







ದೈವ ಭಕ್ತಿಯೊಂದಿಗೆ ರಾಷ್ಟ್ರ ಭಕ್ತಿಯ ಉದ್ಧೀಪನದ ಕಾರ್ಯ ಸಾರ್ವಜನಿಕ ಗಣೇಶೋತ್ಸವ : ಸಂಜೀವ ಮಠಂದೂರು


ಪುತ್ತೂರು: ಮನೆ ಮಂದಿರಗಳಲ್ಲಿ ಆರಾಧನೆಗೊಳ್ಳುತ್ತಿದ್ದ ಗಣಪತಿ ಆರಾಧನೆಯನ್ನು ಬಾಲ ಗಂಗಾಧರನಾಥ ತಿಲಕರು ಸಾರ್ವಜನಿಕವಾಗಿ ತಂದಿರುವ ಉದ್ದೇಶವೇ ರಾಷ್ಟ್ರಭಕ್ತಿಯ ಉದ್ದೀಪನವಾಗಿತ್ತು. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನರು ಒಟ್ಟು ಸೇರಬೇಕು, ರಾಷ್ಟ್ರಭಕ್ತಿ ಜನರಲ್ಲಿ ಮೂಡಿಸಬೇಕು ಎಂಬ ನಿಟ್ಟಿನಲ್ಲಿ ಗಣಪತಿ ದೇವರನ್ನು ಸಾರ್ವಜನಿಕವಾಗಿ ಆಚರಣೆ ಮಾಡುವ ಮೂಲಕ ಜನರಲ್ಲಿ ದೈವ ಭಕ್ತಿಯೊಂದಿಗೆ ರಾಷ್ಟ್ರಭಕ್ತಿಯ ಉದ್ದೀಪನದ ಕೆಲಸವನ್ನು ತಿಲಕರು ಮಾಡಿದ್ದರು ಅದೇ ರೀತಿ ಇಂದಿನ ದಿನಗಳಲ್ಲೂ ಗಣಪತಿ ಆರಾಧನೆಯೊಂದಿಗೆ ನಮ್ಮಲ್ಲಿ ಧರ್ಮ ಜಾಗೃತಿಯೊಂದಿಗೆ ರಾಷ್ಟ್ರ ಭಕ್ತಿಯನ್ನು ಹೆಚ್ಚಿಸುವ ಕೆಲಸ ಆಗಬೇಕಾಗಿದೆ ಅದು ಆಗುತ್ತಾ ಇರುವುದು ಸಂತೋಷ ತಂದಿದೆ ಎಂದು ಮಾಜಿ ಶಾಸಕರಾದ ಸಂಜೀವ ಮಠಂದೂರು ಹೇಳಿದರು.
ಅವರು ಕುಂಬ್ರ ಶ್ರೀಕ್ಷೇತ್ರ ರಾಮಗಿರಿಯ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯುತ್ತಿರುವ 45 ನೇ ಸಾರ್ವಜನಿಕ ಶ್ರೀಗಣೇಶೋತ್ಸವದ ಮೂರನೇ ದಿನವಾದ ಸೆ.16 ರಂದು ನಡೆದ ಧಾರ್ಮಿಕ ಸಭೆಯಲ್ಲಿ ದೀಪ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಆರಂಭದಲ್ಲಿ ತಿಲಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು. ನಿತ್ಯ ಜೀವನದಲ್ಲಿ ಧರ್ಮಾನುಷ್ಠಾನ ಎಂಬ ವಿಷಯದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ವಕೀಲರಾದ ಕೃಷ್ಣ ಪ್ರಸಾದ್ ನಡ್ಸಾರ್ರವರು, ಯಾವುದೇ ಕೆಲಸವನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಿದಾಗ ನಾವು ದೇವರನ್ನು ಕಾಣಲು ಸಾಧ್ಯವಿದೆ. ಮುಖ್ಯವಾಗಿ ನಮ್ಮ ಮಕ್ಕಳಿಗೆ ಧರ್ಮ,ಸಂಸ್ಕಾರ,ಸಂಸ್ಕೃತಿಯ ಅರಿವು ಮೂಡಿಸುವುದು ಇಂದಿನ ಅಗತ್ಯತೆಯಾಗಿದೆ. ನಿತ್ಯ ಜೀವನದಲ್ಲಿ ಧರ್ಮಾನುಷ್ಠಾನ ಆಗಬೇಕಾದರೆ ಆರಂಭದಲ್ಲಿ ನಮ್ಮ ಮನೆಯಿಂದ, ನಮ್ಮ ಮಕ್ಕಳಿಂದ ಈ ಕೆಲಸ ಆರಂಭವಾಗಬೇಕು ಇದಕ್ಕೆ ನಮ್ಮ ಹಿರಿಯರು, ಹೆತ್ತವರು ಮನಸ್ಸು ಮಾಡಬೇಕು, ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಡುವ ಬದಲು ಸಂಸ್ಕಾರ, ಸಂಸ್ಕೃತಿ ಕಲಿಸುವ ಧರ್ಮಗ್ರಂಥಗಳನ್ನು ಕೊಡಬೇಕು, ಧರ್ಮ ಕಾರ್ಯಗಳಿಗೆ ಕರೆದುಕೊಂಡು ಹೋಗಬೇಕು ಎಂದ ಅವರು ಹಲವು ವಿಚಾರಗಳನ್ನು ಸಭೆಯ ಮುಂದಿಟ್ಟರು.
ಮುಖ್ಯ ಅತಿಥಿಯಾಗಿದ್ದ ವಿಜಯ ಸಾಮ್ರಾಟ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಸಹಜ್ ರೈ ಬಳಜ್ಜರವರು ಮಾತನಾಡಿ, ಜನರಲ್ಲಿ ಧರ್ಮದ ವಿಚಾರಗಳನ್ನು ಬಿತ್ತುವ ಕೆಲಸ ಕುಂಬ್ರ ಶ್ರೀರಾಮ ಭಜನಾ ಮಂದಿರದಿಂದ ಆಗುತ್ತಿರುವುದು ಖುಷಿ ಕೊಟ್ಟಿದೆ. ಗಣೇಶೋತ್ಸವ ಕಾರ್ಯಕ್ರಮದಲ್ಲಿ ಕುಂಬ್ರದಲ್ಲಿ ಮಾತ್ರ ಬಾಲಗಂಗಾಧರನಾಥ ತಿಲಕರ ಫೋಟೋ ಇಟ್ಟು ಗೌರವ ಸಲ್ಲಿಸುವ ಕೆಲಸ ಆಗುತ್ತಿದ್ದು ಇದು ಎಲ್ಲರಿಗೂ ಮಾದರಿ ಎಂದ ಅವರು ಮುಂದಿನ ದಿನಗಳಲ್ಲಿ ನೂತನ ಶ್ರೀರಾಮ ಮಂದಿರ ನಿರ್ಮಾಣದಲ್ಲಿ ನನ್ನಿಂದ ಆಗುವ ಎಲ್ಲಾ ಸಹಾಯನ್ನು ಮಾಡುತ್ತೇನೆ ಎಂದು ಹೇಳಿ ಶುಭ ಹಾರೈಸಿದರು. ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಮಾತನಾಡಿ, ತಿಲಕರು ಹಾಕಿಕೊಟ್ಟ ಸಾರ್ವಜನಿಕ ಗಣೇಶೋತ್ಸವದಿಂದಾಗಿ ಇಂದು ನಾವೆಲ್ಲರೂ ಮತ್ತೆ ಮತ್ತೆ ಒಟ್ಟು ಸೇರುವಂತಹ ಕೆಲಸ ಆಗುತ್ತಿದೆ ಆ ಮೂಲಕ ಧರ್ಮ ಜಾಗೃತಿ ಕೆಲಸ ನಡೆಯುತ್ತಿದೆ ಎಂದು ಹೇಳಿ ಶುಭ ಹಾರೈಸಿದರು.



ಉದ್ಯಮಿ ಕಲ್ಲಡ್ಕ ಚಂದ್ರ ಕೋಟ್ಯಾನ್ರವರು ಮಾತನಾಡಿ, ನಾವೆಲ್ಲರೂ ಧರ್ಮದ ಅಡಿಯಲ್ಲಿ ಕೆಲಸ ಮಾಡಿದಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗಲು ಸಾಧ್ಯವಿದೆ ಎಂದರು. ಉದ್ಯಮಿ ಮೋಹನದಾಸ್ ರೈ ಕುಂಬ್ರ ಮಾತನಾಡಿ, ಕುಂಬ್ರದ ಪುಣ್ಯದ ಮಣ್ಣಿನಲ್ಲಿ ನಡೆಯುತ್ತಿರುವ ಗಣೇಶೋತ್ಸವ ಹತ್ತೂರಿಗೂ ಮಾದರಿ, ಇಲ್ಲಿ ಪೂಜಿಸುವ ಗಣೇಶ ನಮಗೆಲ್ಲರಿಗೂ ಒಳ್ಳೆಯದನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು. ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ರಕ್ಷಿತ್ ರೈ ಮುಗೇರುರವರು, ಗಣಪತಿಯ ಆರಾಧನೆಯೊಂದಿಗೆ ಪ್ರಕೃತಿಯ ಆರಾಧನೆ ಕೂಡ ಇಂದಿನ ಅಗತ್ಯತೆಯಾಗಿದೆ ಪ್ರಕೃತಿಯನ್ನು ಉಳಿಸಿ ಬೆಳೆಸುವ ಮೂಲಕ ಈ ಗಣೇಶೋತ್ಸವಕ್ಕೆ ಒಂದು ಅರ್ಥಪೂರ್ಣ ಸಂಭ್ರಮ ತರುವಂತೆ ಕೇಳಿಕೊಂಡರು. ಪತ್ರಕರ್ತ ಸಿಶೇ ಕಜೆಮಾರ್ರವರು, ಗಣಪತಿಯಿಂದ ನಾವು ಕಲಿಯಬಹುದಾದ ಜೀವನ ಪಾಠಗಳನ್ನು ತಿಳಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರತನ್ ರೈ ಕುಂಬ್ರರವರು, ಮುಂದಿನ ದಿನಗಳಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣದ ಕನಸು ಇದ್ದು ಈಗಾಗಲೇ ಅದಕ್ಕೆ ಬೇಕಾದ ಕೆಲವೊಂದು ಧಾರ್ಮಿಕ ಕಾರ್ಯಗಳನ್ನು ಮಾಡಲಾಗಿದ್ದು ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಸಹಕಾರ ನೀಡುವಂತೆ ಕೇಳಿಕೊಂಡು ಗಣೇಶೋತ್ಸವಕ್ಕೆ ಸಹಕಾರ ನೀಡುತ್ತಿರುವ ಸರ್ವ ಭಕ್ತಾಧಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಕುಂಬ್ರ ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ಅಶೋಕ್ ತ್ಯಾಗರಾಜನಗರ,ಕುಂಬ್ರ ಶ್ರೀರಾಮ ಭಜನಾ ಮಂದಿರದ ನಿಕಟಪೂರ್ವ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಅಂಗನವಾಡಿ ಸಹಾಯಕಿ ರಾವೀಜಿ ಕುಂಬ್ರ ಉಪಸ್ಥಿತರಿದ್ದರು. ಉಷಾ ನಾರಾಯಣ್ ಪ್ರಾರ್ಥಿಸಿದರು. ಶ್ರೀರಾಮ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ರಾಜ್ಪ್ರಕಾಶ್ ರೈ ಸ್ವಾಗತಿಸಿದರು. ಮಂದಿರದ ಮಾಜಿ ಅಧ್ಯಕ್ಷ ಸುಂದರ ರೈ ಮಂದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಗಣೇಶೋತ್ಸವ ಸಮಿತಿ ಸಂಚಾಲಕ ಹರೀಶ್ ರೈ ಮುಗೇರು ವಂದಿಸಿದರು. ಹರೀಶ್ ರೈ ಜಾರತ್ತಾರು, ರಾಜೇಶ್ ರೈ ಪರ್ಪುಂಜ ಕಾರ್ಯಕ್ರಮ ನಿರೂಪಿಸಿದರು. ಮಂದಿರದ ಆಡಳಿತ ಸಮಿತಿ ಪದಾಧಿಕಾರಿಗಳು, ವಿವಿಧ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಸಹಕರಿಸಿದ್ದರು. ಬೆಳಿಗ್ಗೆ ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯರವರ ನೇತೃತ್ವದಲ್ಲಿ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸುಮಾರು 500 ಕ್ಕೂ ಅಧಿಕ ಮಂದಿ ಆಗಮಿಸಿ ದೇವರ ಪ್ರಸಾದ, ಅನ್ನ ಪ್ರಸಾದ ಸ್ವೀಕರಿಸಿದರು.










