ಪುತ್ತೂರು ಜಾತ್ರೆ ಸಂತೆ ವ್ಯಾಪಾರಕ್ಕೆ ಗದ್ದೆ ಏಲಂ

0

  • ರೂಲ್ಸ್ ಎಲ್ಲರೂ ಪಾಲನೆ ಮಾಡುವುದು ಕಡ್ಡಾಯ-ಕೇಶವಪ್ರಸಾದ್ ಮುಳಿಯ

 

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಎ.10ರಿಂದ 20ರ ತನಕ ನಡೆಯಲಿರುವ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ಜಾತ್ರಾ ಗದ್ದೆಯಲ್ಲಿ ವ್ಯಾಪಾರಕ್ಕೆ ಅಂಗಡಿಗಳ ಏಲಂ ಮಾ.29ರಂದು ನಡೆಯಿತು. ಏಲಂನಲ್ಲಿ ಭಾಗವಹಿಸಲು ಹಿಂದು ಬಾಂಧವರಿಗೆ ಮಾತ್ರ ಅವಕಾಶವಿದ್ದುದರಿಂದ ಹಿಂದುಗಳು ಮಾತ್ರ ಏಲಂನಲ್ಲಿ ಭಾಗವಹಿಸಿದ್ದರು.

 

ಏಲಂ ನಡೆಯುವ ಆರಂಭದಲ್ಲಿ ಬಿಡ್ಡುದಾರರು ರೂ. ೨೦ಸಾವಿರ ಇ.ಎಂ.ಡಿ ಮೊತ್ತ ಪಾವತಿಸಿ ಏಲಂನಲ್ಲಿ ಭಾಗವಹಿಸಲು ಅವಕಾಶ ನೀಡಿದಂತೆ ಬಿಡ್ಡುದಾರರು ಇ.ಎಂ.ಡಿ ಮೊತ್ತ ದೇವಳದ ಕಚೇರಿಯಲ್ಲಿ ಪಾವತಿಸಿದ ಬಳಿಕ ಏಲಂನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಬಿಡ್ಡುದಾರರು ಇತ್ತೀಚಿನ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ ನೀಡುವುದು ಕಡ್ಡಾಯವಾಗಿತ್ತು.

ರೂಲ್ಸ್ ಎಲ್ಲರೂ ಪಾಲನೆ ಮಾಡುವುದು ಕಡ್ಡಾಯ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಆರಂಭದಲ್ಲಿ ಓಂಕಾರದ ಮೂಲಕ ಏಲಂ ಆರಂಭಿಸಿದರು. ಈ ಬಾರಿ ಸರಕಾರದ ಸುತ್ತೋಲೆ, ಕಾನೂನಿನಂತೆ ಸಂತೆ ಏಲಂ ಮಾಡಲಾಗುವುದು ಮತ್ತು ವ್ಯಾಪಾರ ಹಿಂದೂ ಬಾಂಧವರಿಗೆ ಮಾತ್ರ. ಇಲ್ಲಿ ಯಾರೂ ಕೂಡಾ ಒಳಬಾಡಿಗೆ ಕೊಡುವಂತಿಲ್ಲ. ರೂಲ್ಸ್‌ನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ನಿಮ್ಮ ಅಂಗಡಿಯಲ್ಲಿ ಎಷ್ಟು ಮಂದಿ ಸಿಬ್ಬಂದಿಗಳಿರುತ್ತಾರೆ ಎಂಬ ಬಗ್ಗೆ ಫೋಟೋ ಸಹಿತ ಮಾಹಿತಿ ಕೊಡಬೇಕು. ಅವರಿಗೆ ದೇವಳದ ಕಡೆಯಿಂದ ಗುರುತಿನ ಚೀಟಿ ನೀಡಲಾಗುವುದು. ಮುಂದೆ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡಬಾರದು. ರೂಲ್ಸ್ ಎಲ್ಲರೂ ಪಾಲನೆ ಮಾಡಬೇಕೆಂದರು.

ಆರಂಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರುರವರು ಏಲಂ ಷರತ್ತುಗಳನ್ನು ಓದಿದರು. ಬಳಿಕ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್‌ರವರು ಏಲಂ ಪ್ರಕ್ರಿಯೆ ಆರಂಭಿಸಿದರು. ಗಿರೀಶ್‌ರವರು ಏಲಂ ಏರಿಕೆ ಮೊತ್ತ ತಿಳಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೀಣಾ ಬಿ.ಕೆ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಶೇಖರ್ ನಾರಾವಿ, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

ಮಾ.31ಕ್ಕೂ ಏಲಂ

ದೇವಳದ ಎದುರು ಮೈದಾನದ ಅನ್ನಛತ್ರದ ಹಿಂಬದಿಯಲ್ಲಿ ಗುರುತಿಸಿದ ಜಾಗವನ್ನು ಮಾ.31ರಂದು ಪೂರ್ವಾಹ್ನ 11 ಗಂಟೆಗೆ ಕೆಲವು ಷರತ್ತುಗಳಿಗೆ ಒಳಪಟ್ಟು ದೇವಳದ ಸಭಾಭವನದಲ್ಲಿ ಏಲಂ ನಡೆಸಲಾಗುತ್ತದೆ ಎಂದು ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

LEAVE A REPLY

Please enter your comment!
Please enter your name here