







ಪುತ್ತೂರು: ಹಿಂದೂ ಸಮಾಜ ಎದುರಿಸುತ್ತಿರುವ ದುರಂತ ಸನ್ನಿವೇಶಗಳಿಗೆ ಹಿಂದೂಗಳೇ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇದರ ಸೂಕ್ಷ್ಮತೆ ಅರಿತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗಬಹುದು. ಗಣೇಶೋತ್ಸವ ಕಾರ್ಯಕ್ರಮದ ಮೂಲಕ ಹಿಂದು ಸಮಾಜದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಸಂಕಲ್ಪ ಮಾಡುವುದಲ್ಲದೆ ಧರ್ಮದ ವಿಚಾರದಲ್ಲಿ ರಾಜಕೀಯ ಮರೆತು ಒಗ್ಗಟ್ಟಿನಿಂದ ವಿರೋಧಿಸಬೇಕಾದ ಆವಶ್ಯಕತೆಯಿದೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿ ಪುರುಷರಕಟ್ಟೆ ಇದರ ವತಿಯಿಂದ ಪುರುಷರಕಟ್ಟೆಯ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಮುಂಭಾಗದಲ್ಲಿ ನಡೆಯುತ್ತಿರುವ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಸೆ.15ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗಣೇಶೋತ್ಸವದ ಮೂಲಕ ಆರಾಧನೆ ಮಾಡಿ ಹಿಂದು ಸಮಾಜಕ್ಕೆ ಶಕ್ತಿ ನೀಡುವ ಜೊತೆಗೆ ಸಂಸ್ಕೃತಿ, ಸಂಪ್ರದಾಯ ಮುಂದಿನ ಪೀಳಿಗೆಗೆ ಕೊಂಡೋಯ್ಯುವ ಪ್ರಯತ್ನಗಳು ನಡೆಯುವ ಸಂದರ್ಭದಲ್ಲಿ ಇದ್ಯಾವುದನ್ನು ಲೆಕ್ಕಿಸದೇ ಧಾರ್ಮಿಕ ಆಚರಣೆಗಳಿಗೆ ಸರಕಾರ ಕಡಿವಾಣ ಹಾಕಲು ಮುಂದಾಗಿದೆ. ಕಾರ್ಯಕ್ರಮ ಆಯೋಜಕರು ಅನುಮತಿಗಾಗಿ ಅಲೆದಾಡುವಂತ ಸಂದಿಗ್ದ ಸ್ಥಿತಿಯಲ್ಲಿದ್ದೇವೆ ಎಂದು ಹೇಳಿದರು.
ಧಾರ್ಮಿಕ ಉಪನ್ಯಾಸ ನೀಡಿದ ಉಮೇಶ್ ನಾಯಕ್ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೊಡುಗೆ ನೀಡಿದ್ದ ಗಣೇಶೋತ್ಸವ ಇಂದು ಎಲ್ಲೆಡೆ ವಿಜೃಂಭಣೆಯಿಂದ ನಡೆಯುತ್ತಿದೆ. ಕಾರ್ಯಕ್ರಮದ ಮುಖಾಂತರ ಗ್ರಾಮದ ಜನರಲ್ಲಿ ಐಕ್ಯತೆಗೆ ವಿನೂತನ ಕಾರ್ಯಕ್ರಮವಾಗಿ ಗಣೇಶೋತ್ಸವ ಮೂಡಿಬರುತ್ತಿದೆ. ಬೇಧ, ಭಾವವಿಲ್ಲದೆ ಸಮಾಜದ ಪ್ರತಿಯೊಬ್ಬರೂ ಒಟ್ಟು ಸೇರಿ ಕುಟುಂಬದ ಕಾರ್ಯಕ್ರಮದಂತೆ ಆಯೋಜನೆಗೊಳ್ಳುತ್ತಿದ್ದು ಸಾರ್ವಜನಿಕವಾಗಿ ಆರಾಧನೆ ಮಾಡುವ ಮೂಲಕ ಹೆಚ್ಚು ಶಕ್ತಿ ದೊರೆಯಲಿದೆ. ಅಲ್ಲದೆ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ವಿವಿಧ ಸ್ಥರಗಳಲ್ಲಿ ಜನರಿಗೆ ಉದ್ಯೋಗವನ್ನು ನೀಡುತ್ತಿದೆ ಎಂದು ಹೇಳಿದರು.
ಮೆಘಾ ಫ್ರುಟ್ಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಸತ್ಯಶಂಕರ್ ಭಟ್ ಮಾತನಾಡಿ, ಪ್ರಸ್ತುತ ವರ್ಚವಲ್ ಜಗತ್ತಿನಲ್ಲಿ ಮೊಬೈಲ್ ದಾಸರಾಗುತ್ತಾ ಪರಸ್ಪರ ಸಂಹವಹನ ಮರೆಯಾಗುತ್ತಿದೆ. ಸ್ಥಳೀಯವಾಗಿ ನಡೆಯುವಂತೆ ಎಲ್ಲಾ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳನ್ನು ಭಾಗವಹಿಸಿದಾಗ ಸಂವಹನ ವೃದ್ಧಿಯಾಗಿ ನಾಯಕತ್ವ ಗುಣಗಳು ಬೆಳೆಯಲು ಸಹಕಾರಿ. ಗಣೇಶೋತ್ಸವ ಕೇವಲ ಧಾರ್ಮಿಕ ಆಚರಣೆಯಾಗಿರದೇ ಸಂಘಟನೆ, ಪರಸ್ಪರ ಸಂವಹನ, ನಾಯಕತ್ವ ಬೆಳೆಸುವ ವೇದಿಕೆಯಾಗಲಿದೆ. ಸಮಾಜದ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಧನಾತ್ಮಕ ಚಿಂತನೆಗಳು ವೃದ್ಧಿಯಾಗಲಿದೆ ಎಂದು ಹೇಳಿದರು.
ಪ್ರಗತಿಪರ ಕೃಷಿಕ ಹೊನ್ನಪ್ಪ ಪೂಜಾರಿ ಕೈಂದಾಡಿ ಮಾತನಾಡಿ, ಗಣೇಶೋತ್ಸವ 26ರ ಸಂಭ್ರಮದಲ್ಲಿ ಶಾಸಕರು ರೂ.15ಲಕ್ಷ ಅನುದಾನ ಮಂಜೂರುಗೊಳಿಸಿ, ಕೇವಲ ಹತ್ತೆ ದಿನದಲ್ಲಿ ಸಭಾಂಗಣ ನಿರ್ಮಾಣಗೊಂಡಿದೆ. ಜೊತೆಗೆ ಇಂಟರ್ಲಾಕ್ ಅಳವಡಿಸುವ ಕಾಮಗಾರಿಯು ನಡೆಯಲಿದೆ. ಇದಲ್ಲದೆ ಗಣೇಶನ ವಿಗ್ರಹ ಜಲಸ್ಥಂಭನಕ್ಕೆ ತೆರಳುವ ರಸ್ತೆಯು ಕಾಂಕ್ರಿಟೀಕರಣಗೊಳ್ಳಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಮುಂಡೋಡಿ ಮಾತನಾಡಿ, ಪುರುಷರಕಟ್ಟೆಯಲ್ಲಿ ಕಳೆದ 25 ವರ್ಷಗಳಿಂದಲೂ ಸೌಹಾರ್ದಯುತವಾಗಿ ಗಣೇಶೋತ್ಸವ ನೆರವೇರಿಸಿಕೊಂಡು ಬರುತ್ತಿದ್ದು 26 ಸಂಭ್ರಮದಲ್ಲಿಯೂ ಎಲ್ಲರೂ ಒಟ್ಟು ಸೇರಿ ಸೌಹಾರ್ದತೆಯು ಮುಂದುವರಿಸಿದೆ. ಗಣೇಶೋತ್ಸವ ಜರಗುವ ಸ್ಥಳದಲ್ಲಿ ಶಾಸಕರ ಅನುದಾನದಲ್ಲಿ ಛಾವಣಿ ಹಾಗೂ ಇಂಟರ್ಲಾಕ್ ಅಳವಡಿಸಿಲಾಗಿದ್ದು ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೂ ಖರ್ಚು ವೆಚ್ಚಗಳ ಹೊರೆ ಕಡಿಮೆಯಾಗಲಿದೆ. ಅನುದಾನ ಒದಗಿಸಿದ ಶಾಸಕರಿಗೆ ಅಭಿನಂದನೆ ಸಲ್ಲಿಸಿದ ಹೇಳಿದ ಅವರು ದೇಣಿಗೆ ಸಂಗ್ರಹಿಸಿ ಕಾರ್ಯಕ್ರಮ ಆಯೋಜಿಸಿಕೊಳ್ಳಲಾಗುತ್ತಿದ್ದು ಉಳಿಕೆ ಹಣದಲ್ಲಿ ಬಡವರ ಆರೋಗ್ಯ ವೆಚ್ಚ ಭರಿಸುವುದು, ವೇದಿಕೆ ಮೊದಲಾದ ಶಾಶ್ವತ ಯೋಜನೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ ಶ್ರೀನಿವಾಸ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, 2000ನೇ ಇಸವಿಯಲ್ಲಿ ಪ್ರಾರಂಭಗೊಂಡ ಪುರುಷರಕಟ್ಟೆಯ ಗಣೇಶೋತ್ಸವದ ಆಚರಣೆಗಳು ನಿರಂತರವಾಗಿ ನಡೆಯುತ್ತಾ ಬರುತ್ತಿದೆ. ಎಲ್ಲಾ ವರ್ಗದ ಜನರ ಕೌಟುಂಬಿಕ ಸಂಬಂಧದ ರೀತಿಯಲ್ಲಿ ಒಗ್ಗೂಡುವಿಕೆಯಿಂದ ತಮ್ಮ ಮನೆಯ ಕಾರ್ಯಕ್ರಮದಂತೆ ಪಾಳ್ಗೊಳ್ಳುತ್ತಿದ್ದಾರೆ. ಗಣೇಶೋತ್ಸವ ಪ್ರಾರಂಭವಾದ ಬಳಿಕ ಬಹಳಷ್ಟು ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿಗಳು ಕಂಡಿದ್ದು, ಶೈಕ್ಷಣಿಕ, ಔದ್ಯೋಗಿಕ, ವ್ಯವಹಾರಿಕ ಕ್ಷೇತ್ರಗಳು ಬಹಳಷ್ಟು ಸಮೃದ್ದಿಗೊಂಡಿದೆ. 26ನೇ ವರ್ಷದ ಗಣೇಶೋತ್ಸವದ ಕೊಡುಗೆಯಾಗಿ ಶಾಸಕರ ಅನುದಾನದಲ್ಲಿ ವಿಶಾಲ ಸಭಾಂಗಣ ನಿರ್ಮಾಣಗೊಂಡಿದೆ ಎಂದರು.
ಸಾಧಕರಿಗೆ ಸನ್ಮಾನ:
ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ, ಕೃಷಿ ಕ್ಷೇತ್ರದಲ್ಲಿ ನಾಗಮ್ಮ ಮತ್ತು ಬಾಲಕೃಷ್ಣ ಗೌಡ ತೋಟ ದಂಪತಿ, ಸಿಆರ್ಪಿಎಫ್ ನಿವೃತ್ತ ಯೋಧೆ ರೋಷಿಣಿ ದಾಮೋದರ ಕೆ.ಆರ್., ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತರಾದ ಮೋಕ್ಷಿತ್ ವಿ.ಬಿ ಹಾಗೂ ತನ್ಮಯಿ ಎಸ್.ಆರ್ ಅವರನ್ನು ಸನ್ಮಾನಿಸಲಾಯಿತು. ಗಣೇಶೊತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರು ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.



ಗಣೇಶೋತ್ಸವದ ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಉಮೇಶ್ ಇಂದಿರಾನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣೇಶೋತ್ಸವ ಸಮಿತಿ ಸದಸ್ಯ ರವೀಂದ್ರ ರೈ ನೆಕ್ಕಿಲ ಸ್ವಾಗತಿಸಿದರು. ಕಾರ್ಯದರ್ಶಿ ದೇವಿಪ್ರಸಾದ್ ಪ್ರಭು ಉದಯಭಾಗ್ಯ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀದೇವರಿಗೆ ರಂಗಪೂಹೆ, ಮಹಾಪೂಜೆ, ಅನ್ನಸಂತರ್ಪಣೆ ನಡೆದ ಬಳಿಕ ಕಲಾ ನಿಕೇತನ ಡ್ಯಾನ್ಸ್ ಫೌಂಡೇಷನ್ ಕಲ್ಲಡ್ಕ ಇದರ ನೃತ್ಯಗುರು ವಿದುಷಿ ವಿದ್ಯಾ ಮನೋಜ್ ಶಿಷ್ಯರಿಂದ ಭರತ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಿತು.













