಕೆ ಪೂರಕ:
ಐತಿಹಾಸಿಕ ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯ ಸೇರಿದಂತೆ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಈ ನಿಲುಗಡೆ ಅನುಕೂಲವಾಗಲಿದೆ. ಜೊತೆಗೆ, ಹೆಚ್ಚಿನ ಪ್ರಯಾಣಿಕರ ದಟ್ಟಣೆ ದೊರೆತು ಭಾರತೀಯ ರೈಲ್ವೆಗೂ ಆರ್ಥಿಕ ಲಾಭ ತಂದುಕೊಡಲಿದೆ ಎಂದು ಅವರು ವಿವರಿಸಿದ್ದಾರೆ.
ಸಾರ್ವಜನಿಕರ ಹೋರಾಟಕ್ಕೆ ಬೆಂಬಲ:
ಇತ್ತೀಚೆಗೆ ‘ಪುತ್ತೂರು–ಸುಬ್ರಹ್ಮಣ್ಯ ರೈಲು ಬಳಕೆದಾರರ ಸಮಿತಿ’ ಹಾಗೂ ಸಾರ್ವಜನಿಕರು ನಡೆಸಿದ ಆನ್ಲೈನ್ ಸಹಿ ಅಭಿಯಾನಕ್ಕೆ 4,000ಕ್ಕೂ ಅಧಿಕ ಮಂದಿ ಬೆಂಬಲ ಸೂಚಿಸಿದ್ದರು. ಬಿಜೆಪಿ ಸಮಾವೇಶದ ನಿಮಿತ್ತ ಬಳ್ಳಾರಿಯಲ್ಲಿದ್ದಾಗಲೂ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಸಹಿ ಅಭಿಯಾನದ ತಂಡದೊಂದಿಗೆ ವರ್ಚುವಲ್ ಸಭೆ ನಡೆಸಿದ್ದ ಶಾಸಕ ಕಿಶೋರ್ ಕುಮಾರ್, ಸಾರ್ವಜನಿಕರ ಬೇಡಿಕೆಗೆ ಧ್ವನಿಯಾಗುವ ಭರವಸೆ ನೀಡಿ ಇದೀಗ ಸಚಿವರಿಗೆ ಮನವಿ ರವಾನಿಸಿದ್ದಾರೆ.










