ಸ್ಕಾರ್ಫ್ ವಿವಾದ ಬಿಜೆಪಿಯ ಚುನಾವಣಾ ಅಜೆಂಡಾ: ಎಂ ಬಿ ವಿಶ್ವನಾಥ ರೈ

0

ಪುತ್ತೂರು: ಉಡುಪಿಯ ಸರಕಾರಿ ಕಾಲೇಜಿನಲ್ಲಿ ಹುಟ್ಟಿಕೊಂಡ ಸ್ಕಾರ್ಫ್ ವಿವಾದ ಇದು ಬಿಜೆಪಿಯ ಚುನಾವಣಾ ಅಜೆಂಡಾವಾಗಿದ್ದು ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಸಣ್ಣ ವಿಚಾರಗಳಿಗೂ ಕೋಮು ಬಣ್ಣ ಬಳಿದು ಅದರಿಂದ ರಾಜಕೀಯ ಲಾಭ ಪಡೆಯುವುದೇ ಬಿಜೆಪಿ ಉದ್ದೇಶವಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಹೇಳಿದರು.

 


ಕುಂಬ್ರ ಫ್ಯಾಮಿಲಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಒಳಮೊಗ್ರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಕಾರ್ಫ್ ವಿಚಾರ ಅದನ್ನು ವಿವಾದ ಮಾಡುವ ಅಗತ್ಯವಿರಲಿಲ್ಲ. ರಾಜ್ಯದ ಶಿಕ್ಷಣ ಸಚಿವರಿಗೆ ಅದಕ್ಕೆ ಇತಿಶ್ರೀ ಹಾಡಬಹುದಿತ್ತು. ಶಿಕ್ಷಣ ಸಚಿವರು ಸಂಘಪರಿವಾರದ ಅಜೆಂಡಾವನ್ನು ಶಾಲಾ ಕಾಲೇಜು ಮೂಲಕ ಅನಾವರಣಗೊಳಿಸುತ್ತಿದ್ದಾರೆ. ಸ್ಕಾರ್ಫ್ ಅದು ಕೋಮು ಆಧಾರಿತ ವಿಚಾರವಲ್ಲದೇ ಇದ್ದರೂ ಅದನ್ನೇ ಒಂದು ಸಮುದಾಯಕ್ಕೆ ಬೊಟ್ಟು ಮಾಡಿ ವಿಭಜಿಸುವ ಕಾರ್ಯವನ್ನು ಮಾಡಿದ್ದು ನ್ಯಾಯವಲ್ಲ. ಇನ್ನು ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇದ್ದು ಉಡುಪಿಯಲ್ಲಿ ಕೋಮು ಗಲಭೆ ಉಂಟು ಮಾಡಲು ಬಿಜೆಪಿ ಎಲ್ಲಾ ಸಿದ್ದತೆಗಳನ್ನು ಈಗಾಗಲೇ ಮಾಡಿಕೊಂಡಂತೆ ಬಾಸವಾಗುತ್ತಿದ್ದು ಇದರಲ್ಲಿ ಸ್ಕಾರ್ಪ್ ವಿಚಾರವೂ ಸೇರಿಕೊಂಡಿದೆ ಎಂದು ಆರೋಪಿಸಿದರು.

ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ ಮಾತನಾಡಿ ಜಾತ್ಯಾತೀತ ರಾಷ್ಟ್ರವಾದ ಭಾರತದಲ್ಲಿ ಅವರವರ ಧರ್ಮಾನುಸಾರ ಬದುಕುವ ಹಕ್ಕನ್ನು ಇಲ್ಲಿ ಸಂವಿಧಾನ ನೀಡಿದೆ. ಸ್ಕಾರ್ಫ್ ವಿಚಾರವನ್ನು ವಿವಾದ ಮಾಡುವ ಅಗತ್ಯವಿರಲಿಲ್ಲ. ಸರಕಾರಿ ಶಾಲೆಗಳಲ್ಲಿ ಪ್ರತೀ ವರ್ಷ ನಡೆಯುವ ಶಾರದಾ ಪೂಜೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ ಎಲ್ಲೂ ವಿರೋಧ ಮಾಡಲಿಲ್ಲ, ಸರಕಾರಿ ಕಚೇರಿ, ಸರಕಾರಿ ಬಸ್ಸುಗಳಲ್ಲಿ ಫೋಟೋ ಇಡುವಾಗಲೂ ಯಾವ ಅಲ್ಪಸಂಖ್ಯಾತರೂ ವಿರೋಧ ಮಾಡಲಿಲ್ಲ, ಮಾಡುವುದೂ ಇಲ್ಲ ಯಾಕೆಂದರೆ ಅಲ್ಪಸಂಖ್ಯಾತರಿಂದ ಇಲ್ಲಿ ಯಾವುದೇ ಸಂಘರ್ಷ ಉಂಟಾಗಬಾರದು. ಎಲ್ಲರೂ ಸಮಾನತೆಯಿಂದ ಬಾಳುವ ಭಾರತದಲ್ಲಿ ಅನಗತ್ಯ ವಿವಾದವನ್ನು ಸೃಷ್ಟಿ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಒಳಮೊಗ್ರು ಗ್ರಾಪಂ ಮಾಜಿ ಸದಸ್ಯ ಮಂಜಣ್ಣ ಪುಜಾರಿಯವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಗ್ರಾಪಂ ಸದಸ್ಯೆ ಚಿತ್ರಾ ಬಿ ಸಿ ಯವರು ಮೃತರ ಗುಣಗಾನ ಮಾಡಿದರು.

ಸನ್ಮಾನ
ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಮದ ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾದ ಸುಗಂಧ ವ್ಯಾಪಾರಿ ಅಬೂಬಕ್ಕರ್ ಶೇಕಮಲೆ ಅವರನ್ನು ಪುತ್ತೂರು ಬ್ಲಾಕ್ ಮತ್ತು ಒಳಮೊಗ್ರು ವಲಯ ಸಮಿತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ಫಲಪುಷ್ಪಗಳನ್ನು ನೀಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಪೂಜಾರಿ ಬೊಳ್ಳಾಡಿ, ರಕ್ಷಿತ್ ರೈ ಮುಗೇರು, ಗ್ರಾಪಂ ಸದಸ್ಯರಾದ ವಿನೋದ್‌ಶೆಟ್ಟಿ ಮುಡಾಲ, ಅಶ್ರಫ್ ಯುಕೆ, ವಲಯ ಉಪಾಧ್ಯಕ್ಷ ಮಹಮ್ಮದ್ ಬೊಳ್ಳಾಡಿ, ಕಾರ್ಯದರ್ಶಿ ಸಲಾಮುದ್ದೀನ್ ಕುಂಬ್ರ, ಹಬೀಬ್ ತಿಂಗಳಾಡಿ,ಕುಂಞ ಮೊಗೇರ, ಮಹಮ್ಮದ್ ಮುಡಾಲ, ವಲಯ ಜೊತೆ ಕಾರ್ಯದರ್ಶಿ ಮಹಮ್ಮದ್ ಮುಝಮ್ಮಿಲ್, ಜರ್ಮಿಕುಟಿನ್ಹಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here