ಕಿಲ್ಲೆ ಮೈದಾನದ ಬಳಿ ಸಂಜೀವಿನಿ ಮಾಸಿಕ ಸಂತೆ-ವಿವಿಧ ಒಕ್ಕೂಟಗಳ ಮಳಿಗೆಗಳ ಉದ್ಘಾಟನೆ, ಸಾವಯವ ಉತ್ಪನ್ನಗಳ ಮಾರಾಟ

0

ಪುತ್ತೂರು: ಇಲ್ಲಿನ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿರುವ 69ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಮೈದಾನದ ಹೊರಭಾಗದಲ್ಲಿ ಹಾಕಲಾಗಿರುವ ಬೃಹತ್ ಸಂಜೀವಿನಿ ಮಾಸಿಕ ಸಂತೆಯನ್ನು ಸೆ.19ರಂದು ಉದ್ಘಾಟಿಸಲಾಯಿತು.

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಪುತ್ತೂರು-ಕಡಬ ಹಾಗೂ ಸಂಜೀವಿನಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟಗಳ ಸಹಯೋಗದೊಂದಿಗೆ ಸ್ವ ಸಹಾಯ ಸಂಘಗಳ ಸದಸ್ಯರು ಮಾಡಿದ ಕೃಷಿ ಹಾಗೂ ಕೃಷಿಯೇತರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ನಗರಸಭೆ ಪೌರಾಯುಕ್ತೆ ವಿದ್ಯಾ ಎಸ್ ಕಾಳೆ, ಪುತ್ತೂರು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಕಿಲ್ಲೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅಭಿಜಿತ್ ಅವರು ದೀಪ ಬೆಳಗಿಸುವ ಮೂಲಕ ಮಾಸಿಕ ಸಂತೆಗೆ ಚಾಲನೆ ನೀಡಿ ಶುಭಹಾರೈಸುವುದರ ಜೊತೆಗೆ ಗ್ರಾಹಕರ ಬೆಂಬಲ ಕೋರಿದರು.

ಪುತ್ತೂರು ಮತ್ತು ಕಡಬ ತಾಲೂಕುಗಳ ಎಲ್ಲಾ ಸಂಜೀವಿನಿ ಒಕ್ಕೂಟಗಳು ಈ ಸಂತೆಯಲ್ಲಿ ಭಾಗಿಯಾಗಿವೆ. ನಗರಸಭೆ ಮತ್ತು ತಾಲೂಕು ಪಂಚಾಯತ್ ಸಿಬ್ಬಂದಿಗಳು, ಮಹಿಳಾ ಉದ್ಯಮಿಗಳು, ವಿವಿಧ ಸಂಜೀವಿನಿ ಒಕ್ಕೂಟಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಭಾಗಿಯಾಗಿದ್ದರು. ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟ ಮುಂಡೂರು ಇದರ ಕಾರ್ಯದರ್ಶಿ, ಈಶ ಸಂಜೀವಿನಿ ಒಕ್ಕೂಟದ ಜೊತೆ ಕಾರ್ಯದರ್ಶಿ ಚೈತ್ರಾ ಮಧುಚಂದ್ರ ಸ್ವಾಗತಿಸಿ, ಡೇ-ಎನ್‌ಆರ್‌ಎಲ್‌ಎಂ ವಲಯ ಮೇಲ್ವಿಚಾರಕಿ ನಮಿತಾ ನಿರೂಪಿಸಿ ವಂದಿಸಿದರು.

ಸಾವಯವಾಗಿ ಬೆಳೆದ ತರಕಾರಿಗಳು, ಗಿಡಗಳು, ಕಬ್ಬಿನ ಹಾಲು, ಮಜ್ಜಿಗೆ, ಪೂಜಾ ಸಾಮಾಗ್ರಿ, ತೆಂಗಿನ ಚಿಪ್ಪಿನಿಂದ ತಯಾರಿಸಿದ ಆಕೃತಿಗಳು, ಮನೆಯಲ್ಲೇ ತಯಾರಿಸಿದಂತಹ ಗೃಹೋಪಯೋಗಿ ವಸ್ತುಗಳು, ಹಪ್ಪಳ, ಸೆಂಡಿಗೆ, ಉಪ್ಪಿನಕಾಯಿ, ಸ್ನಾಕ್ಸ್ ಮತ್ತು ಸ್ವೀಟ್ಸ್ ಇತ್ಯಾದಿಗಳು ಇಲ್ಲಿ ಲಭ್ಯವಿವೆ. ಗಾಂಧಾರಿ ಮೆಣಸು, ಕಪ್ಪು ದ್ರಾಕ್ಷಿ ಮತ್ತು ನಕ್ಷತ್ರ ಹಣ್ಣುಗಳಿಂದ ತಯಾರಿಸಿದ ವೈನ್ ಇಲ್ಲಿನ ವಿಶೇಷವಾಗಿದೆ.

LEAVE A REPLY

Please enter your comment!
Please enter your name here