ವಿಟ್ಲ: ತುಂಬಿ ಹರಿಯುತ್ತಿರುವ ನೇತ್ರಾವತಿ ನದಿಯ ಪಕ್ಕದಲ್ಲಿದ್ದ ತೋಡೊಂದರಲ್ಲಿ ಮೀನು ಹಿಡಿಯಲು ಸ್ನೇಹಿತರ ಜೊತೆ ತೆರಳಿದ್ದ ಯುವಕನೋರ್ವ ನೀರುಪಾಲಾದ ಘಟನೆ ಜು.4ರಂದು ಬಂಟ್ವಾಳ-ಬೆಳ್ತಂಗಡಿ ಗಡಿ ಪ್ರದೇಶವಾದ ಅಜಿಲಮೊಗರು ಕೂಟೇಲು ಬಳಿ ನಡೆದಿದೆ. ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹವನ್ನು ಜು.5ರಂದು ಅಲ್ಪ ದೂರದಲ್ಲಿ ನುರಿತ ಈಜುಗಾರರ ತಂಡ ಪತ್ತೆಮಾಡಿದೆ.
ಮಂಗಳೂರು ತಾಲೂಕಿನ ಸುರತ್ಕಲ್ ಕಾನ ನಿವಾಸಿ ಮೈಕಲ್(50 ವ.) ಮೃತ ದುರ್ದೈವಿ: ಮೈಕಲ್ ರವರು ತನ್ನ ಸ್ನೇಹಿತ ಸುದೀಪ್ ಜತೆ ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ಸಮೀಪದಲ್ಲಿರುವ ಸುದೀಪ್ ರವರ ಬಾವನ ಮನೆಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಗಮಿಸಿದ್ದರು. ಬಳಿಕ ಊಟ ಮುಗಿಸಿ ಸಂಜೆ 5 ಗಂಟೆ ಸುಮಾರಿಗೆ ನಾಲ್ವರು ಸೇರಿಕೊಂಡು ಮೀನು ಹಿಡಿಯಲು ಅಜಿಲಮೊಗರು ಭಾಗಕ್ಕೆ ತೆರಳಿದ್ದರು.
ಅಜಿಲಮೊಗರು ಕೂಟೇಲು ಸೇತುವೆ ಬಳಿ ನೇತ್ರಾವತಿ ನದಿ ಸೇರುವ ಪಕ್ಕದಲ್ಲೇ ಇರುವ ತೋಡಿಗೆ ಅಡ್ಡವಾಗಿ ನಿರ್ಮಿಸಿರುವ ಹಳೆಯ ಕಿಂಡಿ ಅಣೆಕಟ್ಟಿನ ಮೇಲೆ ನಿಂತು ಅವರೆಲ್ಲರೂ ಗಾಳ ಹಾಕುತ್ತಿದ್ದರು. ಆ ಬಳಿಕ ನಾಲ್ವರ ಪೈಕಿ ಇಬ್ಬರು ಮನೆಗೆ ತೆರಳಿದ್ದು, ಮೈಕಲ್ ಹಾಗೂ ಇನ್ನೋರ್ವರು ನಿಂತು ಗಾಳ ಹಾಕುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ನೀರಿಗೆ ಬಿದ್ದ ಮೈಕಲ್ ಅವರು ತನ್ನನ್ನು ರಕ್ಷಿಸುವಂತೆ ಕೈ ಮೇಲೆ ಎತ್ತಿ ಬೊಬ್ಬೆ ಹಾಕಿದರಾದರೂ ನೀರು ವೇಗದಿಂದ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ನೇರವಾಗಿ ತೋಡಿನಿಂದ ನೇತ್ರಾವತಿ ನದಿಯ ಕಡೆಗೆ ಕೊಚ್ಚಿ ಹೋಗಿದ್ದಾರೆ.
ಭಾರೀ ಮಳೆಯಿಂದ ನದಿ ಉಕ್ಕಿ ಹರಿಯುತ್ತಿದ್ದು, ದೋಣಿಯ ಮೂಲಕ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಆ ಬಳಿಕ ಬಂಟ್ವಾಳ ಅಗ್ನಿಶಾಮಕ ದಳದವರು ಆಗಮಿಸಿ ಹುಡುಕಾಟ ನಡೆಸಿದರೂ ನೀರಿನ ಹರಿವು ಹೆಚ್ಚಾಗಿದ್ದರಿಂದ ಹಾಗೂ ಕತ್ತಲಾಗಿದ್ದರಿಂದ ಕಾರ್ಯಾಚರಣೆಗೆ ತೊಂದರೆಯಾಗಿತ್ತು. ಜು.5ರಂದು ಬೆಳಿಗ್ಗೆ ನೇತ್ರಾವತಿ ನದಿಯಲ್ಲಿ ನೀರು ಇಳಿಕೆಯಾಗಿದ್ದು, ಸ್ಥಳೀಯ ನುರಿತ ಈಜುಗಾರರ ತಂಡ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಅಬ್ಬಾಸ್ ಕಡೇಶ್ವಾಲ್ಯ ಅವರ ದೋಣಿಯಲ್ಲಿ ಈಜುಗಾರರಾದ ಚೆರಿಯೆ ಮೋನು, ಸಮದ್, ಆರೀಫ್, ಪುತ್ತುಮೋನು ಹಾಗೂ ಬಾಲಕೃಷ್ಣ ರವರು ಶ್ರಮವಹಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಹರೀಶ್ ಮತ್ತು ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.