ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಎಐಸಿಸಿ ನೇಮಕ ಮಾಡಿದೆ.

ಸಂಸದ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಪ್ರಕಟಣೆ ಹೊರಡಿಸಿದ್ದು, ಈ ನೇಮಕ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

‘ಸಂಘಟನ್ ಸೃಜನ ಅಭಿಯಾನ’ದ ಭಾಗವಾಗಿ ಈ ನೇಮಕಾತಿ ಮಾಡಲಾಗಿದೆ. ಅಭಿಯಾನದಡಿ ಪ್ರತಿ ಜಿಲ್ಲೆಗೆ ನಿಯೋಜಿಸಲಾದ ಎಐಸಿಸಿ ವೀಕ್ಷಕರು ವಿವರವಾದ ಪರಿಶೀಲನೆ ನಡೆಸಿ, ಪಕ್ಷದ ಪದಾಧಿಕಾರಿಗಳು ಹಾಗೂ ಇತರರೊಂದಿಗೆ ಸಮಾಲೋಚಿಸಿ ಸಮಗ್ರ ವರದಿ ಸಲ್ಲಿಸಿದ್ದಾರೆ. ವರದಿ ಬಳಿಕ ವೈಯಕ್ತಿಕ ಸಮಾಲೋಚನೆ ಮತ್ತು ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿ ಅಂತಿಮಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪದ್ಮರಾಜ್ ಹಿನ್ನೆಲೆ:
​ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಿಂದ ಬಿಎ, ಎಲ್ಎಲ್‌ಬಿ ಪದವಿ ಪಡೆದಿರುವ ಪದ್ಮರಾಜ್ ಪೂಜಾರಿ ಅವರು ವೃತ್ತಿಯಲ್ಲಿ ವಕೀಲರು ಹಾಗೂ ನೋಟರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ ಇವರು, 2024ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿ ಗಮನ ಸೆಳೆದಿದ್ದರು.
ಮಂಗಳೂರಿನ ಪ್ರಸಿದ್ಧ ಐತಿಹಾಸಿಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿ ಸುದೀರ್ಘ ಕಾಲದಿಂದ ಸಾಮಾಜಿಕ, ಧಾರ್ಮಿಕ ಹಾಗೂ ಸಮುದಾಯ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕರಾವಳಿ ಭಾಗದಲ್ಲಿ ಸೌಹಾರ್ದತೆಯ ಕೊಂಡಿಯಾಗಿ ಜನಪ್ರಿಯತೆ ಹೊಂದಿದ್ದಾರೆ.


ಪಕ್ಷ ಸಂಘಟನೆಗೆ ಹೊಸ ಚೈತನ್ಯ:
​ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು, ಕಾರ್ಯಕರ್ತರನ್ನು ಒಗ್ಗೂಡಿಸಲು ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಹಾಗೂ ಸಾರ್ವತ್ರಿಕ ಚುನಾವಣೆಗಳಿಗೆ ಪಕ್ಷವನ್ನು ಬಲಪಡಿಸಲು ಪದ್ಮರಾಜ್ ಪೂಜಾರಿ ಅವರ ನೇಮಕವು ಪ್ರಮುಖ ತಿರುವು ನೀಡಲಿದೆ ಎಂದು ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here