ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಪಾದರಕ್ಷೆ ತೆಗೆದಿಡುವ ಸೂಚನಾ ಫಲಕ – ಆಕ್ರೋಶ

0

ಉಪ್ಪಿನಂಗಡಿ: ದೇಶದ ಪ್ರಧಾನಿ, ರಾಷ್ಟ್ರಪತಿಯವರ ಕಚೇರಿಗೂ ಪಾದರಕ್ಷೆಯೊಂದಿಗೆ ಪ್ರವೇಶಿಸಲು ಅವಕಾಶವಿರುವಾಗ ಉಪ್ಪಿನಂಗಡಿಯ ಗ್ರಾಮ ಪಂಚಾಯತ್ ಪಿಡಿಒ ಕಚೇರಿಗೆ ಪ್ರವೇಶಿಸಲು ಪಾದರಕ್ಷೆಯನ್ನು ತೆಗೆದು ಪ್ರವೇಶಿಸಬೇಕೆಂದು ಸೂಚನಾ ಫಲಕ ಹಾಕಿರುವುದು ಸರಿಯಲ್ಲ ಹಿರಿಯ ಸಾಮಾಜಿಕ ಕಾರ್ಯಕರ್ತ ಮಹೇಂದ್ರವರ್ಮ ಜೈನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಈ ಬಗ್ಗೆ ಮಾಧ್ಯಮ ಪ್ರತಿನಿಽಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ನೆಲೆಯಲ್ಲಿ ದೇವಾಲಯ, ಬಸದಿ , ಮಸೀದಿಯಂತಹ ಧಾರ್ಮಿಕ ಸ್ಥಳಗಳಲ್ಲಿ ಪಾದರಕ್ಷೆಯನ್ನು ಹೊರಗಿಟ್ಟು ಪ್ರವೇಶಿಸುವ ನಿಯಮವಿದೆ. ದೇಶದ ಅತ್ಯುನ್ನತ ಆಡಳಿತ ಸ್ಥಾನದ ಕಚೇರಿಯಲ್ಲಿ ಕೂಡಾ ಪಾದರಕ್ಷೆಯೊಂದಿಗೆ ಪ್ರವೇಶಿಸಲು ಅವಕಾಶವಿದೆ. ಆದರೆ ಉಪ್ಪಿನಂಗಡಿಯ ಪಂಚಾಯತ್ ಕಚೇರಿಯಲ್ಲಿ ಪಿಡಿಒ ಕಚೇರಿಯನ್ನು ಪ್ರವೇಶಿಸಲು ನಾಗರಿಕರಿಗೆ ಪಾದರಕ್ಷೆಯನ್ನು ಕಳಚಿಟ್ಟು ಪ್ರವೇಶಿಸಲು ಸೂಚಿಸುವ ಫಲಕ ಅಳವಡಿಸಿದ್ದು, ಗ್ರಾಮದ ಗ್ರಾಮಸ್ಥರನ್ನು ಕೀಳಾಗಿ ಕಾಣುವ ನಡೆಯಾಗಿದೆ. ಕಚೇರಿಯೊಳಗೆ ಪಂಚಾಯತ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಪಾದರಕ್ಷೆ ಧರಿಸಲು ಅವಕಾಶವಿರುವಾಗ ಗ್ರಾಮಸ್ಥರ ಪಾದರಕ್ಷೆಯನ್ನು ಕಳಚಿಸುವ ನಡೆ ನಾಗರಿಕ ಸಮಾಜಕ್ಕೆ ಶೋಭಿಸದು. ಪಂಚಾಯತ್ ಕಚೇರಿ ಗ್ರಾಮಸ್ಥರ ಆಸ್ತಿ. ಅಲ್ಲಿ ಗ್ರಾಮಸ್ಥರನ್ನೇ ಕೀಳಾಗಿ ನೋಡುವುದನ್ನು ಸಹಿಸಲಾಗದು. ಈ ತಾರತಮ್ಯವನ್ನು ಹೋಗಲಾಡಿಸದಿದ್ದರೆ. ಹೋರಾಟ ಅನಿವಾರ್ಯವೆಂದು ಅವರು ಎಚ್ಚರಿಸಿದ್ದಾರೆ.

ಸ್ವಚ್ಚತೆಗಾಗಿ ವಿನಂತಿಪೂರ್ವಕ ಸೂಚನೆ ಅದು: ಪಿಡಿಒ
ಈ ಬಗ್ಗೆ ಗ್ರಾ.ಪಂ. ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೊಡ್ರಿಗಸ್‌ರವರನ್ನು ಸಂಪರ್ಕಿಸಿದಾಗ ಮಳೆಗಾಲದಲ್ಲಿ ಚಪ್ಪಲಿಯೊಂದಿಗೆ ಕೆಸರು ಕಚೇರಿಯೊಳಗೆ ಬರುವ ಕಾರಣಕ್ಕೆ ವಿನಂತಿ ಪೂರ್ವಕ ಸೂಚನೆಯನ್ನು ಅಳವಡಿಸಲಾಗಿತ್ತು. ಇದು ಕಡ್ಡಾಯ ಅಂತ ಅಲ್ಲ. ಮುಂದಕ್ಕೆ ಈ ಕಚೇರಿಯು ಅಧ್ಯಕ್ಷ , ಉಪಾಧ್ಯಕ್ಷರ ಕಚೇರಿಯಾಗಿ ಬಳಕೆಯಾಗಲಿದೆ ಎಂದು ತಿಳಿಸಿದ್ದಾರೆ.


ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು: ಸಿಇಒ
ಉಪ್ಪಿನಂಗಡಿ ಪಂಚಾಯತ್ ಕಚೇರಿಯ ಪಿಡಿಒ ಕಚೇರಿಗೆ ಪ್ರವೇಶಿಸಲು ಚಪ್ಪಲಿ ತೆಗೆದು ಪ್ರವೇಶಿಸುವ ಸೂಚನಾ ಫಲಕ ಅಳವಡಿಸಿರುವ ಬಗ್ಗೆ ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಽಕಾರಿಯವರನ್ನು ಸಂಪರ್ಕಿಸಿದಾಗ, ಇದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here