ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಈಶ್ವರಮಂಗಲ ಶಾಖೆಯ ನವೀಕೃತ ಬ್ಯಾಂಕಿಂಗ್ ವಿಭಾಗದ ಉದ್ಘಾಟನೆ

0

ರೈತರ ಕಷ್ಟಗಳಿಗೆ ಸ್ಪಂದಿಸುವ ಸಹಕಾರ ಸಂಘ ಇದಾಗಿದೆ: ಶಶಿಕುಮಾರ್ ರೈ ಬಾಲ್ಯೊಟ್ಟು

ಸ್ವಂತ ಬಂಡವಾಳದಿಂದ ಬೆಳೆ ಸಾಲ ನೀಡುವ ಏಕೈಕ ಸಂಘ ಇದಾಗಿದೆ: ಎಸ್.ಬಿ.ಜಯರಾಮ ರೈ ಬಳಜ್ಜ

ಸಂಘದ ಬೆಳವಣಿಗೆಗೆ ಸದಸ್ಯರೇ ಮೂಲ ಸೂತ್ರಧಾರರು: ಎಸ್.ಎಂ ರಘು

ಒಂದೇ ಮನೆಯವರಂತೆ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯ: ನನ್ಯ ಅಚ್ಚುತ ಮೂಡೆತ್ತಾಯ

ಪುತ್ತೂರು: ಕಾವು ಕೃಷಿ ಪತ್ತಿನ ಸಹಕಾರ ಸಂಘದ ಈಶ್ವರಮಂಗಲ ಶಾಖೆಯ ನವೀಕೃತ ಬ್ಯಾಂಕಿಂಗ್ ವಿಭಾಗದ ಉದ್ಘಾಟನೆಯೊಂದಿಗೆ ಈ ಭಾಗದ ರೈತ ಬಾಂಧವರಿಗೆ ಒಂದೇ ಸೂರಿನಡಿ ಎಲ್ಲಾ ವ್ಯವಸ್ಥೆಗಳು ಸಿಗುವ ಮೂಲಕ ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಈ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಮಾಡಿದೆ. ಕಾವು ಕೃಷಿಪತ್ತಿನ ಸಹಕಾರ ಸಂಘಕ್ಕೆ ದೀರ್ಘ ಇತಿಹಾಸವಿದ್ದು ಅಫೆಕ್ಸ್ ಬ್ಯಾಂಕ್‌ನಿಂದ ಪ್ರಪ್ರಥಮ ಪ್ರಶಸ್ತಿ ಪಡೆದ ತಾಲೂಕಿನ ಏಕೈಕ ಸಂಘ ಇದಾಗಿದೆ. ಈಶ್ವರಮಂಗಲ ಹಾಗೇ ಕರ್ನೂರು ಶಾಖೆಯ ಮುಖಾಂತರ ರೈತರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಹಾಗೇ ನೇರವಾಗಿ ಶಾಖೆಗಳ ಮೂಲಕವೇ ರೈತರಿಗೆ ಸಾಲ ಪತ್ರ ವಿತರಣೆ ಮಾಡುತ್ತಿರುವ ಸಂಘದ ಕಾರ್ಯಕ್ಕೆ ಅಭಿನಂದನೆಗಳಲ್ಲಿ ಸಲ್ಲಿಸುತ್ತೇನೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.

ಅವರು ಸೆ.19 ರಂದು ಈಶ್ವರಮಂಗಲದಲ್ಲಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಈಶ್ವರಮಂಗಲ ಶಾಖೆಯ ನವೀಕೃತ ಬ್ಯಾಂಕಿಂಗ್ ವಿಭಾಗವನ್ನು ರಿಬ್ಬನ್ ತುಂಡರಿಸಿ,ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಒಂದು ಕಾದಲ್ಲಿ ಜಯರಾಮ ರೈ ಸಾಂತ್ಯರವರ ಅಧ್ಯಕ್ಷತೆಯಲ್ಲಿ ಸಂಘವನ್ನು ಬೆಳೆಸುವ ಕಾರ್ಯ ನಡೆದಿದ್ದು ಇಂದು ಅವರ ಫೋಟೋ ಇಟ್ಟು ಅದಕ್ಕೆ ಹೂ ಹಾರ ಹಾಕುವ ಮೂಲಕ ಅವರನ್ನು ನೆನಪಿಸುವ ಕೆಲಸ ಆಗಿರುವುದು ಅತ್ಯಂತ ಒಳ್ಳೆಯ ವಿಚಾರ ಎಂದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಸಂಘವನ್ನು ಬೆಳೆಸಿದವರನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವುದು ಅತೀ ಮುಖ್ಯ ಎಂದರು. ಅವರ ನಂತರ ನನ್ಯ ಅಚ್ಚುತ ಮೂಡೆತ್ತಾಯರವರ ಅಧ್ಯಕ್ಷತೆಯಲ್ಲಿ ಸಂಘವು ಅತ್ಯಂತ ಎತ್ತರದ ಸ್ಥಾನಕ್ಕೆ ತಲುಪಿದ್ದು ಈ ಹಿನ್ನೆಲೆಯಲ್ಲಿ ಸಂಘದ ಆಡಳಿತ ಮಂಡಳಿ ಹಾಗೇ ಸಿಬ್ಬಂದಿ ವರ್ಗ ಮತ್ತು ರೈತ ಸದಸ್ಯ ಬಾಂಧವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.


ಸ್ವಂತ ಬಂಡವಾಳದಿಂದ ಬೆಳೆ ಸಾಲ ನೀಡುವ ಏಕೈಕ ಸಂಘ ಇದಾಗಿದೆ: ಎಸ್.ಬಿ.ಜಯರಾಮ ರೈ ಬಳಜ್ಜ
ಭದ್ರತಾ ಕೊಠಡಿ ಉದ್ಘಾಟಿಸಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳಜ್ಜರವರು ಮಾತನಾಡಿ, ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದು ಮುಖ್ಯವಲ್ಲ ಬದುಕಿನಲ್ಲಿ ನಾವು ಏನು ಮಾಡಿದ್ದೇವೆ ಎನ್ನುವುದು ಬಹಳಷ್ಟು ಮುಖ್ಯವಾಗುತ್ತದೆ. 8 ನೇ ಬಾರಿಗೆ ಅಧ್ಯಕ್ಷರಾಗಿದ್ದುಕೊಂಡು ಕೃಷಿ ಪತ್ತಿನ ಸಹಕಾರ ಸಂಘವನ್ನು ಮುನ್ನಡೆಸಿದ ರೀತಿ, ರೈತರಿಗೆ ಕೊಟ್ಟ ಸೇವೆಗೆ ನನ್ಯ ಅಚ್ಚುತ ಮೂಡೆತ್ತಾಯರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು ನಮಗೆಲ್ಲರಿಗೂ ಅವರು ಮಾದರಿಯಾಗಿದ್ದಾರೆ ಅದೇ ರೀತಿ ಒಂದು ಕಾಲದಲ್ಲಿ ಜಯರಾಮ ರೈ ಸಾಂತ್ಯರಂತವರು ಸಂಘವನ್ನು ಎತ್ತಿ ಬೆಳೆಸಿದ ಅವರ ಸೇವೆಗೆ ನಾವು ಕೃತಜ್ಞರಾಗಿರಬೇಕಾಗಿದೆ. ಸಾಲ ಕೊಡುವುದರಲ್ಲಿ ಹಾಗೇ ಮರುಪಾವತಿಯಲ್ಲಿ ಶೇ.100 ಸಾಧನೆಯನ್ನು ತೋರಿಸುತ್ತಿರುವ ಕಾವು ಹಾಗೇ ಕರ್ನೂರು, ಈಶ್ವರಮಂಗಲ ಸಂಘದ ಸಾಧನೆ ಅಪಾರವಾಗಿದೆ. ತನ್ನ ಸ್ವಂತ ಬಂಡವಾಳದಿಂದ ಬೆಳೆ ಸಾಲ ನೀಡುತ್ತಿರುವ ಏಕೈಕ ಸಂಘ ಇದಾಗಿದೆ ಎನ್ನುವುದು ಬಹಳಷ್ಟು ಖುಷಿಯ ವಿಚಾರವಾಗಿದೆ. ಇದೀಗ ರೈತರಿಗೆ ಸಂಪೂರ್ಣ ಸೇವೆಯನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ನವೀಕೃತ ಬ್ಯಾಂಕಿಂಗ್ ವಿಭಾಗ ಆರಂಭಗೊಂಡಿದ್ದು ರೈತ ಬಾಂಧವರು ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಹೇಳಿ ಶುಭ ಹಾರೈಸಿದರು.



ಸಂಘದ ಬೆಳವಣಿಗೆಗೆ ಸದಸ್ಯರೇ ಮೂಲ ಸೂತ್ರಧಾರರು: ಎಸ್.ಎಂ ರಘು
ಮುಖ್ಯ ಅತಿಥಿಯಾಗಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಸ್.ಎಂ.ರಘುರವರು ಮಾತನಾಡಿ, ಯಾವುದೇ ಒಂದು ಸಹಕಾರ ಸಂಘ ಅಭಿವೃದ್ಧಿಯಾಗಬೇಕಾದರೆ ಅದಕ್ಕೆ ಮೂಲ ಕಾರಣೀಕರ್ತರು ಸಂಘದ ಸದಸ್ಯರೇ ಆಗಿರುತ್ತಾರೆ. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಮೂಲಕ ಸಂಘದ ಬೆಳವಣಿಗೆಯಲ್ಲಿ ಸದಸ್ಯರುಗಳು ಪ್ರಮುಖ ಪಾತ್ರ ವಹಿಸುತ್ತಾರೆ. ನಾವೇನಿದ್ದರೂ ಪಾತ್ರಧಾರರು, ಸದಸ್ಯರುಗಳೇ ಸೂತ್ರಧಾರರು ಆಗಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.

ಒಂದೇ ಮನೆಯವರಂತೆ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯ: ನನ್ಯ ಅಚ್ಚುತ ಮೂಡೆತ್ತಾಯ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ, 10 ರೂ ಷೇರು ಬಂಡವಾಳದಿಂದ ಆರಂಭವಾದ ಕಾವು ಕೃಷಿಪತ್ತಿನ ಸಹಕಾರ ಸಂಘಕ್ಕೆ ಇದೀಗ 112 ವರ್ಷಗಳು ಸಂದಿವೆ. ಈಶ್ವರಮಂಗಲ ಶಾಖೆಗೆ 50 ವರ್ಷಗಳು ಆಗಿದೆ. ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೇ ರೈತ ಸದಸ್ಯರುಗಳು ನಾವೆಲ್ಲರೂ ಒಂದೇ ಮನೆಯ ಸದಸ್ಯರುಗಳಂತೆ ಕೆಲಸ ಮಾಡಿದಾಗ ಯಾವುದೇ ಒಂದು ಸಹಕಾರ ಸಂಘದ ಅಭಿವೃದ್ಧಿ ಸಾಧ್ಯ. ಇದಕ್ಕೆ ನಮ್ಮ ಸಂಘ ಸಾಕ್ಷಿಯಾಗಿದೆ ಎಂದರು. ಸ್ವಂತ ಬಂಡವಾಳದಿಂದ ಕೃಷಿ ಸಾಲ ಕೊಡುತ್ತಿರುವ ಸಂಘವಿದ್ದರೆ ಅದು ನಮ್ಮ ಕೃಷಿಪತ್ತಿನ ಸಹಕಾರ ಸಂಘವಾಗಿದೆ ಎಂದ ಅವರು, ಸಂಘದ ಇತಿಹಾಸವನ್ನು ತಿಳಿದುಕೊಂಡು ಮುನ್ನಡೆಯಬೇಕಾದ ಅಗತ್ಯತೆ ಇದೆ. ಒಂದು ಕಾಲದಲ್ಲಿ ಸಂಘದ ಅಧ್ಯಕ್ಷರಾಗಿದ್ದ ಸಂಘವನ್ನು ಬೆಳೆಸಿದವರು ಜಯರಾಮ ರೈ ಸಾಂತ್ಯರವರು ಅವರ ನಂತರ ನಾನು ಅಧ್ಯಕ್ಷನಾಗಿ ತಮ್ಮೆಲ್ಲರ ಸಹಕಾರದಿಂದ ಸಂಘವನ್ನು ಮುನ್ನಡೆಸುತ್ತಾ ಬಂದಿದ್ದೇನೆ. ಆಡಳಿತ ಮಂಡಳಿಯವರ ವಿಶ್ವಾಸ, ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಸೇವೆ ಹಾಗೇ ರೈತ ಸದಸ್ಯರುಗಳು ಉತ್ತಮ ಸ್ಪಂದನೆಯಿಂದ ಸಂಘದ ಅಭಿವೃದ್ಧಿ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.ಕಾನೂನಿನ ಅಡಿಯಲ್ಲಿ ಎಲ್ಲಾ ಸಾಲಗಳನ್ನು ಕೂಡ ರೈತ ಸದಸ್ಯರುಗಳಿಗೆ ನೀಡಲು ನಮ್ಮ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಂಘ ಹಾಗೇ ಈಶ್ವರಮಂಗಲ ಮತ್ತು ಕರ್ನೂರು ಶಾಖೆ ಸದಾ ಸಿದ್ದವಿದೆ ಎಂಬ ಮಾತನ್ನು ಹೇಳಿದ ಅವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.



ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮ್ ಪಿ.ರವರು, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 112 ವರ್ಷಗಳಾಗಿದ್ದು ಅದೇ ರೀತಿ 1976 ರಲ್ಲಿ ಆರಂಭವಾದ ಈಶ್ವರಮಂಗಲ ಶಾಖೆಗೆ 50 ವರ್ಷಗಳು ತುಂಬಿದೆ.1980 ರಿಂದ 85 ರ ತನಕ ಜಯರಾಮ ರೈ ಸಾಂತ್ಯರವರು ಸಂಘದ ಅಧ್ಯಕ್ಷರಾಗಿದ್ದುಕೊಂಡು ಸಂಘಕ್ಕೆ ಒಂದು ಭದ್ರ ಬುನಾದಿಯನ್ನು ಹಾಕಿಕೊಟ್ಟರು ಆ ಬಳಿಕ ನನ್ಯ ಅಚ್ಚುತ ಮೂಡೆತ್ತಾಯರವರು ಅಧ್ಯಕ್ಷರಾಗಿದ್ದುಕೊಂಡು ಸಂಘದ ಸಂಪೂರ್ಣ ಬೆಳವಣಿಗೆಯಲ್ಲಿ ಶ್ರಮಿಸುತ್ತಿದ್ದಾರೆ. ಒಂದೇ ಸೂರಿನಡಿ ಎಲ್ಲವನ್ನು ರೈತ ಸದಸ್ಯರಿಗೆ ನೀಡುವ ಉದ್ದೇಶವನ್ನಿಟ್ಟುಕೊಂಡು ಈಶ್ವರಮಂಗಲದಲ್ಲಿ ನವೀಕೃತ ಬ್ಯಾಂಕಿಂಗ್ ವಿಭಾಗವನ್ನು ಆರಂಭಿಸಿದ್ದೇವೆ. ಇದೇ ರೀತಿಯಲ್ಲಿ ಕರ್ನೂರ್‌ನಲ್ಲೂ ರೈತರಿಗೆ ಎಲ್ಲಾ ರೀತಿಯ ಸೇವೆಗಳನ್ನು ನೀಡುತ್ತಿದ್ದೇವೆ. ರೈತ ಸದಸ್ಯರುಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೇಳಿಕೊಂಡು ಎಲ್ಲರ ಸಹಕಾರವನ್ನು ಕೋರಿದರು. ಈಶ್ವರಮಂಗಲ ಶಾಖೆಯ ನವೀಕೃತ ಕಟ್ಟಡ ಹಾಗೂ ಇಂಟರ್‌ಲಾಕ್ ಅಳವಡಿಕೆಗೆ ಸಹಾಯಧನ ನೀಡುವಂತೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಿಗೆ ಸಂಘದ ವತಿಯಿಂದ ಮನವಿಯನ್ನು ಶಶಿಕುಮಾರ್ ರೈ ಬಾಲ್ಯೊಟ್ಟುರವರ ಮೂಲಕ ನೀಡಲಾಯಿತು. ಇದಕ್ಕೆ ಸ್ಪಂದನೆ ನೀಡಿದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಈ ಬಗ್ಗೆ ಅಧ್ಯಕ್ಷರಲ್ಲಿ ಮಾತುಕತೆ ನಡೆಸಿ ಸಹಾಯಧನ ನೀಡುತ್ತೇವೆ ಎಂದು ತಿಳಿಸಿದರು. ಸಿಬ್ಬಂದಿ ಅಭಿಷೇಕ್ ಮನವಿ ಪತ್ರ ವಾಚಿಸಿದರು. ಕಟ್ಟಡ ನವೀಕರಣದಲ್ಲಿ ಸಹಕರಿಸಿದ ಇಂಜಿನಿಯರ್ ರೋಹಿತಾಕ್ಷ, ಅತುಲ್ ರೈ, ಕೃಷ್ಣ ಕುಮಾರ್ ರೈ ಕೆದಂಬಾಡಿ ಗುತ್ತುರವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಆರಂಭದಲ್ಲಿ ಸಂಘದ ಅಧ್ಯಕ್ಷರಾಗಿದ್ದ ದಿ.ಜಯರಾಮ ರೈ ಸಾಂತ್ಯರವರ ಭಾವಚಿತ್ರಕ್ಕೆ ಹೂ ಹಾರ ಹಾಕುವ ಮೂಲಕ ಗೌರವ ಸೂಚಿಸಲಾಯಿತು.

ಸಂಘದ ಸಿಬ್ಬಂದಿ ಶೋಭಾ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಮಂಜುನಾಥ ರೈ ಸಾಂತ್ಯ ಸ್ವಾಗತಿಸಿದರು.ನಿರ್ದೇಶಕರುಗಳಾದ ರಮೇಶ್ ಪೂಜಾರಿ ಮುಂಡ್ಯ, ರಾಮಣ್ಣ ನಾಯ್ಕ್, ಮೋಹನಾಂಗಿ, ನೌಹುಷ ಭಟ್, ಪ್ರಫುಲ್ಲ ರೈ, ಲೋಕೇಶ್ ಚಾಕೋಟೆ ಅತಿಥಿಗಳಿಗೆ ಹೂ, ಶಾಲು ಹಾಕಿ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ ವಂದಿಸಿದರು. ಸಂಘದ ಸಿಬ್ಬಂದಿ ಸುನೀಲ್ ಕಾವು ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿ ನಿರ್ದೇಶಕರುಗಳು, ಸಿಬ್ಬಂದಿ ವರ್ಗದವರು, ರೈತ ಸದಸ್ಯರುಗಳು ಉಪಸ್ಥಿತರಿದ್ದರು.

ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ ಸನ್ಮಾನ
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟುವರಿಗೆ ಈ ಸಂದರ್ಭದಲ್ಲಿ ಸನ್ಮಾನದ ಗೌರವಾರ್ಪಣೆ ಮಾಡಲಾಯಿತು. ಹೂ ಹಾರ ಹಾಕಿ ಪೇಟಾ ತೊಡಿಸಿ,ಫಲಪುಷ್ಪ, ಸ್ಮರಣಿಕೆಗಳನ್ನು ಅರ್ಪಿಸುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಸಿಬ್ಬಂದಿ ಸಂದೇಶ್‌ರವರು ಸನ್ಮಾನ ಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕವಾಗಿ ಮುಂಡ್ಯ ಶ್ರೀಕೃಷ್ಣ ಭಟ್, ಮಾಜಿ ಅಧ್ಯಕ್ಷ ಶರತ್ ಕುಮರ್, ದಿನೇಶ್ ರಾವ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ, ಸಿಬ್ಬಂದಿಗಳು ಶಶಿಕುಮಾರ್ ರೈಯವರಿಗೆ ಹೂಹಾರ ಹಾಕಿ,ಹೂ ಕೊಟ್ಟು ಅಭಿನಂದನೆ ಸಲ್ಲಿಸಿದರು.



ನನ್ನ ಗೆಲುವನ್ನು ರೈತ ಬಾಂಧವರಿಗೆ ಅರ್ಪಿಸುತ್ತೇನೆ
ಸನ್ಮಾನ ಸ್ವೀಕರಿಸಿದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲಕ್ಕೆ 62 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಅವಕಾಶ ಸಿಕ್ಕಿದೆ. ಅದರಲ್ಲೂ ನನ್ನಂತಹ ರೈತನನ್ನು ನಿರ್ದೇಶಕರನ್ನಾಗಿ ಮಾಡುವಲ್ಲಿ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್ ರಾಜೇಂದ್ರ ಕುಮಾರ್‌ರವರ ಕೃಪಾ ಆಶೀರ್ವಾದಿಂದ ಇದೆಲ್ಲಾ ಆಗಿದೆ ಎಂದ ಶಶಿಕುಮಾರ್ ರೈ ಬಾಲ್ಯೊಟ್ಟುರವರು, ಸಹಕಾರ ಮಹಾಮಂಡಲದಲ್ಲಿ 7 ಶಾಸಕರು, ಮೂವರು ಮಂತ್ರಿಗಳು ಸೇರಿದಂತೆ 13 ಮಂದಿ ನಿರ್ದೇಶಕರಿದ್ದು ಅದರಲ್ಲಿ ಇರುವ ಏಕೈಕ ರೈತ ನಿರ್ದೇಶಕನೆಂದರೆ ನಾನಾಗಿದ್ದೇನೆ.ನನ್ನ ಗೆಲುವನ್ನು ಸಮಸ್ತ ರೈತ ಬಾಂಧವರಿಗೆ ಅರ್ಪಿಸುತ್ತೇನೆ ಮುಂದೆಯೂ ತಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here