ಸಮಾಜದ ಮನ ಪರಿವರ್ತನೆಯಲ್ಲಿ ಸುದ್ದಿ ಜನಾಂದೋಲನದ ಪಾತ್ರ ಬಹಳ ಮುಖ್ಯ

0

  • ಲಂಚ, ಭ್ರಷ್ಟಾಚಾರವೆಂಬ ಬೆಕ್ಕಿಗೆ ಗಂಟೆ ಕಟ್ಟುವವರು ಯಾರೆಂದು ಗೊತ್ತಿರಲಿಲ್ಲ- ಪ್ರಮೋದ್ ಮಲ್ಲಾರ
  •  ಫಲಕ ತಮಾಷೆಯಲ್ಲ ಗಂಭೀರವಾಗಿ ಪರಿಣಮಿಸಿದೆ – ಜಾನ್ ಕುಟಿನ್ಹಾ
  •  ಇದು ಜನಾಂದೋಲನ, ನನ್ನ ಆಂದೋಲನ ಅಲ್ಲ – ಡಾ.ಯು.ಪಿ.ಶಿವಾನಂದ

 

 

ಪುತ್ತೂರು: ಲಂಚ ಕೊಡದೆ ನಮ್ಮ ಕೆಲಸ ಆಗಬೇಕೆಂಬುದು ಜನರ ಆಶಯ. ಆದರೆ ಇದರ ಪರಿವರ್ತನೆಗೆ ಯಾರು ಕಾರಣರಾಗುತ್ತಾರೆ ಎಂಬುದು ಗೊತ್ತಿರಲಿಲ್ಲ. ಇವತ್ತು ಸಮಾಜದ ಮನ ಪರಿವರ್ತನೆಯಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಮಾಜದ ಮನ ಪರಿವರ್ತನೆಯಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದರವರ ಪಾತ್ರ ಬಹಳ ಮುಖ್ಯವಾಗಿದೆ. ಲಂಚ, ಭ್ರಷ್ಟಾಚಾರ ನಿರ್ಮೂಲನೆಯ ಫಲಕ ತಮಾಷೆಯಲ್ಲ. ಇದು ಗಂಭೀರವಾಗಿ ಎಲ್ಲರ ಮನಸ್ಸಿಗೂ ಪರಿಣಾಮ ಬೀರಿದೆ ಎಂದು ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರು ಮಾ.29ರಂದು ಪುತ್ತೂರು ರೋಟರಿ ಮನೀಷಾ ಸಭಾಂಗಣದಲ್ಲಿ ನಡೆದ ಸಂವಾದದಲ್ಲಿ ಒಕ್ಕೊರಳಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ, ಪ್ರತಿಜ್ಞೆ ಸ್ವೀಕಾರ

ಲಂಚ, ಭ್ರಷ್ಟಾಚಾರ ವಿಚಾರವಾಗಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ ಶಿವಾನಂದ ಅವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದ ಆರಂಭದಲ್ಲಿ ಡಾ. ಯು.ಪಿ.ಶಿವಾನಂದ ಅವರು ಲಂಚ ಭ್ರಷ್ಟಾಚಾರದ ವಿಚಾರವಾಗಿ ಅರಿವು, ಜಾಗೃತಿ ಆಂದೋಲನದ ಕುರಿತು ಮಾತನಾಡಿದರು. ಸಂವಾದಕ್ಕೆ ಮೊದಲು ಲಂಚ, ಭ್ರಷ್ಟಾಚಾರ ವಿರುದ್ಧದ ಘೋಷಣೆ ಕೂಗಲಾಯಿತು. ರೋಟರಿ ಅಧ್ಯಕ್ಷ ಪ್ರಮೋದ್ ಮಲ್ಲಾರರವರು ಸೇರಿದ ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.

ಲಂಚ, ಭ್ರಷ್ಟಾಚಾರವೆಂಬ ಬೆಕ್ಕಿಗೆ ಗಂಟೆ ಕಟ್ಟುವವರ‍್ಯಾರೆಂದು ಗೊತ್ತಿರಲಿಲ್ಲ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ ಅಧ್ಯಕ್ಷ ಪ್ರಮೋದ್ ಮಲ್ಲಾರ ಅವರು ಮಾತನಾಡಿ, ಲಂಚ ಕೊಡದೆ ನಮ್ಮ ಕೆಲಸ ಆಗಬೇಕೆಂಬ ಆಶಯ ನಮ್ಮದು. ಇವತ್ತು ಸಮಾಜದ ಪರಿವರ್ತನೆಗೆ ಕಾರಣ ಯಾರು, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂದು ಗೊತ್ತಿರಲಿಲ್ಲ. ಇವತ್ತು ಬೆಕ್ಕಿಗೆ ಗಂಟೆ ಕಟ್ಟುವವರು ಡಾ. ಯು.ಪಿ.ಶಿವಾನಂದ ಎಂಬುದು ನಮಗೆ ಗೊತ್ತಾಗಿದೆ. ಸಮಾಜದ ಪರಿವರ್ತನೆಯಲ್ಲಿ ಅವರ ಪಾತ್ರ ಬಹಳ ಮುಖ್ಯವಾಗುತ್ತದೆ ಎಂದರು.

ಫಲಕ ತಮಾಷೆಯಲ್ಲ, ಗಂಭೀರ ಪರಿಣಮಿಸಿದೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ ಅವರು ಮಾತನಾಡಿ, ಲಂಚ ಭ್ರಷ್ಟಾಚಾರದ ಜಾಗೃತಿಯ ಫಲಕ ನೋಡಿ ನೋಡಿ ಸಾಕಾಗಿದೆ ಎಂದು ಹೇಳುತ್ತೇವೆ. ಯಾಕೆಂದರೆ ಅಂಗಡಿ, ಮನೆಯಲ್ಲೂ ಫಲಕ ಇದೆ. ಆದರೆ ಇದು ಒಂದು ರೀತಿಯಲ್ಲಿ ತಮಾಷೆ ಆದರೂ ಗಂಭೀರವಾಗಿ ಪರಿಣಮಿಸಿದೆ. ಫಲಕವನ್ನು ಓದಿ, ಓದಿ, ನೋಡಿ, ನೋಡಿ ಮನಪರಿವರ್ತನೆ ಆಗಿದೆ. ಲಂಚ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಆಗಲೇ ಬೇಕು. ಅಧಿಕಾರಿಗಳು ಇದನ್ನು ನೋಡಿ ನೋಡಿ ಅವರ ಮನಪರಿವರ್ತನೆ ಆಗುತ್ತದೆ ಎಂದರು.

ಸಂವಾದ: ಲಾರೆನ್ಸ್ ಗೋನ್ಸಾಲಿಸ್ ಅವರು ಮಾತನಾಡಿ, ಭ್ರಷ್ಟಾಚಾರಿಗಳು ಇದ್ದಾರೆ ಎಂಬುದನ್ನು ಪತ್ರಿಕೆಯಲ್ಲಿ ಬರೆಯಿರಿ. ಹಣ ಕೊಟ್ಟವ ಮತ್ತು ತೆಗೆದು ಕೊಂಡವ ಇಲ್ಲಿ ಹೇಳುವುದಿಲ್ಲ. ಹಾಗಾಗಿ ಭ್ರಷ್ಟಾಚಾರ ನಡೆಯುವುದಿಲ್ಲ ಎಂಬ ವಿಚಾರ ಮುಂದೆ ಬರುತ್ತದೆ. ಆದರೆ ಸಮಾಜದಲ್ಲಿ ಭ್ರಷ್ಟಾಚಾರ ಇದೆ. ಈ ನಿಟ್ಟಿನಲ್ಲಿ ಶಿವಾನಂದರ ಹೋರಾಟದಲ್ಲಿ ನಾವು ಪ್ರತಿಜ್ಞೆ ಕೈಗೊಂಡಿದ್ದೇವೆ ಎಂದ ಅವರು ಪ್ರಶ್ನೆಗಳನ್ನು ಮುಂದಿಟ್ಟರು. ಡಾ. ಯು.ಪಿ.ಶಿವಾನಂದ ಅವರು ಉತ್ತರ ನೀಡಿದರು.

ಜೊರೋಮಿಯಸ್ ಪಾಯಸ್ ಅವರು ಮಾತನಾಡಿ, ಲಂಚ ಭ್ರಷ್ಟಾಚಾರ ೫೭ದಿನದಲ್ಲಿ ನಿಲ್ಲುವುದಿಲ್ಲ. ನಿರಂತರ ನಡೆಯುತ್ತದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಲ್ಲಿ ಭರವಸೆ ಹೋಗಿದೆ ಎಂದರು. ಇದಕ್ಕೆ ಉತ್ತರಿಸಿದ ಡಾ.ಯು.ಪಿ.ಶಿವಾನಂದ ಅವರು, ನಾನು ಸರಕಾರ ಅಲ್ಲ. ಲೋಕಾಯುಕ್ತ ಅಲ್ಲ. ಆದರೆ ಇಂದಿನಿಂದ ೫೭ ದಿವಸ ಆದ ಬಳಿಕ ನಾವು ದುಡ್ಡು ಕೊಟ್ಟರೂ ಯಾರೆ ಆಗಲಿ ಅದನ್ನು ತೆಗೆದು ಕೊಳ್ಳುವುದಿಲ್ಲ. ಇದನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ ಎಂದರು. ಈ ವೇಳೆ ಜೋರೋಮಿಯಸ್ ಪಾಯಸ್ ಅವರು ಮಾತನಾಡಿ, ನಾನು ನಿಮ್ಮೊಂದಿಗೆ ಹೋರಾಟದಲ್ಲಿ ಕೈಜೋಡಿಸುತ್ತೇನೆ. ಲಂಚ ಕೊಡಬಾರದು ಎಂಬ ಮನೋಭಾವನೆ ನಮ್ಮ ಮನಸ್ಸಿನಲ್ಲಿ ಮೂಡಬೇಕು ಎಂದರು.

ಧರ್ಣಪ್ಪ ಗೌಡ ಅವರು ಮಾತನಾಡಿ, ನಾನು ಐದು ಪೈಸೆ ಲಂಚ ಕೊಡದೆ ಕೆಲಸ ಮಾಡಿಸಿಕೊಂಡಿzನೆ. ಅವಸರ ಇದ್ದಾಗ ಹಿಂದಿನ ಬಾಗಿಲಿನಲ್ಲಿ ಹೋಗುತ್ತಾರೆ. ಅದಲ್ಲದೆ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎಂದರು. ಉತ್ತರಿಸಿದ ಡಾ. ಯು.ಪಿ.ಶಿವಾನಂದ ಅವರು ಇವತ್ತಿನ ಕಾಲಘಟ್ಟದಲ್ಲಿ ಅವಸರವೇ ಮುಖ್ಯ. ತಮ್ಮ ತಮ್ಮ ಕೆಲಸ ಆದಷ್ಟು ಬೇಗ ಆಗಬೇಕು. ಅದಕ್ಕೆ ವ್ಯವಸ್ಥೆಯೂ ಇದೆ. ನಮ್ಮದೇ ಆಡಳಿತದಲ್ಲಿ ನಾವೇ ಕಚೇರಿ ಕೊರತೆಯನ್ನು ಭರ್ತಿ ಮಾಡಬೇಕು ಎಂದರು.

ಕೆ.ಎಸ್ ಶಾಸ್ತ್ರೀ ಅವರು ಮಾತನಾಡಿ, ಡಾಕ್ಟರ್ ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಈ ಹೋರಾಟದ ವಿಚಾರ ಸುದ್ದಿ ಪತ್ರಿಕೆಯಲ್ಲಿ ಮಾತ್ರವಲ್ಲ, ರಾಜ್ಯದ ಇತರ ಪತ್ರಿಕೆಯಲ್ಲೂ ಬರುವಂತೆ ಒತ್ತಾಯ ಮಾಡಬೇಕೆಂದರು. ಇದಕ್ಕೆ ಇತರ ಪತ್ರಿಕೆಯವರು ಬೆಂಬಲ ಕೊಡಬೇಕೆಂದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ದಯಾನಂದ ಅವರು ಮಾತನಾಡಿ, ಬಹಳ ಸೂಕ್ಷ್ಮ ವಿಚಾರ ಹೇಗೆ ವೈರಲ್ ಆಗುತ್ತದೆಯೋ ಅದೇ ರೀತಿ ಇತರ ಮೀಡಿಯಾದಲ್ಲೂ ಲಂಚ ಭ್ರಷ್ಟಾಚಾರ ಹೋರಾಟದ ಕುರಿತು ವೈರಲ್ ಆಗಬೇಕೆಂದರು. ನಟೇಶ್ ಉಡುಪ ಅವರು ಮಾತನಾಡಿ, ಇನ್ನು ೫೭ ದಿವಸದಲ್ಲಿ ಮನವಪರಿರ್ತನೆ ಸಾಧ್ಯವಿಲ್ಲ ಎಂದರು. ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಲ್ಲಾಸ್ ಪೈ ಅವರು ಮಾತನಾಡಿ ಶಿಕ್ಷಣದ ವಿಚಾರದಲ್ಲಿ ಉಚಿತ ಮತ್ತು ಆರೋಗ್ಯದಲ್ಲಿ ಸೌಲಭ್ಯ ನೀಡುವಂತೆ ಯೋಜನೆ ಆಗಬೇಕೆಂದರು. ಈ ಕುರಿತು ಶಾಸಕರಲ್ಲಿ ಮಾತನಾಡಬೇಕಾಗಿದೆ. ಆದರೆ ಇಲಾಖೆ ವಿಚಾರ ಬಂದಾಗ ಇಲಾಖೆ ನಮ್ಮದು ಹಾಗಾಗಿ ಅದಕ್ಕೆ ಬೇಕಾದ ಸೌಲಭ್ಯ ಕಲ್ಪಿಸಬೇಕೆಂದು ಡಾ.ಯು.ಪಿ.ಶಿವಾನಂದ ಉತ್ತರಿಸಿದರು.

ಇದು ನನ್ನ ಆಂದೋಲನ ಅಲ್ಲ, ಜನಾಂದೋಲನ: ಸಂವಾದದಲ್ಲಿ ಡಾ.ಯು.ಪಿ.ಶಿವಾನಂದ ಅವರು ಮಾತನಾಡಿ, ಆಂದೋಲನಕ್ಕೆ ಹೆಚ್ಚಿನ ಜನ ಬೆಂಬಲ ಬೇಕು. ಜನ ಬೆಂಬಲ ಹೆಚ್ಚು ಆದ ತಕ್ಷಣ ಲಂಚ ತೆಗೆದುಕೊಳ್ಳುವರು ಕಡಿಮೆ ಆಗುತ್ತಾರೆ. ಹಾಗಾಗಿ ಇದು ನಮ್ಮ ಆಂದೋಲನ ಅಲ್ಲ. ಜನಾಂದೋಲನ. ನನ್ನ ಪತ್ರಿಕೆಯಿಂದ, ಬರವಣಿಗೆಯಿಂದ ನಡೆಯುವ ಆಂದೋಲನ ಅಲ್ಲ ಎಂಬುದನ್ನು ನಾನು ಸ್ಪಷ್ಟ ಪಡಿಸುತ್ತೇನೆ. ನಮ್ಮ ಹೋರಾಟ ಈ ಹಿಂದೆ ಬಲತ್ಕಾರದ ಬಂದ್, ಕೋವಿಡ್ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣದ ವಿರುದ್ಧ ಹೋರಾಟ ಮಾಡಿzವೆ. ಜನರಿಗೆ ಸುದ್ದಿಯ ಮೇಲೆ ವಿಶ್ವಾಸ ಇದೆ. ನೀವು ಕೈ ಹಾಕಿದರೆ ಲಂಚ ಭ್ರಷ್ಟಾಚಾರ ಖಂಡಿತಾ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ. ಹಾಗಾಗಿ ಈ ಬಾರಿ ನನ್ನ ಆಂದೋಲನ ಯಶಸ್ವಿಗೆ ಕಾರಣ ಜನರು. ಯಾಕೆಂದರೆ ನಮ್ಮಲ್ಲಿ ಜಿಲ್ಲಾಧಿಕಾರಿ, ಐಜಿ, ಕಮೀಷನರ್, ಎಂ.ಪಿ, ಎಂ.ಎಲ್.ಎ, ಸರಕಾರಿ ಅಧಿಕಾರಿಗಳು, ಶಾಲೆಗಳಲ್ಲಿ ಲಂಚ ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿ ಅಗಿದೆ. ಹಾಗಾಗಿ ಎಲ್ಲರ ಬೆಂಬಲ ಲಂಚ ಭ್ರಷ್ಟಾಚಾರ ನಿರ್ಮೂಲನೆಯ ಪರವಿದೆ. ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಯಾವುದೇ ಇಲಾಖೆ ಇರಲಿ. ಅವೆಲ್ಲ ಜನರಿಗೆ ಬೇಕಾಗಿ ಕೆಲಸ ಮಾಡುವುದು. ನಾವು ರಾಜರಾದರೆ ಇಲಾಖೆಯು ನಮ್ಮ ಆಡಳಿತದಲ್ಲಿ ಇರುತ್ತದೆ. ಇದೇ ವಿಚಾರವನ್ನು ಮುಂದಿಟ್ಟು ಮೋದಿ, ರಾಹುಲ್ ಗಾಂಧಿ ವಿರುದ್ಧ ಚುನಾವಣೆಗೆ ನಿಂತಿದ್ದೆ. ಬಲಾತ್ಕಾರದ ಬಂದ್, ಈ ಆಂದೋಲನ ಎಲ್ಲೋ ಹೋಗಿ ಮಾಡುವುದಕ್ಕಿಂತ ಊರಿನಿಂದ ಆರಂಭ ಮಾಡಬೇಕೆಂಬ ನಿಲುವಿನಿಂದ ಆರಂಭಿಸಿzವೆ. ನಮ್ಮ ಊರಿನ ಬಗ್ಗೆ ಮಾತನಾಡಬೇಕು. ನಮ್ಮ ಆಂದೋಲನ ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬುದು. ಈ ನಿಟ್ಟಿನಲ್ಲಿ ಮುಂದಿನ ೫೭ ದಿನದ ಒಳಗೆ ಲಂಚ, ಭ್ರಷ್ಟಾಚಾರ ನಿಲ್ಲುತ್ತದೆ. ಪುತ್ತೂರು, ಸುಳ್ಯ, ಬೆಳ್ತಂಗಡಿಯಲ್ಲಿ ಯಾವುದೇ ಅಧಿಕಾರಿ ಲಂಚ ಸ್ವೀಕರಿಸದಂತೆ ಆಗುತ್ತದೆ ಎಂದರು.

ಧರ್ಣಪ್ಪ ಗೌಡ ಅತಿಥಿಗಳನ್ನು ಪರಿಚಯಿಸಿದರು. ಮಾಧುರ್ಯ ಅವರು ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಪ್ರಮೋದ್ ಮಲ್ಲಾರ ಸ್ವಾಗತಿಸಿದರು. ಕಾರ್ಯದರ್ಶಿ ಗುರುರಾಜ್ ಕೆ ವರದಿ ವಾಚಿಸಿದರು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಭಗವಾನ್ ದಾಸ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಟೇಶ್ ಉಡುಪ ವಂದಿಸಿದರು.

ಜನಮೆಚ್ಚಿದ ಅಧಿಕಾರಿಗಳ ಮೆರವಣಿಗೆ, ಸನ್ಮಾನ

ಸ್ವಾತಂತ್ರ್ಯದ ದಿನಕ್ಕೆ ಜನಮೆಚ್ಚಿದ ಅಧಿಕಾರಿಗಳ ಆಯ್ಕೆಯನ್ನು ಜನಮತದಿಂದ ಆಯ್ಕೆ ಮಾಡಿದ್ದೆವು. ಈ ಬಾರಿ ಜನಮೆಚ್ಚಿದ ಅಧಿಕಾರಿಗಳನ್ನು ಗ್ರಾಮೀಣ ಭಾಗದಲ್ಲಿ ಪ್ರತಿ ಪಂಚಾಯತ್ ಮತ್ತು ನಗರ ಭಾಗದಲ್ಲಿ ವಾರ್ಡ್‌ಗಳಲ್ಲಿ ಮೆರವಣಿಗೆ ಮಾಡಿ ಸನ್ಮಾನಿಸಲಾಗುವುದು. ಯಾಕೆಂದರೆ ಜನಮೆಚ್ಚಿದ ಅಧಿಕಾರಿ ಆಯ್ಕೆ ಬಹಳ ಕಷ್ಟದ ಕೆಲಸ. ಇಲ್ಲಿ ಕೆಲಸವನ್ನು ಜನ ಮೆಚ್ಚುವ ಹಾಗೆ ಮಾಡುವುದು ದೊಡ್ಡ ಕೆಲಸ. ಹಾಗಾಗಿ ಅವರ ಬದ್ಧತೆಗೆ ತಕ್ಕಂತೆ ಅವರನ್ನು ಗುರುತಿಸುವುದು ಮುಖ್ಯ.ಡಾ.ಯು.ಪಿ.ಶಿವಾನಂದ

ಜೀಪಿನಲ್ಲಿ ಮೆರವಣಿಗೆ

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಉಮೇಶ್ ನಾಯಕ್ ಅವರು ಮಾತನಾಡಿ, ನಾನು ವಾರದ ಹಿಂದೆ ಡಾ.ಯು.ಪಿ.ಶಿವಾನಂದ ಅವರಿಗೆ ಓಪನ್ ಚಾಲೆಂಜ್ ಹಾಕಿದವ. ಅಲ್ಲೂ ಅವರಿಗೆ ಜಯ ಸಿಗಬೇಕು. ನಾನು ಸೋಲಬೇಕೆಂದು ತಿಳಿಸಿzನೆ. ಯಾಕೆಂದರೆ ಅವರು ಭ್ರಷ್ಟರ ಬೇಟೆಗೆ ಹೊರಟಿದ್ದಾರೆ. ಅಟೋಬಾಂಬ್ ತರಹ ಅವರ ತೀಕ್ಷ್ಣ ಲೇಖನಿ ಮತ್ತು ಪತ್ರಿಕೆ ಇದೆ. ಅವರ ಈ ಹೋರಾಟದಿಂದ ನರಕ ಸಭೆಯಂತಿದ್ದ ನಗರಸಭೆಯಿಂದ ನನಗೆ ಕೆಲಸ ಆಗಿದೆ. ಇದಕ್ಕೆ ಕಾರಣ ಡಾ.ಯು.ಪಿ.ಶಿವಾನಂದ ಅವರ ಹೋರಾಟ ಮತ್ತು ನಗರಸಭೆಯಲ್ಲಿರುವ ದಕ್ಷ ಪಾರದರ್ಶಕ ಪೌರಾಯುಕ್ತರಾದ ಮಧು ಎಸ್ ಮನೋಹರ್ ಅವರು. ಇವತ್ತು ನಗರಸಭೆ ಸ್ವರ್ಗಲೋಕಕ್ಕೆ ಸಮಾನ ಆಗುತ್ತಿದೆ. ಹಾಗಾಗಿ ಡಾ.ಯು.ಪಿ.ಶಿವಾನಂದ ಅವರು ೫೭ ದಿವಸದಲ್ಲಿ ಲಂಚ, ಭ್ರಷ್ಟಾಚಾರ ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಈ ಹಿಂದೆ ನಾನು ಹೇಳಿದ ಹಾಗೆ ಅವರು ಲಂಚ ಭ್ರಷ್ಟಾಚಾರವನ್ನು ನಿಲ್ಲಿಸಿದರೆ ನಾನು ಮಿನಿ ವಿಧಾನ ಸೌಧದ ಎದುರು ಅವರ ಕಾಲು ಮಾತ್ರ ಹಿಡಿಯುವುದಲ್ಲ. ಅವರನ್ನು ದರ್ಬೆಯಿಂದ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿಸುತ್ತೇನೆ ಎಂದರು. ಡಾ.ಯು.ಪಿ.ಶಿವಾನಂದ ಅವರು ತಾನು ಹೇಳಿದ ಅವಧಿಗಿಂತ ೨೦ ಕಡಿಮೆ ದಿವಸದಲ್ಲೆ ಲಂಚ ಭ್ರಷ್ಟಾಚಾರ ನಿಲ್ಲಿಸುತ್ತೇನೆ ಎಂದು ಸಂವಾದಲ್ಲಿ ತಿಳಿಸಿದಾಗ ಉಮೇಶ್ ನಾಯಕ್ ಅವರು ಎದ್ದು ನಿಂತು ೨೦ ಕಡಿಮೆ ದಿನಗಳಲ್ಲಿ ಲಂಚ ಭ್ರಷ್ಟಾಚಾರ ನಿಲ್ಲಿಸುವಂತಾದರೆ ನಾನು ಲಾರಿಯಲ್ಲಿ ಡಾ. ಯು.ಪಿ.ಶಿವಾನಂದ ಅವರನ್ನು ಮೆರವಣಿಗೆ ಮೂಲಕ ಅಭಿನಂದಿಸುತ್ತೇನೆ. ಆದರೂ ನಾನು ಸೋಲಿಗಾಗಿ ಕಾಯುತ್ತೇನೆ ಎಂದರು.

LEAVE A REPLY

Please enter your comment!
Please enter your name here