







ಸೆ.18ರ ಮಂಗಳೂರು ಸಚಿವ ಸಂಪುಟ ಸಭೆ ಐತಿಹಾಸಿಕ : ಕೃಷ್ಣ ಪ್ರಸಾದ್ ಆಳ್ವ


ಪುತ್ತೂರು: ಬೆಂಗಳೂರಿನ ಹೊರಗೆ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿ ಹಾಗೂ ಬಹುದಿನಗಳ ಸಮಸ್ಯೆಗಳ ಕುರಿತು ಮಹತ್ವದ ನಿರ್ಧಾರಗಳು ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಹೇಳಿದರು.



ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದ ಸಮಗ್ರ ಅಭಿವೃದ್ಧಿಯ ಜತೆಗೆ ಕರಾವಳಿ ಭಾಗದ ಮಾನವ ಸಂಪನ್ಮೂಲ, ಪ್ರವಾಸೋದ್ಯಮ ಹಾಗೂ ಇಲ್ಲಿನ ನೈಸರ್ಗಿಕ ಪರಿಸರದ ಸದ್ಬಳಕೆಗೆ ಸಂಬಂಧಿಸಿದಂತೆ ಹಲವು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುವುದು ಸರಕಾರದ ಉದ್ದೇಶವಾಗಿದೆ ಎಂದರು.
ತುಳು ಭಾಷೆ, ಕರಾವಳಿ ಅಭಿವೃದ್ಧಿ ಪ್ರಸ್ತಾವನೆ
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ವಿಧಾನಸಭೆಯ ಪ್ರಥಮ ಅಧಿವೇಶನದಲ್ಲಿಯೇ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದು, ಕರಾವಳಿ ಅಭಿವೃದ್ಧಿ ಹಾಗೂ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಈ ಪ್ರಸ್ತಾವನೆಗಳು ಹಣಕಾಸು ಮತ್ತು ಕಾನೂನು ಇಲಾಖೆಗಳ ಪರಿಶೀಲನೆಯ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ ಎಂದು ಕೃಷ್ಣ ಪ್ರಸಾದ್ ಆಳ್ವ ಹೇಳಿದರು.
ತುಳುನಾಡಿನ ಸಮಗ್ರ ಪ್ರಗತಿಯ ದೃಷ್ಟಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಿಂತನೆ ನಡೆಸುತ್ತಿದ್ದು, ಕರಾವಳಿಯ ಬಹುದಿನಗಳ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರ ಮುಂದಾಗಿದೆ ಎಂದು ಅವರು ಹೇಳಿದರು.
ಪುತ್ತೂರಿನ ಅಭಿವೃದ್ಧಿ ಕಾರ್ಯಗಳ ಪಟ್ಟಿ
ಶಾಸಕ ಅಶೋಕ್ ಕುಮಾರ್ ರೈ ಅವರ ಮೂಲಕ ಪುತ್ತೂರು ಹಾಗೂ ಕರಾವಳಿ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದ ಕೃಷ್ಣ ಪ್ರಸಾದ್ ಆಳ್ವ ಅವರು ಪ್ರಮುಖ ಯೋಜನೆಗಳನ್ನು ವಿವರಿಸಿದರು. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕ್ಲಿಯರೆನ್ಸ್ ಘೋಷಣೆ, ಪಶುವೈದ್ಯಕೀಯ ಕಾಲೇಜು ಆರಂಭಕ್ಕೆ ಒತ್ತಡ, ಆರ್ಟಿಒ ಟ್ರ್ಯಾಕ್ ನಿರ್ಮಾಣ, ಮುಂಡೂರಿನಲ್ಲಿ ರೂ.9.50 ಕೋಟಿ ವೆಚ್ಚದಲ್ಲಿ 15.50 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ಅಭಿವೃದ್ಧಿ, ಅಕ್ರಮ-ಸಕ್ರಮ ಕಡತಗಳ ವಿಲೇವಾರಿಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ, ಪುತ್ತೂರು ತಾಲೂಕಿಗೆ 15 ಕೆಪಿಎಸ್ ಶಾಲೆಗಳ ಮಂಜೂರು, ಐದು ಶಾಲೆಗಳ ಘೋಷಣೆ, ರೂ.3 ಕೋಟಿ ವೆಚ್ಚದಲ್ಲಿ ಬೀರಮಲೆ ಬೆಟ್ಟ ಅಭಿವೃದ್ಧಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ಹಾಗೂ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನಗಳ ಅಭಿವೃದ್ಧಿ, ಅಂತರ್ರಾಜ್ಯ ಮಾಣಿಲ ಸೇತುವೆಗೆ ರೂ.26 ಕೋಟಿ ಅನುದಾನ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ಸಚಿವ ಸಂಪುಟ ಸಭೆ ಬಳಿಕ ವಿಜಯೋತ್ಸವ
ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯ ಬಳಿಕ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ ನಡೆಸಲಾಗುವುದು. ವಿಜಯ ರಥದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕುಳ್ಳಿರಿಸಿ, ತುಳುನಾಡಿನ ಸಂಪ್ರದಾಯದಂತೆ ಚೆಂಡೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿದೆ ಎಂದು ಕೃಷ್ಣ ಪ್ರಸಾದ್ ಆಳ್ವ ತಿಳಿಸಿದರು. ಈ ಕುರಿತು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಪ್ರತಿಯೊಂದು ಬ್ಲಾಕ್ನಿಂದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಚಿವ ಸಂಪುಟದ ಸದಸ್ಯರನ್ನು ಸ್ವಾಗತಿಸುವಂತೆ ಸೂಚಿಸಲಾಗಿದೆ ಎಂದರು. ಮಂಗಳೂರಿನ ವಿವಿಧ ಸರ್ಕಲ್ಗಳು ಹಾಗೂ ನಗರದ ಪ್ರಮುಖ ಪ್ರದೇಶಗಳನ್ನು ದೀಪಾಲಂಕಾರ, ಪ್ಲೆಕ್ಸ್ಗಳು, ತುಳು ಧ್ವಜ, ಕನ್ನಡ ಧ್ವಜ ಹಾಗೂ ರಾಷ್ಟ್ರಧ್ವಜಗಳಿಂದ ಅಲಂಕರಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಅಭಿವೃದ್ಧಿಗೆ ವಿರೋಧ ಪಕ್ಷ ಸಹಕರಿಸಲಿ:
ವಿರೋಧ ಪಕ್ಷದವರು ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಕೃಷ್ಣ ಪ್ರಸಾದ್ ಆಳ್ವ, ಪುತ್ತೂರಿನಲ್ಲಿ ದೇವಸ್ಥಾನಗಳ ಅಭಿವೃದ್ಧಿ, ಕ್ರೀಡಾಂಗಣ ಹಾಗೂ ಮೆಡಿಕಲ್ ಕಾಲೇಜು ಸೇರಿದಂತೆ ವಿವಿಧ ಯೋಜನೆಗಳಿಗೆ ಅಡ್ಡಿಯಾಗದಂತೆ ಮನವಿ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ 136 ಸ್ಥಾನಗಳ ಬಹುಮತದೊಂದಿಗೆ ಅಧಿಕಾರದಲ್ಲಿದ್ದು, ಕರಾವಳಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಹಂತದಲ್ಲಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಳ ಅವರು ಪತ್ರಿಕಾಗೋಷ್ಠಿ ನಡೆಸಿ, ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಮನವಿಗಳನ್ನು ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸರಕಾರ ಕೈಗೊಂಡಿರುವ ಅಭಿವೃದ್ಧಿ ವಿಚಾರಗಳಿಗೆ ತಮ್ಮ ಮನವಿಗಳ ಮೂಲಕ ತಾವೇ ಕಾರಣಕರ್ತರು ಎಂಬ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ಮಾಡಬಾರದು ಎಂದು ಹೇಳಿದರು. ಸೆ.18ರಂದು ಬೆಂಗಳೂರಿನ ಹೊರಗೆ ಪ್ರಥಮ ಬಾರಿಗೆ ನಡೆಯಲಿರುವ ಸಚಿವ ಸಂಪುಟ ಸಭೆ ಕರಾವಳಿಯ ಪಾಲಿಗೆ ಮಹತ್ವದ ಸಂದರ್ಭವಾಗಿದ್ದು, ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸದಸ್ಯರನ್ನು ಸ್ವಾಗತಿಸಲು ಮಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅವರು ಕರೆ ನೀಡಿದರು.
“ದೃಢ ಕರ್ನಾಟಕ ಸಂಕಲ್ಪ – ಅಭಿವೃದ್ಧಿಯ ಕರಾವಳಿ – ಬಲಿಷ್ಠ ಭಾರತ” ಎಂಬ ಆಶಯದೊಂದಿಗೆ ಸರಕಾರ ಅಭಿವೃದ್ಧಿಗೆ ಮುಂದಾಗಿದೆ ಎಂದು ಕೃಷ್ಣ ಪ್ರಸಾದ್ ಆಳ್ವ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರವಿ ಪ್ರಸಾದ್ ಶೆಟ್ಟಿ, ಸೆರೂನ್ ಸಿಕ್ವೆರಾ, ಮಹಿಳಾ ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ ಹಾಗೂ ಕಾರ್ಯದರ್ಶಿ ಸಾಯಿರಾ ಬಾನು ಉಪಸ್ಥಿತರಿದ್ದರು.










