ಉದನೆ ಸೇತುವೆ ಲೋಕಾರ್ಪಣೆ – ಈಡೇರಿದ ಜನರ ಬಹುದಿನಗಳ ಬೇಡಿಕೆ

0

ನೆಲ್ಯಾಡಿ: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಡಿ ಸುಮಾರು 15 ಕೋಟಿ ರೂ., ವೆಚ್ಚದಲ್ಲಿ ಶಿರಾಡಿ ಹಾಗೂ ಕೊಣಾಜೆ ಗ್ರಾಮ ಸಂಪರ್ಕಿಸಲು ಉದನೆಯಲ್ಲಿ ಗುಂಡ್ಯ ಹೊಳೆಗೆ ಅಡ್ಡವಾಗಿ ನಿರ್ಮಾಣಗೊಂಡಿರುವ ಉದನೆ ಸೇತುವೆ ಫೆ.26ರಂದು ಲೋಕಾರ್ಪಣೆಗೊಂಡಿತು. ಈ ಮೂಲಕ ಈ ಭಾಗದ ಜನರ ಬಹುದಿನಗಳ ಬೇಡಿಕೆಯೊಂದು ಈಡೇರಿಕೆಯಾಗಿದೆ.

 


ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರು ನೂತನ ಸೇತುವೆ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಸೈದ್ದಾಂತಿಕ ನೆಲೆಯಲ್ಲಿ ಆರೋಗ್ಯಕರ ರಾಜಕೀಯ ಚಟುವಟಿಕೆಗಳು ಇರಲಿ. ಆದರೆ ಅಭಿವೃದ್ಧಿ ವಿಚಾರದಲ್ಲಿ ಅನಗತ್ಯ ರಾಜಕೀಯ ಯಾರೂ ಮಾಡಬಾರದು, ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ ಎಂದರು. ಉದನೆಯಲ್ಲಿ ಸೇತುವೆ ನಿರ್ಮಾಣದ ಭರವಸೆ ನೀಡಿದಾಗ ಜನ ನಮ್ಮನ್ನು ಸಂಶಯದಿಂದ ನೋಡಿದರು, ಇದರ ಮಧ್ಯೆ ಸ್ವಲ್ಪ ರಾಜಕೀಯ ಕೂಡಾ ನಡೆಯಿತು. ಆದರೆ ನಾವು ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ಸಫಲರಾಗಿದ್ದೇವೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತ ಬಂದ ಮೇಲೆ ಗ್ರಾಮ ಮಟ್ಟದಿಂದಲೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ರಾಜ್ಯ, ದೇಶದ ಅಭಿವೃದ್ಧಿ ಮಾಡುವತ್ತ ಗಮನ ಹರಿಸಿದೆ. ಮೋದಿ ಸರಕಾರ ಬಂದ ಬಳಿಕ ಅಭಿವೃದ್ಧಿ ಕೆಲಸಗಳಿಗೆ ವೇಗ ದೊರೆತಿದೆ ಎಂದು ಹೇಳಿದ ಎಸ್.ಅಂಗಾರರವರು, ಉದನೆ-ಶಿಬಾಜೆ ಸಂಪರ್ಕ ರಸ್ತೆಯ ಬಾಕಿ ಇರುವ ಕೆಲಸ ಮಾಡುವ ಬಗ್ಗೆ ಗಮನಹರಿಸಲಾಗುವುದು ಎಂದರು.

ಕಡ್ಯ-ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪ್ಪ ಗೌಡ ಹಾಕೋಟೆಕಾನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್ ಗೌಡ ಇಚ್ಲಂಪಾಡಿ, ಎಪಿಎಂಸಿ ನಿರ್ದೇಶಕ ಬಾಲಕೃಷ್ಣ ಬಾಣಜಾಲು, ಲೂಫ್ ಇನ್‌ಸ್ಟ್ರಕ್ಷನ್‌ನ ಸೈಯದ್ ಇಸ್ಮಾಯಿಲ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸೈಯದ್ ಇಸ್ಮಾಯಿಲ್ ಅವರನ್ನು ಸನ್ಮಾನಿಸಲಾಯಿತು.

ಜಯಂತ್ ಗೌಡ ಪುತ್ತಿಗೆ ಸ್ವಾಗತಿಸಿದರು. ಸಾಮಾಜಿಕ ಹೋರಾಟಗಾರ ಕಿಶೋರ್ ಶಿರಾಡಿ ವಂದಿಸಿದರು. ನೂಜಿಬಾಳ್ತಿಲ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕಿಟ್ಟು ಕಲ್ಲುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

ಬಹು ವರ್ಷಗಳ ಕನಸು:
ಉದನೆಯಲ್ಲಿ ಗುಂಡ್ಯ ಹೊಳೆ ದಾಟಲು ಸೇತುವೆ ನಿರ್ಮಾಣ ಆಗಬೇಕೆಂಬುದು ಈ ಭಾಗದ ಜನರ ಬಹು ವರ್ಷಗಳ ಕನಸು ಆಗಿದೆ. ಶಿರಾಡಿ, ಉದನೆ ಭಾಗದ ಜನರು ತಾಲೂಕು ಕೇಂದ್ರ ಆಗಿರುವ ಕಡಬ ಸಂಪರ್ಕಿಸಲು ಪೆರಿಯಶಾಂತಿ, ಇಚಿಲಂಪಾಡಿ ಮಾರ್ಗವಾಗಿ ಕ್ರಮಿಸಬೇಕಿತ್ತು. ಇದರಿಂದ ಜನರ ಹಣ, ಸಮಯ ವ್ಯರ್ಥವಾಗುತಿತ್ತು. ಈ ಹಿನ್ನೆಲೆಯಲ್ಲಿ ಉದನೆಯಲ್ಲಿ ಸೇತುವೆ ಆಗಬೇಕೆಂಬ ಕೂಗು ಹಲವು ವರ್ಷಗಳಿಂದಲೇ ಕೇಳಿ ಬಂದಿತ್ತು. ಜನರ ಬೇಡಿಕೆಯಂತೆ 2017ರಲ್ಲಿ ಇಲ್ಲಿ ಸೇತುವೆ ನಿರ್ಮಾಣಕ್ಕೆ ಆಗಿನ ಸಚಿವ ಬಿ.ರಮಾನಾಥ ರೈಯವರು ಶಿಲಾನ್ಯಾಸ ನೆರವೇರಿಸಿದ್ದರು.2018ರಲ್ಲಿ ಸೇತುವೆ ನಿರ್ಮಾಣ ಕೆಲಸ ಆರಂಭಗೊಂಡಿತ್ತು. ಇದೀಗ ಬರೋಬ್ಬರಿ 5 ವರ್ಷಗಳ ಬಳಿಕ 10.5 ಮೀ.ಅಗಲ ಹಾಗೂ 150 ಮೀ.,ಉದ್ದದ ಸುಸಜ್ಜಿತ ಸೇತುವೆ ನಿರ್ಮಾಣಗೊಂಡಿದೆ. ಇನ್ನು ಮುಂದೆ ಈ ಸೇತುವೆಯನ್ನು ಬಳಸಿ ಉದನೆಯಿಂದ ಕಲ್ಲುಗುಡ್ಡೆ ಮಾರ್ಗವಾಗಿ ಕಡಬವನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here