ಉಪ್ಪಿನಂಗಡಿ ಗ್ರಾ.ಪಂ.: ಹಲವು ದೂರುಗಳ ಹಿನ್ನೆಲೆ – ಮಧ್ಯರಾತ್ರಿಯವರೆಗೆ ನಡೆದ ಲೋಕಾಯುಕ್ತ ಪರಿಶೀಲನೆ

0

ಉಪ್ಪಿನಂಗಡಿ: ಕಡತ ಪರಿಶೀಲನೆಗೆಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಚೇರಿಗೆ ಬಂದಿದ್ದ ದ.ಕ ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳ ತಂಡಕ್ಕೆ ಗ್ರಾಮಸ್ಥರಿಂದ ವ್ಯಕ್ತಗೊಂಡ ಭಾರೀ ಪ್ರಮಾಣದ ದೂರಿನ ಕಾರಣ ಬುಧವಾರ ಮಧ್ಯ ರಾತ್ರಿಯವರೆಗೆ ಪರಿಶೀಲನಾ ಕಾರ್ಯಾಚರಣೆ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಸಲ್ಪಟ್ಟಿತ್ತು.


ಲೋಕಾಯುಕ್ತ ಡಿವೈಎಸ್ಪಿ ಡಾ. ಗಾನಾ ಪಿ. ಕುಮಾರ್ ನೇತೃತ್ವದ ಲೋಕಾಯುಕ್ತ ತಂಡದೊಂದಿಗೆ ದಿನವೀಡಿ ಗ್ರಾಮಸ್ಥರು ಪಿಡಿಒ ನಡವಾಳಿಯನ್ನು ಆಕ್ಷೇಪಿಸಿ ಲಿಖಿತ ದೂರು ಸಲ್ಲಿಸಿದ್ದರಿಂದ ಗ್ರಾ.ಪಂ.ನಲ್ಲಿ ಕಡತ ಪರಿಶೀಲನೆಯನ್ನು ಮುಂದುವರೆಸುತ್ತಾ ಮಧ್ಯರಾತ್ರಿ 12.30 ರ ತನಕ ಅವರ ತಂಡ ಕಾರ್ಯನಿರ್ವಹಿಸಿತು. ಗ್ರಾಮಸ್ಥರ ದೂರುಗಳ ಬಗ್ಗೆ ಕಚೇರಿಯೊಳಗಿನ ಪ್ರಶ್ನಾವಳಿಯ ಸಂದರ್ಭದಲ್ಲಿ ವ್ಯಕ್ತಗೊಂಡ ನಡವಳಿಕೆಯನ್ನು ಪರಿಗಣಿಸಿ ಡಿವೈಎಸ್ಪಿಯವರು , ಪಂಚಾಯತ್ ಎನ್ನುವುದು ಜನ ಸಾಮಾನ್ಯರಿಗೆ ಸುಲಭದಲ್ಲಿ ಎಟಕುವ ಸಂಸ್ಥೆ. ಇಲ್ಲಿ ಅಧಿಕಾರದ ದರ್ಪ, ಅಹಂಕಾರ ಪ್ರದರ್ಶಿಸಲ್ಪಟ್ಟರೆ ಸಮಸ್ಯೆ ಸೃಷ್ಟಿಯಾಗುವುದು ನಿಶ್ಚಿತ . ಅಹಂಕಾರ ಬಿಟ್ಟು ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸಿ ಜನರ ಮನಸ್ಸನ್ನು ಗೆಲ್ಲಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಕಿವಿ ಮಾತು ಹೇಳಿದರು.


ಲೋಕಾಯುಕ್ತರಿಗೆ ಗ್ರಾಮಸ್ಥರಿಂದ ಅಗಾಧ ಪ್ರಮಾಣದಲ್ಲಿ ದೂರು ಸಲ್ಲಿಸಲ್ಪಟ್ಟ ಬಳಿಕ ಪಂಚಾಯತ್ ಪಿಡಿಒ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯುಗ್ರ ಪದಗಳ ನಿಂದನೆಯ ನುಡಿಗಳು ಹರಿದಾಡುತ್ತಿದ್ದು, ಕೆಲ ಮಂದಿಯ ಖಾಸಗಿ ಬದುಕಿನ ಎಡವಟ್ಟುಗಳೂ ಕೂಡಾ ದೃಶ್ಯಾವಳಿಗಳೊಂದಿಗೆ ಅನಾವರಣಗೊಳ್ಳುವ ಬೆದರಿಕೆಗಳೂ ಸಾರ್ವಜನಿಕವಾಗಿ ಕೇಳಿ ಬರತೊಡಗಿದೆ.
ಈ ಮಧ್ಯೆ ಸಾಮಾಜಿಕ ಹೋರಾಟಗಾರ ಮಹೇಂದ್ರವರ್ಮ ಮಾಧ್ಯಮದೊಂದಿಗೆ ಮಾತನಾಡಿ, ಸಮಾಜದ ಸಜ್ಜನರನ್ನು ದೋಚುವ ಅಧಿಕಾರಿಯನ್ನಾಗಲಿ, ಮಧ್ಯವರ್ತಿಯನ್ನಾಗಲಿ ಸಾರ್ವಜನಿಕವಾಗಿ ದಂಡಿಸುವ ಅನಿವಾರ್ಯತೆಯನ್ನು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧಿಕಾರಿಗಳು ಸೃಷ್ಟಿಸಿಕೊಂಡಿದ್ದಾರೆ. ಜಿಲ್ಲಾಡಳಿತ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜನ ಸಾಮಾನ್ಯರ ಹಿತಕ್ಕಾಗಿ ಬಳಸಿಕೊಳ್ಳಲು ವಿಫಲವಾದರೆ ಜನರೇ ಅಗತ್ಯ ಕ್ರಮವನ್ನು ಕೈಗೊಳ್ಳುವ ಅನಿವಾರ್ಯತೆಗೆ ಸಿಲುಕುತ್ತಾರೆ. ಪಂಚಾಯತ್ ಕಚೇರಿಯೊಳಗೆ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಪಾದರಕ್ಷೆ ಧರಿಸುವ ಅಧಿಕಾರವಿದ್ದರೆ ಗ್ರಾಮಸ್ಥರಿಗೂ ಪಾದರಕ್ಷೆ ಧರಿಸಿ ಪ್ರವೇಶಿಸುವ ಅಧಿಕಾರವಿದೆ. ಅಂತೆಯೇ ಪಂಚಾಯತ್ ಕೆಲಸಕ್ಕೆ ಅಕ್ರಮವಾಗಿ ಹಣ ಕಬಳಿಸುವ ಯತ್ನ ನಡೆದರೆ ಅದನ್ನು ಧಮನಿಸುವ ಅಧಿಕಾರವೂ ಗ್ರಾಮಸ್ಥರಿಗೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here