ಪಡಿತರ ಚೀಟಿಯ ಇ-ಕೆವೈಸಿಗೆ ಸರ್ವರ್ ಸಮಸ್ಯೆ: ಎಸ್‌ಡಿಪಿಐ ಆಕ್ರೋಶ

0

ಉಪ್ಪಿನಂಗಡಿ: ಪಡಿತರ ಚೀಟಿಯ ಇ-ಕೆವೈಸಿ ಪ್ರಕ್ರಿಯೆ ಮಾಡಿಸಲು ಸರ್ವರ್ ಸಮಸ್ಯೆ ಎದುರಾಗಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಪಡಿತರ ವಿತರಣೆಯ ಅಂಗಡಿಯ ಮುಂದೆ ಕಾಯುವಂತಾಗಿದೆ ಎಂದು ಎಸ್‌ಡಿಪಿಐ ಆಕ್ರೋಶ ವ್ಯಕ್ತಪಡಿಸಿದೆ.


ಉಪ್ಪಿನಂಗಡಿ ಪಡಿತರ ವಿತರಣೆಯ ಅಂಗಡಿಗೆ ಭೇಟಿ ನೀಡಿದ ಎಸ್‌ಡಿಪಿಐ ನಿಯೋಗವು ಅಲ್ಲಿರುವ ಸಮಸ್ಯೆಯನ್ನು ಪರಿಶೀಲಿಸಿತು. ಬಳಿಕ ಈ ಬಗ್ಗೆ ಮಾಧ್ಯಮ ಪ್ರಕಟನೆ ನೀಡಿದ ನಿಯೋಗವು, ಬಡವರು ಮತ್ತು ಸಾಮಾನ್ಯ ಜನರಿಗೆ ಅಗತ್ಯವಿರುವ ಪಡಿತರ ವ್ಯವಸ್ಥೆಯನ್ನು ಸರಳಗೊಳಿಸುವ ಬದಲು ಸರಕಾರದ ವಿವಿಧ ಯೋಜನೆಗಳ ಹೆಸರಿನಲ್ಲಿ ಜನರನ್ನು ಕಚೇರಿಯತ್ತ ಅಲೆಯುವಂತೆ ಸರಕಾರ ಮಾಡಿದೆ. ಇ-ಕೆವೈಸಿ ಪ್ರಕ್ರಿಯೆ ಮಾಡಲು ಸರ್ವರ್ ಸಮಸ್ಯೆ ಎದುರಾಗಿರುವುದರಿಂದ ಜನರು ಕೆಲಸಕ್ಕೆ ರಜೆ ಹಾಕಿ ಪಡಿತರ ವಿತರಣೆಯ ಅಂಗಡಿಯ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಆದ್ದರಿಂದ ಸರಕಾರ ಈ ಬಗ್ಗೆ ಗಮನಹರಿಸಿ ಸಮಸ್ಯೆಯನ್ನು ಪರಿಹರಿಸಬೇಕಿದೆ ಎಂದು ತಿಳಿಸಿದೆ.


ನಿಯೋಗದಲ್ಲಿ ಎಸ್‌ಡಿಪಿಐ ಉಪ್ಪಿನಂಗಡಿ ಗ್ರಾಮ ಸಮಿತಿ ಅಧ್ಯಕ್ಷ ಮುಸ್ತಫ ನಿರ್ಮಾ, ಗ್ರಾ.ಪಂ. ಮಾಜಿ ಸದಸ್ಯ ರಶೀದ್ ಮಠ, ಎಸ್‌ಡಿಪಿಐ ಉಪ್ಪಿನಂಗಡಿ-ಕಡಬ ಬ್ಲಾಕ್ ಸಮಿತಿ ಉಪಾಧ್ಯಕ್ಷ ಮುಸ್ತಫ ಲತೀಫಿ, ಬ್ಲಾಕ್ ಸಮಿತಿ ಸದಸ್ಯ ಝಕರಿಯಾ ಕೊಡಿಪ್ಪಾಡಿ, ಗ್ರಾಮ ಸಮಿತಿ ಸದಸ್ಯ ಮುಸ್ತಫ ಹಾಗೂ ರಝಾಕ್ ಅಡೆಕಲ್, ಸಿದ್ದೀಕ್ ಪರಾರಿ ಮತ್ತು ಮಠ ಬ್ರಾಂಚ್ ಸಮಿತಿ ಸದಸ್ಯ ಬದ್ರುದ್ದೀನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here