ಗೋಳಿತ್ತೊಟ್ಟು: ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

0

ಯೋಜನೆ ಜಾರಿಯಾದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಅಡ್ಡಿ; ಕಿಶೋರ್ ಶಿರಾಡಿ

ನೆಲ್ಯಾಡಿ: ಮಲೆನಾಡು ಜನಹಿತ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಇದರ ಆಶ್ರಯದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ ಸೆ.8ರಂದು ಬೆಳಗ್ಗೆ ಗೋಳಿತ್ತೋಟ್ಟು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ನಡೆಯಿತು.


ಪ್ರತಿಭಟನಾ ಸಭೆ ಉದ್ದೇಶಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅವರು ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆಯುತ್ತಿದೆ. ಇದೊಂದು ಗಂಭೀರ ವಿಚಾರವಾಗಿದ್ದು ಪಶ್ಚಿಮ ಘಟ್ಟ ಪ್ರದೇಶ ಸೂಕ್ಷ್ಮ ವಲಯ ಎಂದು ಘೋಷಣೆಯಾದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಅಡ್ಡಿಯಾಗಲಿದೆ. ರಸ್ತೆ ಸಂಚಾರವೂ ಬಂದ್ ಆಗುವುದರಿಂದ ಕುಗ್ರಾಮವಾಗಲಿದೆ. ಇದಕ್ಕೆ ಶಾಶ್ವತ ಪರಿಹಾರ ಸಿಗಬೇಕೆಂಬ ನಿಟ್ಟಿನಲ್ಲಿ ಈ ಸಲ ಹೋರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ಕಸ್ತೂರಿ ರಂಗನ್ ವರದಿ ಜಾರಿ ಬೇಡ ಎಂದು ಈ ಭಾಗದ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಬೇಕು. ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯ ದಿಡುಪೆಯಿಂದ ಮಡಪ್ಪಾಡಿ ತನಕ ಗಡಿ ಗುರುತು ಮಾಡಿ ಪಶ್ಚಿಮ ಘಟ್ಟ ಹಾಗೂ ಜನವಸತಿ ಪ್ರದೇಶ ಪ್ರತ್ಯೇಕಗೊಳಿಸಬೇಕು. ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಈ ತಿಂಗಳ ಕೊನೆಯಲ್ಲಿ ಕಡಬದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯಲಿದೆ. ಮುಂದೆ ಜನವರಿ ತಿಂಗಳಲ್ಲಿ ಸಹಾಯಕ ಆಯುಕ್ತರ ಕಚೇರಿ ಚಲೋ ಹಾಗೂ ಆ ಬಳಿಕ ಗುಂಡ್ಯದಲ್ಲಿ ಪ್ರತಿಭಟನೆ ನಡೆಸಲಾಗುವುದು. ಇಲ್ಲಿಗೆ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಸರಕಾರದ ಮುಖ್ಯ ಕಾರ್ಯದರ್ಶಿಗಳು ಬಂದು ಮನವಿ ಸ್ವೀಕರಿಸಬೇಕು. ಅವರು ಬಾರದೇ ಇದ್ದಲ್ಲಿ ಜೈಲ್ ಭರೋ ಚಳವಳಿ ನಡೆಸಲಾಗುವುದು. ಇದೊಂದು ರೈತ ಚಳವಳಿ ಆಗುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು.


ಗ್ರಾಮಸ್ಥ ನಾಸೀರ್ ಹೊಸಮನೆ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಇದರ ಕಡಬ ತಾಲೂಕು ಸಮಿತಿ ಸದಸ್ಯ ಕುಶಾಲಪ್ಪ ಗೌಡ ಅನಿಲ, ಗೋಳಿತ್ತೊಟ್ಟು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ಮಾಜಿ ಸದಸ್ಯ ನೀಲಪ್ಪ ನಾಯ್ಕ್ ಅಲಂಗಪೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯಂತ ಅಂಬರ್ಜೆ ಸ್ವಾಗತಿಸಿ, ನಿರೂಪಿಸಿದರು. ಬಾಲಕೃಷ್ಣ ಆಲಂತಾಯ ವಂದಿಸಿದರು. ಪ್ರತಿಭಟನಾ ಸಭೆ ಬಳಿಕ ಯೋಜನೆ ವಿರುದ್ಧ ಗ್ರಾ.ಪಂ.ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಲಿತಾ ಜಿ.ಡಿ.ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷ ಜನಾರ್ದನ ಪಟೇರಿ, ಮಾಜಿ ಉಪಾಧ್ಯಕ್ಷ ಪ್ರಸಾದ್ ಕೆ.ಪಿ.ಸುಲ್ತಾಜೆ, ಮಾಜಿ ಸದಸ್ಯರಾದ ಶಿವಪ್ರಸಾದ್ ಶಿವಾರು, ಪದ್ಮನಾಭ, ಬಾಲಕೃಷ್ಣ ಅಲೆಕ್ಕಿ,
ಗೋಳಿತ್ತೊಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೊರಗಪ್ಪ ಗೌಡ ಕಲ್ಲಡ್ಕ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಾಬು ನಾಯ್ಕ್, ಮಾಜಿ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್, ಗ್ರಾಮದ ಪ್ರಮುಖರಾದ ಗೋಪಾಲ ಗೌಡ ಕುದ್ಕೋಳಿ, ಪುರುಷೋತ್ತಮ ಕುದ್ಕೋಳಿ, ಶ್ರೀಕಾಂತ ಶಿರಾಡಿ, ಸುಂದರ ಶೆಟ್ಟಿ ಪುರ, ಪ್ರವೀಣ್ ಭಂಡಾರಿ ಪುರ, ಶೇಖರ ಗೌಡ ಅನಿಲಬಾಗ್, ತಾರನಾಥ ಬಳಕ, ಸುಭಾಷ್ ಶೆಟ್ಟಿ, ಉಮೇಶ್ ಆಚಾರ್ಯ ಹಲಸಿನಕಟ್ಟೆ, ಶ್ರೀನಿವಾಸ ಪ್ರಸಾದ್ ಮುದನ್, ನಾಗೇಶ್ ಸಮರಗುಂಡಿ, ರಮೇಶ್ ಕೆ.ಬಿ., ಜನಾರ್ದನ ಶಾಂತಿಮಾರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here