







ರೂ.27.01 ಲಕ್ಷ ನಿವ್ವಳ ಲಾಭ | ಶೇ.15 ಡಿವಿಡೆಂಡ್ | ಪ್ರೋತ್ಸಾಹಧನ ವಿತರಣೆ


ಪುತ್ತೂರು: ಕೋರ್ಟ್ರಸ್ತೆಯ ವಿಶ್ವ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ಸಹೋದರತ್ವದ ಸ್ನೇಹಮಯ ಸೇವೆ ಎಂಬ ಧ್ಯೇಯವಾಕ್ಯದೊಂದಿಗೆ ವ್ಯವಹರಿಸುತ್ತಿರುವ ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ಗೆ ಇದೀಗ ಬೆಳ್ಳಿಹಬ್ಬದ ಸಂಭ್ರಮದಿಂದ ಮುನ್ನೆಡೆಯುತ್ತಿದ್ದು ಇದರ ವಾರ್ಷಿಕ ಮಹಾಸಭೆಯು ಸೆ.13 ರಂದು ಬೆಳಿಗ್ಗೆ ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಸೊಸೈಟಿ ಅಧ್ಯಕ್ಷರಾದ ರಾಕೇಶ್ ಜೆ.ಮಸ್ಕರೇನ್ಹಸ್‌ರವರ ಅಧ್ಯಕ್ಷತೆಯಲ್ಲಿ ಜರಗಿತು.



ಸದಸ್ಯತನ, ಪಾಲು ಬಂಡವಾಳ:
ವರದಿ ಸಾಲಿನ ಆರಂಭದಲ್ಲಿ 1341 ಸದಸ್ಯರು ಇದ್ದು 75 ಮಂದಿ ಹೊಸ ಸದಸ್ಯರು ಸೇರ್ಪಡೆಯಾಗಿ 12 ಮಂದಿ ಸದಸ್ಯತ್ವವನ್ನು ತ್ಯಜಿಸಿರುತ್ತಾರೆ. ಮಾರ್ಚ್ ವರ್ಷಾಂತ್ಯಕ್ಕೆ ಸಂಘದಲ್ಲಿ 1404 ಮಂದಿ ಸದಸ್ಯರು ಇದ್ದು, ರೂ.1,06,70,600 ಪಾಲು ಬಂಡವಾಳವಿರುತ್ತದೆ. ಸಂಘದ ಸಂಪನ್ಮೂಲವು ವಿವಿಧ ಠೇವಣಿಗಳಿಂದ ಕೂಡಿದ್ದು ಸಂಘದಲ್ಲಿ ಮಾರ್ಚ್ ವಷಾಂತ್ಯಕ್ಕೆ ಉಳಿತಾಯ ಖಾತೆ, ನಿರಖು ಠೇವಣಿ, ಮಾಸಿಕ ಠೇವಣಿ, ನಿರಖು ಠೇವಣಿ(ಸಿ) ಸೇರಿದಂತೆ ಒಟ್ಟು ರೂ.8,63,91,170.17 ಠೇವಣಿಯಿರುತ್ತದೆ. ಸಂಘದ ಮೇಲೆ ವಿಶ್ವಾಸವಿರಿಸಿ ಠೇವಣಿ ಹೂಡಿರುವ ಎಲ್ಲಾ ಠೇವಣಿದಾರರಿಗೆ ಅಧ್ಯಕ್ಷರಾದ ರಾಕೇಶ್ ಮಸ್ಕರೇನ್ಹಸ್‌ರವರು ಅಭಿನಂದನೆ ಸಲ್ಲಿಸುತ್ತಾ ಮುಂದಿನ ಆರ್ಥಿಕ ವರ್ಷದಲ್ಲಿ ಇನ್ನೂ ಹೆಚ್ಚಿನ ಠೇವಣಿಯನ್ನು ತೊಡಗಿಸುವಂತೆ ಅವರು ಸಹಕಾರವನ್ನು ಕೋರಿದರು.
ನಿವ್ವಳ ಲಾಭ ರೂ.27.01 ಲಕ್ಷ, ಶೇ.15 ಡಿವಿಡೆಂಡ್:
ಸಂಘವು ಸದಸ್ಯರ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ವಿಧದ ಸಾಲಗಳನ್ನು ನೀಡಿದ್ದು, ಈ ಪೈಕಿ ಮಾರ್ಚ್ ವರ್ಷಾಂತ್ಯಕ್ಕೆ ಜಾಮಿನು ಸಾಲ, ತುರ್ತು ಸಾಲ, ವಾಹನ ಈಡಿನ ಸಾಲ, ಆಸ್ತಿ ಅಡವು ಸಾಲ, ಠೇವಣಾತಿ ಸಾಲ, ಆಭರಣ ಸಾಲ ಸೇರಿದಂತೆ ರೂ.8,51,00,234.67 ಹೊರ ಬಾಕಿ ಇರುತ್ತದೆ. ಸಂಘದ 2025-26ನೇ ಸಾಲಿನಲ್ಲಿ ಲೆಕ್ಕಪರಿಶೋಧನೆಯನ್ನು ಲೆಕ್ಕ ಪರಿಶೋಧಕರು ನಡೆಸಿದ್ದು ಸಂಘವು ರೂ.27,01,229.73 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ. ಈ ಬಾರಿ ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲಾಗುವುದು ಜೊತೆಗೆ ಶೇ.99.34 ಸಾಲ ವಸೂಲಾತಿಯಾಗಿದ್ದು, ಪ್ರಸ್ತುತ ಸಾಲಿನಲ್ಲಿ ಆಡಿಟ್ ವರ್ಗೀಕರಣ ಎ’ ಶ್ರೇಣಿಯನ್ನು ಪಡೆದುಕೊಂಡಿದೆ ಎಂದು ಅಧ್ಯಕ್ಷರಾದ ರಾಕೇಶ್ ಮಸ್ಕರೇನ್ಹಸ್‌ರವರು ಘೋಷಿಸಿದರು.
ದೂರದ ಇಸ್ರೇಲ್ ದೇಶಕ್ಕೆ ಉದ್ಯೋಗಕ್ಕೆ ಸಾಲ-ರಾಕೇಶ್ ಮಸ್ಕರೇನ್ಹಸ್:
ಅಧ್ಯಕ್ಷತೆ ವಹಿಸಿದ ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ರಾಕೇಶ್ ಮಸ್ಕರೇನ್ಹಸ್ ಮಾತನಾಡಿ, ಸಹೋದರತ್ವದ ಸ್ನೇಹಮಯ ಸೇವೆಯೊಂದಿಗೆ ಜೊತೆಗೆ ಕ್ರೈಸ್ತ ಸಮುದಾಯದ ಬೆಳವಣಿಗೆಯ ಉದ್ಧೇಶದೊಂದಿಗೆ ಆರಂಭವಾದ ಈ ಗ್ಲೋರಿಯಾ ಸೊಸೈಟಿಗೆ ಇದೀಗ ಬೆಳ್ಳಿಹಬ್ಬದ ಸಂಭ್ರಮ. ಸೊಸೈಟಿಯಲ್ಲಿನ ಸದಸ್ಯರುಗಳ ಸಹಕಾರವೇ ಸಂಘದ ವ್ಯವಹಾರ ವೃದ್ಧಿಯಾಗಲು ಪ್ರಮುಖ ಕಾರಣವಾಗಿದೆ. ಸಂಘದ ಮೇಲೆ ವಿಶ್ವಾಸವಿಟ್ಟು ಠೇವಣಿ ಇರಿಸಿ ಅಭಿವೃದ್ಧಿಗೆ ಕಾರಣರಾದ ಎಲ್ಲಾ ಠೇವಣಿದಾರರಿಗೂ, ಗ್ರಾಹಕರಿಗೂ ಅಲ್ಲದೆ ಸೂಕ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿ ಸಹಕರಿಸಿದ ಸದಸ್ಯರೆಲ್ಲರಿಗೂ ಕೃತಜ್ಞತೆಗಳು. ಸಮುದಾಯದ ಯುವಸಮೂಹಕ್ಕೆ ಉದ್ಯೋಗ ಸೃಷ್ಟಿಸುವ ನೆಲೆಯಲ್ಲಿ ದೂರದ ಇಸ್ರೇಲ್ ದೇಶದಲ್ಲಿ ಯಾರು ಉದ್ಯೋಗ ಕಂಡುಕೊಳ್ಳುತ್ತಾರೋ ಅವರಿಗೆ ಸೊಸೈಟಿ ವತಿಯಿಂದ ಸಾಲದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರ ಉತ್ತೇಜನ ಹಾಗೂ ಪ್ರೋತ್ಸಾಹದಿಂದ ಈ ಸಹಕಾರ ಸಂಘವು ಅಭಿವೃದ್ಧಿ ಸಾಧಿಸಬೇಕಾಗಿದೆ ಮಾತ್ರವಲ್ಲದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಲು ಈ ಸಹಕಾರಿ ಸಂಘವು ಸದಾ ಸಿದ್ಧವಿದೆ ಎಂದರು.
ಶ್ರದ್ಧಾಂಜಲಿ:
ಕಳೆದ ಮಹಾಸಭೆಯಿಂದ ಈ ಮಹಾಸಭೆಯವರೆಗೆ ನಿಧನರಾದ ಸಂಘದ ಸದಸ್ಯರಾದ ಜೋನ್ ಡಿ’ಸೋಜ, ಪೌಲಿನ್ ಡಾಯಸ್, ಚಾರ್ಲ್ಸ್ ಡಿ’ಸೋಜ, ಜೋನ್ ಲೋಬೊ, ಲೂವಿಸ್ ಡಿ’ಸೋಜರವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಫಲಾನುಭವಿ 15 ಮಂದಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸೊಸೈಟಿ ಕಾರ್ಯದರ್ಶಿ ಮೇಬಲ್ ಗ್ರೇಸಿ ಮಾಡ್ತಾರವರ ತೆರವಾದ ಸ್ಥಾನಕ್ಕೆ ತಾತ್ಕಾಲಿಕವಾಗಿ ನೇಮಕಗೊಂಡ ಸುಜಿತ್ ಕೀರ್ತನ್ ವಾಸ್‌ರವರನ್ನು ಸಭೆಗೆ ಪರಿಚಯಿಸಲಾಯಿತು. ಸೇವೆಯಿಂದ ನಿವೃತ್ತಗೊಂಡ ಸೊಸೈಟಿ ಕಾರ್ಯದರ್ಶಿ ಶ್ರೀಮತಿ ಮೇಬಲ್ ಗ್ರೇಸಿ ಮಾಡ್ತಾರವರ ಪರಿಚಯವನ್ನು ವಿಶ್ರಾಂತ ಪ್ರಾಂಶುಪಾಲ ಪ್ರೊ|ಝೇವಿಯರ್ ಡಿ’ಸೋಜರವರು ನೀಡಿದರು. ಸೊಸೈಟಿ ಕಾರ್ಯದರ್ಶಿ ಮೇಬಲ್ ಗ್ರೇಸಿ ಮಾಡ್ತಾರವರು ಜಮಾ ಖರ್ಚಿನ ತಖ್ತೆ, ಲಾಭ ನಷ್ಟದ ತಖ್ತೆ, ಲೆಕ್ಕಿಗ ಒಲಿವಿಯಾ ಪ್ರಶಾಂತಿ ರೆಬೆಲ್ಲೋರವರು ಆಸ್ತಿ ಜವಾಬ್ದಾರಿ ತಖ್ತೆ, ಅಂದಾಜು ಆಯ-ವ್ಯಯ ಪಟ್ಟಿ, ಸೊಸೈಟಿಯ ಅಭಿವೃದ್ಧಿ ತಖ್ತೆಯನ್ನು ಓದಿದರು. ಸೊಸೈಟಿ ಅಧ್ಯಕ್ಷ ರಾಕೇಶ್ ಮಸ್ಕರೇನ್ಹಸ್ ಸ್ವಾಗತಿಸಿ, ಉಪಾಧ್ಯಕ್ಷ ಸುನಿಲ್ ಮಸ್ಕರೇನ್ಹಸ್ ವಂದಿಸಿದರು. ನಿರ್ದೇಶಕರಾದ ಲೆಸ್ಟರ್ ಪಿಂಟೊ, ರೋಯ್ಸನ್ ಡಾಯಸ್, ಪವನ್ ಜೋನ್ ಮಸ್ಕರೇನ್ಹಸ್, ವಿಜಯ್ ವಿಲ್ಪ್ರೇಡ್ ಡಿ’ಸೋಜ, ಸಿಲ್ವೆಸ್ಟರ್ ಗೊನ್ಸಾಲ್ವಿಸ್, ಮೌರಿಸ್ ಮಸ್ಕರೇನ್ಹಸ್, ಶ್ರೀಮತಿ ಹಿಲ್ಡಾ ಮಿನೇಜಸ್, ಶ್ರೀಮತಿ ಶೈನಿ ಎನ್.ಎಸ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ನಿವೃತ್ತಗೊಂಡ ಮೇಬಲ್ ಗ್ರೇಸಿ ಮಾಡ್ತಾರವರ ಪ್ರಾಯೋಜಕತ್ವದಲ್ಲಿ ಸಹಭೋಜನ ನೆರವೇರಿತು.
ಸೊಸೈಟಿ ಕಾರ್ಯದರ್ಶಿ ಮೇಬಲ್ ಮಾಡ್ತಾರವರಿಗೆ ವಿದಾಯದ ಸನ್ಮಾನ..
ಗ್ಲೋರಿಯಾ ಕೋ-ಆಪರೇಟಿವ್ ಸೊಸೈಟಿಯು 2000ರಲ್ಲಿ ಅಂದಿನ ಅಧ್ಯಕ್ಷ ದಿ.ಜೋನ್ ರೆಬೆಲ್ಲೋರವರ ಮುಂದಾಳತ್ವದಲ್ಲಿ ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಆರಂಭಗೊಂಡ ಈ ಗ್ಲೋರಿಯಾ ಸೊಸೈಟಿಯಲ್ಲಿ ಶ್ರೀಮತಿ ಮೇಬಲ್ ಗ್ರೇಸಿ ಮಾಡ್ತಾರವರು ಸುಮಾರು 17 ವರ್ಷ 4 ತಿಂಗಳು ಸಂಸ್ಥೆಯ ಏಕಮಾತ್ರ ಸಿಬ್ಬಂದಿ’ಯಾಗಿ ಅಟೆಂಡರ್, ಸ್ವೀಪರ್, ಕ್ಲರ್ಕ್, ಲೆಕ್ಕಿಗ, ಕಾರ್ಯದರ್ಶಿ ಹೀಗೆ ಎಲ್ಲಾ ರೀತಿಯಲ್ಲೂ ಸೇವೆ ಸಲ್ಲಿಸಿ ಸೊಸೈಟಿಯ ಉತ್ತುಂಗಕ್ಕೆ ಕಾರಣಕರ್ತರಾಗಿದ್ದರು. 2017ರಲ್ಲಿ ಒಲಿವಿಯಾ ಪ್ರಶಾಂತಿ ರೆಬೆಲ್ಲೋರವರು ಲೆಕ್ಕಿಗರಾಗಿ ಆಗಮಿಸಿದ್ದರು. ಇದೀಗ ಸೊಸೈಟಿಯಲ್ಲಿ ಸುಮಾರು 26 ವರ್ಷ ಸೇವೆಗೈಯ್ದ ಶ್ರೀಮತಿ ಮೇಬಲ್ ಗ್ರೇಸಿ ಮಾಡ್ತಾರವರನ್ನು ಅವರ ಪತಿ ಜೋನ್ ಡಿ’ಸೋಜರವರ ಸಂಗಡದೊಂದಿಗೆ ವಿದಾಯದ ಸನ್ಮಾನ ನೆರವೇರಿಸಲಾಯಿತು.
ಒನ್ ಮ್ಯಾನ್ ಆರ್ಮಿ’.. ಗ್ಲೋರಿಯಾ ಕೋ-ಆಪರೇಟಿವ್ ಸೊಸೈಟಿಯ ಆರಂಭದಿಂದ ಸುಮಾರು 17 ವರ್ಷ 4 ತಿಂಗಳು ತಾನು ಒನ್ ಮ್ಯಾನ್ ಆರ್ಮಿ’ಯಾಗಿ ಸೇವೆ ನೀಡಿದ್ದೇನೆ. ಸೊಸೈಟಿಯು ಇಂದು ಇಷ್ಟು ಉತ್ತುಂಗಕ್ಕೇರಲು ತನ್ನ ಪರಿಶ್ರಮವೂ ಅಡಗಿದೆ ಎಂದು ಹೇಳಲು ಖುಶಿಯಾಗುತ್ತದೆ. ಸೊಸೈಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಾಯಿದೆ ದೇವುಸ್ ಚರ್ಚ್ನ ಧರ್ಮಗುರುಗಳು, ಸೊಸೈಟಿಯ ಸಮಾನ ಮನಸ್ಕ ಅಧ್ಯಕ್ಷರುಗಳು ಹಾಗೂ ನಿರ್ದೇಶಕರು ತುಂಬಾ ಸಲಹೆ ಹಾಗೂ ಪ್ರೋತ್ಸಾಹ ನೀಡಿರುತ್ತಾರೆ ಮಾತ್ರವಲ್ಲ ಎಲ್ಲರೂ ನನ್ನನ್ನು ಮನೆ ಮಗಳಂತೆ ನೋಡುತ್ತಿದ್ದರು. ನನಗೆ ನನ್ನ ಮನೆ ಸ್ವಂತ ಮನೆಯಾದರೆ ಗ್ಲೋರಿಯಾ ಸೊಸೈಟಿ ಎರಡನೇ ಮನೆ ಇದ್ದಾಗಿತ್ತು. ಸೊಸೈಟಿಯ ಅಭಿವೃದ್ಧಿಗೆ ಯಾವುದೇ ರಜಾದಿನವನ್ನು ಲೆಕ್ಕಿಸದೇ ತಾನು ಕಾರ್ಯನಿರ್ವಹಿಸಿದ ಆತ್ಮತೃಪ್ತಿ ನನಗಿದೆ.
-ಶ್ರೀಮತಿ ಮೇಬಲ್ ಗ್ರೇಸಿ ಮಾಡ್ತಾ, ನಿವೃತ್ತ ಕಾರ್ಯದರ್ಶಿ, ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ










