







ಉಪ್ಪಿನಂಗಡಿ: ಲೋಕಾಯುಕ್ತ ತಂಡವು ಉಪ್ಪಿನಂಗಡಿ ಗ್ರಾ.ಪಂ. ಕಚೇರಿಗೆ ಕಡತಗಳ ಪರಿಶೀಲನೆಗೆಂದು ಬುಧವಾರದಂದು ಆಗಮಿಸಿದ್ದು, ಈ ಸಂದರ್ಭ ಸಂತ್ರಸ್ತ ವರ್ತಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಇಲ್ಲಿ ನಡೆಯುತ್ತಿರುವ ವ್ಯಾಪಕ ಅವ್ಯವಹಾರ, ಭ್ರಷ್ಟಾಚಾರಗಳ ಬಗ್ಗೆ ಲಿಖಿತ ದೂರನ್ನು ಸಲ್ಲಿಸಿದ ಘಟನೆ ನಡೆದಿದೆ.


ದೂರುಗಳ ಸುರಿಮಳೆ:
ಲೋಕಾಯುಕ್ತ ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್ ಹಾಗೂ ಲೋಕಾಯುಕ್ತ ಇನ್ಸ್ಪೆಕ್ಟರ್ ಭಾರತಿ ನೇತೃತ್ವದ ಲೋಕಾಯುಕ್ತ ತಂಡವು ಗ್ರಾ.ಪಂ.ಗೆ ಭೇಟಿ ನೀಡಿ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಿತು. ಗ್ರಾ.ಪಂ.ಗೆ ಲೋಕಾಯುಕ್ತ ತಂಡ ಬಂದಿರುವ ಸುದ್ದಿ ತಿಳಿದ ಕೂಡಲೇ ಸಂತ್ರಸ್ತ ವರ್ತಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಗ್ರಾ.ಪಂ.ನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಪಿಡಿಒ ವಿರುದ್ಧ ಲೋಕಾಯುಕ್ತ ತಂಡಕ್ಕೆ ಲಿಖಿತ ದೂರು ನೀಡಿದರು.



ಪಂಜಳದ ಶಾಲಿವಾಹನ ಫ್ಯೂಯೆಲ್ಸ್ನ ಮಾಲಕ ಚಂದ್ರಶೇಖರ ತಾಳ್ತಜೆಯವರು, ತನ್ನ ಪೆಟ್ರೋಲ್ ಪಂಪ್ನ ಪರವಾನಿಗೆಯನ್ನು ನವೀಕರಣ ಮಾಡಿಕೊಡುತ್ತಿಲ್ಲ. ನವೀಕರಣಕ್ಕೆ ಅರ್ಜಿಯನ್ನು ಕೂಡಾ ಗ್ರಾ.ಪಂ.ನಲ್ಲಿ ತೆಗೆದುಕೊಳ್ಳುತ್ತಿಲ್ಲ. ಹಲವು ತಿಂಗಳಿನಿಂದ ಇದಕ್ಕಾಗಿ ನಾನು ಅಲೆದಾಡುತ್ತಿದ್ದೇನೆ. ಅಲ್ಲದೇ, ನನ್ನ ಮಾಲಕತ್ವದ ಕಟ್ಟಡಗಳ ತೆರಿಗೆಯನ್ನು ಕೂಡಾ ಗ್ರಾ.ಪಂ.ನಲ್ಲಿ ತಗೊಳ್ತಾ ಇಲ್ಲ. ಸಿಬ್ಬಂದಿಗಳಲ್ಲಿ ಈ ಬಗ್ಗೆ ವಿಚಾರಿಸಿದರೆ ಪಿಡಿಒ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದಾರೆ ಎನ್ನುತ್ತಾರೆ. ಅವರು ಕೇಳಿದಷ್ಟು ಲಂಚ ಕೊಟ್ಟರೆ ಮಾತ್ರ ಇಲ್ಲಿ ಕೆಲಸಗಳು ನಡೆಯುತ್ತವೆ ಎಂದು ಲೋಕಾಯುಕ್ತ ಡಿವೈಎಸ್ಪಿ ಅವರಲ್ಲಿ ತಿಳಿಸಿದರು.
ಉಲ್ಲಾಸ್ ಬಾರ್ನ ಕರುಣಾಕರ ಸುವರ್ಣ ಅವರು, ನಾನು 1987ರಿಂದ ಉಪ್ಪಿನಂಗಡಿಯಲ್ಲಿ ಉಲ್ಲಾಸ್ ಬಾರ್ ನಡೆಸಿಕೊಂಡು ಬರುತ್ತಿದ್ದೇನೆ. ಆದರೆ ಈ ಬಾರಿ ಅದರ ಪರವಾನಿಗೆ ನವೀಕರಣ ಗ್ರಾ.ಪಂ. ಮಾಡಿಕೊಡುತ್ತಿಲ್ಲ. ಅದಕ್ಕೆ ಅರ್ಜಿಯನ್ನು ಕೂಡಾ ತೆಗೆದುಕೊಳ್ಳುತ್ತಿಲ್ಲ ಎಂದು ತನ್ನ ದೂರಿನಲ್ಲಿ ತಿಳಿಸಿದರು.
ನಿರಾಲ ಬಾರ್ನ ನವೀನ ರೈಯವರು ಕೂಡಾ ಅವರ ಮಾಲಕತ್ವದ ನಿರಾಲ ಬಾರ್ನ ಲೈಸನ್ಸ್ ನವೀಕರಣ ಮಾಡಿಕೊಡುತ್ತಿಲ್ಲ ಎಂದು ದೂರಿದರು. ಕಾರ್ತಿಕ್ ಬಾರ್ನ ಆದಿತ್ಯ ಭಟ್ ಅವರು ಕೂಡಾ ಬಾರ್ ಆಂಡ್ ರೆಸ್ಟೋರೆಂಟ್ನ ಪರವಾನಿಗೆ ನವೀಕರಣ ಮಾಡದಿರುವ ಬಗ್ಗೆ ದೂರು ನೀಡಿದರು.
ರಹಿಮಾನ್ ಪೊರುಂಕಾಜೆಯವರು ಉಪ್ಪಿನಂಗಡಿಯಲ್ಲಿ ಈ ಹಿಂದೆ ಏಲಂ ಆದ ಗ್ರಾ.ಪಂ. ಕಟ್ಟಡಗಳನ್ನು ಅವಧಿ ಮುಗಿದ ಬಳಿಕ ಏಲಂ ನಡೆಸದೇ ಕೊಠಡಿ ಪಡೆದವರಿಂದ ಲಂಚ ತೆಗೆದುಕೊಂಡು ಅವರಿಗೆ ಆ ಕೊಠಡಿಯನ್ನು ಮಾಡಿಕೊಡುವುದು, ತ್ಯಾಜ್ಯ ಘಟಕದ ಅವ್ಯವಸ್ಥೆಯ ಬಗ್ಗೆ ಹಾಗೂ ನಿಯಮಬಾಹಿರವಾಗಿ ನಿರ್ಮಾಣವಾದ ಕಟ್ಟಡಗಳ ಬಗ್ಗೆಯೂ ದೂರನ್ನಿತ್ತರಲ್ಲದೆ, ಕೆಲವು ಬಾರಿ ರಾತ್ರಿ ಸಮಯದಲ್ಲಿ ಪಿಡಿಒ, ಒಂದೆರಡು ಸಿಬ್ಬಂದಿ ಹಾಗೂ ಕೆಲವು ಮಧ್ಯವರ್ತಿಗಳು ಗ್ರಾ.ಪಂ.ನಲ್ಲಿ ಮೀಟಿಂಗ್ ನಡೆಸುತ್ತಿರುವ ಕುರಿತು ಆರೋಪಿಸಿದರು. ಈ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಲು ಆಗ್ರಹಿಸಿದರು.
ಹಲವು ಮಂದಿ ವರ್ತಕರು ಕೂಡಾ ಈ ಸಂದರ್ಭ ಗ್ರಾ.ಪಂ.ಗೆ ಆಗಮಿಸಿ ಇಲ್ಲಿನ ಅವ್ಯವಹಾರಗಳು, ಪರವಾನಿಗೆ ನವೀಕರಣಕ್ಕೆ ಲಂಚಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಎಳೆಎಳೆಯಾಗಿ ಲೋಕಾಯುಕ್ತರ ಮುಂದೆ ಬಿಚ್ಚಿಟ್ಟರು.
ಸಿಬ್ಬಂದಿಗೆ ತರಾಟೆ:
ದೂರುಗಳನ್ನು ಆಲಿಸಿದ ಲೋಕಾಯುಕ್ತ ಡಿವೈಎಸ್ಪಿಯವರು ಗ್ರಾ.ಪಂ. ಸಿಬ್ಬಂದಿಯವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಯಾವುದೇ ಅರ್ಜಿಗಳನ್ನು ತೆಗೆದು ಅದಕ್ಕೆ ಬೇಕಾದ ಹಿಂಬರಹ ಕೊಡೋದು ನಿಮ್ಮ ಕರ್ತವ್ಯ. ಪಿಡಿಒ ಅರ್ಜಿ ತಗೆದುಕೊಳ್ಳಬೇಡಿ ಎನ್ನಲು ಯಾರು? ಅರ್ಜಿ ಕೊಡಲು ಬರುವವರಿಂದ ಅರ್ಜಿ ಪಡೆದು, ಅದಕ್ಕೆ ಹಿಂಬರಹ ಕೊಡುವುದು ನಿಮ್ಮ ಜವಾಬ್ದಾರಿ. ನಿಮ್ಮ ಕರ್ತವ್ಯವನ್ನು ನೀವು ಮಾಡಬೇಕು ಎಂದರಲ್ಲದೆ, ಆ ಸಂದರ್ಭ ಅಲ್ಲಿ ಬಂದ ದೂರುದಾರರಲ್ಲಿದ್ದ ಅರ್ಜಿಗಳನ್ನು ತಕ್ಷಣವೇ ಓನ್ಲೈನ್ನಲ್ಲಿ ಅಪ್ಲೋಡ್ ಮಾಡಿ ಹಿಂಬರಹ ನೀಡಬೇಕೆಂದು ಸೂಚಿಸಿದರು.
ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಪಿಡಿಒ ಹೇಳದೇ ಯಾವುದೇ ಕೆಲಸಗಳನ್ನು ಸಿಬ್ಬಂದಿಯು ಮಾಡುತ್ತಿಲ್ಲ. ಲಂಚ ಕೊಟ್ಟರೆ ಮಾತ್ರ ಅಂತವರ ಕೆಲಸ ಮಾಡಿ ಎಂದು ಪಿಡಿಒ ಹೇಳುತ್ತಾರೆ. ಇಲ್ಲದಿದ್ದಲ್ಲಿ ಅರ್ಜಿಗಳನ್ನು ಕೂಡಾ ಇಲ್ಲಿನ ಸಿಬ್ಬಂದಿ ತೆಗೆದುಕೊಳ್ಳುವುದಿಲ್ಲ. ಪಿಡಿಒ ಅವರೊಂದಿಗೆ ಭ್ರಷ್ಟಾಚಾರದಲ್ಲಿ ಒಂದಿಬ್ಬರು ಮಾಜಿ ಗ್ರಾ.ಪಂ. ಸದಸ್ಯರು, ಓರ್ವ ಉದ್ಯಮಿ, ಕೆಲ ಗ್ರಾ.ಪಂ. ಸಿಬ್ಬಂದಿಯೂ ಭಾಗಿಯಾಗಿದ್ದಾರೆ. ಈ ಬಗ್ಗೆಯೂ ಸಮಗ್ರ ತನಿಖೆ ನಡೆಸಿ ಎಂದು ಸಂತ್ರಸ್ತರು ಲೋಕಾಯುಕ್ತ ತಂಡಕ್ಕೆ ಮನವಿ ಮಾಡಿದರಲ್ಲದೆ, ಇಲ್ಲಿನ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಲೋಕಾಯುಕ್ತ ತಂಡ ಗ್ರಾ.ಪಂ.ಗೆ ಬೆಳಗ್ಗೆ ಬಂದಾಗ ಇಲ್ಲಿನ ಪ್ರಭಾರ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಮಾತ್ರ ಕಚೇರಿಯಲ್ಲಿ ಇರಲಿಲ್ಲ. ಬಳಿಕ ಲೋಕಾಯುಕ್ತ ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್ ರವರು ಪಿಡಿಒ ಅವರನ್ನು ಸ್ಥಳಕ್ಕೆ ಕರೆಸಿದರು.
ಸಂಜೆ ಅಹವಾಲು ಸ್ವೀಕಾರ:
ಹಲವು ಜನರಿಂದ ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಆರೋಪಗಳು ಕೇಳಿ ಬಂದಾಗ, ಸಂಜೆ 4 ಗಂಟೆಗೆ ಸಾರ್ವಜನಿಕರ ಅಹವಾಲು ಆಲಿಸಲು ಸಮಯ ಲೋಕಾಯುಕ್ತ ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್ರವರು ಅವಕಾಶ ನೀಡಿದರು. ಅದರಂತೆ ಸಂಜೆ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮನೆಗೆ ಡೋರ್ ನಂಬ್ರ ಕೊಡಲು ವಿಕಲಚೇತನ ವ್ಯಕ್ತಿಯಿಂದ ಒಂದು ಲಕ್ಷ ರೂ. ಲಂಚ ಪಡೆದಿದ್ದಾರೆಂಬ ಆರೋಪ, ಪಂಚಾಯತ್ ನಿಂದ ನಡೆಯುವ ಸಣ್ಣ ಕೆಲಸಕ್ಕೂ ಭಾರೀ ಮೊತ್ತದ ಲಂಚದ ಹಣಕ್ಕೆ ಬೇಡಿಕೆ. ಲಂಚದ ಹಣವನ್ನು ಪಡೆಯಲು ಪಿಡಿಒ ನಿಂದ ದಲ್ಲಾಳಿಗಳ ನಿಯುಕ್ತಿ, ಲಂಚದ ಹಣ ಪಾವತಿಸದಿದ್ದರೆ ಅರ್ಜಿ ಸ್ವೀಕಾರಕ್ಕೆ ನಕಾರ . ಪರಿಶಿಷ್ಠ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆಂದು ಮೀಸಲಾದ ಪಂಚಾಯತ್ ಆದಾಯದ ಶೇ. 25 ರ ನಿಧಿಯನ್ನು ದುರ್ಬಳಕೆ ಮಾಡಿರುವುದು, ದೀರ್ಘ ಕಾಲದ ಕರ್ತವ್ಯವಾಧಿಯನ್ನು ಫೂರೈಸಿ ವರ್ಗಾವಣೆಗೊಂಡಿದ್ದರೂ ಪ್ರಭಾರ ನೆಲೆಯಲ್ಲಿ ಮತ್ತೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ನಲ್ಲಿಯೇ ಉಳಿದಿರುವುದು, ಅದಕ್ಕೆ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯ ಬೆಂಬಲ ಲಭಿಸುತ್ತಿರುವುದು, ಅರಿವು ಕೇಂದ್ರ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆ, ಪಿಡಿಒ ರವರನ್ನು ಪ್ರಶ್ನಿಸಿದಾಗಲೆಲ್ಲಾ ಅಟ್ರಾಸಿಟಿ ಕೇಸು ದಾಖಲಿಸಿ ಬೆದರಿಸುವುದು, ಲಂಚದ ಮೊತ್ತ ನೀಡಲಿಲ್ಲವೆಂದು ಮನೆ ತೆರಿಗೆ ಹಾಗೂ ವಾಣಿಜ್ಯ ಪರವಾನಿಗೆ ನವೀಕರಣ ಅರ್ಜಿ ಸ್ವೀಕರಿಸದಿರುವುದು, ಪಿಡಿಒ ಒಪ್ಪಿಗೆ ಇಲ್ಲದೆ ಒಂದೂ ಅರ್ಜಿಯನ್ನೂ ಸ್ವೀಕರಿಸದಿರುವ ನಿಯಮ ಅನುಷ್ಠಾನದಲ್ಲಿರುವುದು ಮೊದಲಾದ ದೂರುಗಳು ಒಬ್ಬರ ಮೇಲೊಬ್ಬರಂತೆ ಸಲ್ಲಿಸಲ್ಪಟ್ಟಿತ್ತು.
ಲೋಕಾಯುಕ್ತ ತಂಡಕ್ಕೆ ದೂರು ನೀಡಿದವರಲ್ಲಿ ದೊಡ್ಡ ಮಟ್ಟದ ಉದ್ಯಮಿಗಳು, ವರ್ತಕರಿಂದ ಹಿಡಿದು ಸಾಮಾನ್ಯ ಗೃಹಿಣಿಯರೂ ಒಳಗೊಂಡಿದ್ದರು. ಮಹೇಂದ್ರವರ್ಮ, ಯು.ರಾಮ, ಜಯಂತ ಪೊರೋಳಿ, ಸೋಮನಾಥ, ಸಂದೇಶ್, ಅಬ್ದುಲ್ ರಹಿಮಾನ್ , ಕಲಂದರ್, ಅಬೂಬಕ್ಕರ್, ಸುಧಾಕರ ಶೆಟ್ಟಿ , ವಾರಿಜ ಶೆಟ್ಟಿ, ವಿನಾಯಕ ಪೈ, ವಿಶಾಲಕ್ಷಿ ಮಠ ಮತ್ತಿತರರು ಭಾಗವಹಿಸಿ, ಲೋಕಾಯುಕ್ತ ತಂಡಕ್ಕೆ ಅಹವಾಲುಗಳನ್ನು ಸಲ್ಲಿಸಿದರು.
34 ನೆಕ್ಕಿಲಾಡಿ ಗ್ರಾ.ಪಂ.ಗೂ ಭೇಟಿ
34 ನೆಕ್ಕಿಲಾಡಿ ಗ್ರಾ.ಪಂ.ಗೂ ಭೇಟಿ ನೀಡಿದ ಲೋಕಾಯುಕ್ತ ತಂಡ ಅಲ್ಲಿಯೂ ಕಡತಗಳ ಪರಿಶೀಲನೆಯನ್ನು ನಡೆಸಿತು. ಬೆಳಗ್ಗೆ ಬಂದ ತಂಡ ಸಂಜೆ ನಾಲ್ಕೂವರೆಯ ತನಕ ಪಂಚಾಯತ್ನಲ್ಲಿ ಕಡತ ಪರಿಶೀಲನೆಯಲ್ಲಿ ತೊಡಗಿಸಿಕೊಂಡಿತ್ತು.












