






ಪುತ್ತೂರು:ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ವ್ಯವಸ್ಥಾಪನಾ ಸಮಿತಿಯ ಕಾರ್ಯವೈಖರಿ ಕುರಿತು ಕೇಳಿಬರುತ್ತಿರುವ ಆರೋಪಗಳಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸ್ಪಷ್ಟನೆ ನೀಡಿದ್ದಾರೆ.ದೇವಳದಲ್ಲಿ ವ್ಯವಸ್ಥಾಪನಾ ಸಮಿತಿ ಸಭೆಯ ಬಳಿಕ ಅವರು ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದರು.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಪ್ರಶ್ನಿಸಬಹುದು.ಆದರೆ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಕುರಿತು ವಾಸ್ತವಾಂಶ ತಿಳಿದುಕೊಳ್ಳುವುದು ಅಗತ್ಯ.ವ್ಯವಸ್ಥಾಪನಾ ಸಮಿತಿ ರಚನೆಯಾದ ಬಳಿಕ ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ಹಾಗೂ ಭಕ್ತರ ಸಹಕಾರದೊಂದಿಗೆ ದೇವಸ್ಥಾನದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ದೇವರ ಪೂಜಾ ಕಾರ್ಯಗಳು, ದೇವಸ್ಥಾನದ ಜಾಗಗಳ ಮರುಸ್ವಾಧಿನ, ಅನ್ನಪ್ರಸಾದ ವ್ಯವಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ.ಈ ಬದಲಾವಣೆಗಳಿಗೆ ಶೇ.98ರಷ್ಟು ಭಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದ್ದು,ಕೆಲವೇ ಮಂದಿ ಅಸಮಾಧಾನ ವ್ಯಕ್ತಪಡಿಸುತ್ತಿರಬಹುದು ಎಂದು ಈಶ್ವರ ಭಟ್ ಹೇಳಿದರು.



‘ಭಕ್ತರೇ ನೀಡಿದ ಅಕ್ಕಿ; ವ್ಯವಸ್ಥೆಗೆ ಜನಬೆಂಬಲ’
ಮಹಾಲಿಂಗೇಶ್ವರ ದೇವಸ್ಥಾನದ ಅನ್ನಪ್ರಸಾದ ವ್ಯವಸ್ಥೆಗೆ ಭಕ್ತರಿಂದಲೇ ಉತ್ತಮ ಸಹಕಾರ ದೊರೆಯುತ್ತಿದೆ.ಭಕ್ತರಲ್ಲಿ ಅಕ್ಕಿಗಾಗಿ ಮನವಿ ಮಾಡಿದ ಬಳಿಕ ಪ್ರಸ್ತುತ ಸುಮಾರು 50 ಲಕ್ಷ ರೂ. ಮೌಲ್ಯದ ಅಕ್ಕಿ ಭಕ್ತರಿಂದಲೇ ದೇವಸ್ಥಾನಕ್ಕೆ ಬರುವ ವ್ಯವಸ್ಥೆ ನಿರ್ಮಾಣವಾಗಿದೆ.ದೇವಸ್ಥಾನದ ಕಾರ್ಯಗಳಿಗೆ ಭಕ್ತರ ಬೆಂಬಲವಿದೆ ಎಂಬುದಕ್ಕೆ ಇದು ಸಾಕ್ಷಿ.ಅದೇ ರೀತಿ ಸ್ವರ್ಣ ಕವಚಕ್ಕಾಗಿ 520 ಗ್ರಾಂ ಚಿನ್ನವನ್ನು ಈಗಾಗಲೇ ಭಕ್ತರು ನೀಡಿದ್ದಾರೆ.ದಾನಿಗಳಿಂದ ಸ್ವೀಕರಿಸುವ ಚಿನ್ನ ಹಾಗೂ ಇತರ ದೇಣಿಗೆಗಳ ವಿವರಗಳನ್ನು ಪ್ರತಿದಿನದ ಲೆಕ್ಕಪತ್ರ ಪುಸ್ತಕದಲ್ಲಿ ದಾಖಲಿಸಲಾಗುತ್ತದೆ. ದಾನಿಗಳಿಗೆ ರಶೀದಿಯನ್ನೂ ನೀಡಲಾಗುತ್ತಿದೆ.ಪ್ರಸ್ತುತ 520 ಗ್ರಾಂ ಚಿನ್ನ ದೇವಸ್ಥಾನದ ಲಾಕರ್ನಲ್ಲಿಯೇ ಸುರಕ್ಷಿತವಾಗಿದೆ ಎಂದು ಈಶ್ವರ ಭಟ್ ತಿಳಿಸಿದರು.
‘ದೇವಸ್ಥಾನದ ಜಾಗ ವಶಕ್ಕೆ ಪಡೆಯುತ್ತಿರುವುದೇ ಕೆಲವರ ಆತಂಕಕ್ಕೆ ಕಾರಣ’:
ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಕುರಿತು ಆಪಾದನೆ ಮಾಡುವವರ ಹಿಂದೆ ಬೇರೆ ಯಾರದ್ದೋ ಕೈವಾಡವಿದೆ.ಆದರೆ ದೇವಳದ ಅಭಿವೃದ್ದಿ ವಿಚಾರದಲ್ಲಿ ಯಾವ ಆಪಾದನೆಗೂ ಜಗ್ಗುವುದಿಲ್ಲ.ದೇವಸ್ಥಾನದ, ಸುಮಾರು 80 ಕೋಟಿ ರೂ.ಮೌಲ್ಯದ 11 ಎಕರೆ ಜಾಗವನ್ನು ಈಗಾಗಲೇ ದೇವಳದ ವಶಕ್ಕೆ ಪಡೆಯಲಾಗಿದೆ.ದೇವಳದ ಕೋಟ್ಯಂತರ ರೂ.ಮೌಲ್ಯದ ಜಾಗ ಇನ್ನೂ ಕೆಲವರ ವಶದಲ್ಲಿದ್ದು,ಸುಮಾರು 10 ಕೋಟಿ ರೂ. ಮೌಲ್ಯದ ಜಾಗವನ್ನು ಶೀಘ್ರದಲ್ಲೇ ದೇವಸ್ಥಾನದ ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ.ದೇವಸ್ಥಾನದ ಜಾಗ ತಮ್ಮ ಕೈತಪ್ಪುವ ಆತಂಕದಿಂದ ಕೆಲವರು ವ್ಯವಸ್ಥಾಪನಾ ಸಮಿತಿಯ ವಿರುದ್ಧ ಅಪಪ್ರಚಾರ ನಡೆಸಿ, ಸಮಿತಿಯನ್ನು ಕೆಳಗಿಳಿಸುವ ಉದ್ದೇಶದಿಂದ ಸಮಾಜದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ ಎಂದು ಆರೋಪಿಸಿದ ಈಶ್ವರ ಭಟ್, ಮಹಾಲಿಂಗೇಶ್ವರ ದೇವರ ಜಾಗವನ್ನು ನಮ್ಮ ಸಮಿತಿ ಇರುವ ತನಕ ಯಾರಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಜೀರ್ಣೋದ್ಧಾರ ಕಾರ್ಯಗಳಿಗೆ ಯಾರೇ ಅಡ್ಡಿಪಡಿಸಿದರೂ ನಾವು ಹೆದರುವುದಿಲ್ಲ.ಜೀರ್ಣೋದ್ಧಾರ ಕೆಲಸವನ್ನು ಮಾಡಿಯೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
2028ಕ್ಕೆ ಬ್ರಹ್ಮಕಲಶ:
ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಮುಂದುವರಿಯಲಿದ್ದು, 2028ರಲ್ಲಿ ಬ್ರಹ್ಮಕಲಶೋತ್ಸವ ನಡೆಸುವ ನಿಟ್ಟಿನಲ್ಲಿ ತಂತ್ರಿಗಳು ದಿನಾಂಕ ನಿಗದಿಪಡಿಸಲಿದ್ದಾರೆ.ಈ ಮಹತ್ವದ ಕಾರ್ಯಕ್ಕೆ ಎಲ್ಲ ಭಕ್ತರೂ ಸಹಕಾರ ನೀಡಬೇಕು ಎಂದು ಅಧ್ಯಕ್ಷ ಈಶ್ವರ ಭಟ್ ಅವರು ಮನವಿ ಮಾಡಿದರು.ದೇವಸ್ಥಾನದ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರವೇ ನಮ್ಮ ಉದ್ದೇಶ.ಯಾವುದೇ ಅಪಪ್ರಚಾರಗಳಿಗೆ ಭಕ್ತರು ಕಿವಿಗೊಡದೆ ವಾಸ್ತವಾಂಶವನ್ನು ಅರಿತು ಸಹಕರಿಸಬೇಕು ಎಂದು ಈಶ್ವರ ಭಟ್ ಹೇಳಿದರು.ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.










