ಬಜಪೆ ದರೋಡೆ ಪ್ರಕರಣ: ದಾಸಳಿಕೆಯ ಇಬ್ಬರ ಸಹಿತ ಮೂವರ ಬಂಧನ

0

ಉಪ್ಪಿನಂಗಡಿ: ವಿದೇಶಕ್ಕೆ ತೆರಳಲೆಂದು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ದರೋಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಜಪೆ ಪೊಲೀಸರು ಬಂಧಿಸಿರುವ ಮೂವರು ಆರೋಪಿಗಳಲ್ಲಿ ಇಬ್ಬರು ಬಾರ್ಯದ ಕಳೆಂಜಿಬೈಲಿನ ದಾಸಳಿಕೆಯ ನಿವಾಸಿಗಳಾಗಿದ್ದು, ಓರ್ವ ಗಂಜಿಮಠ ನಿವಾಸಿಯಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಕಳೆಂಜಿಬೈಲು ಮಸೀದಿ ಪಕ್ಕದ ದಾಸಳಿಕೆ ಮನೆ ನಿವಾಸಿ ಇಸ್ಮಾಯೀಲ್ ಎಂಬವರ ಪುತ್ರರಾದ ನೌಶದ್ (32) ಹಾಗೂ ಆತನ ಸಹೋದರ ನೌರೀಝ್ (30) ಮತ್ತು ಗಂಜಿಮಠ ಬಡಗುಳಿಪಾಡಿಯ ಅಕ್ಬರ್ (40) ಎಂಬವರನ್ನು ಪೊಲೀಸರು ಬಂಧಿಸಿ ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆಯ ವಿವರ: ನಾರ್ಲಪದವಿನ ಅಬ್ದುಲ್ ರೆಹಮಾನ್ ಅವರು ಮೇ 25ರಂದು ಬೆಳಗ್ಗೆ 4:30ಕ್ಕೆ ಮಸ್ಕತ್‌ಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಓಮ್ನಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಕಂದಾವರ ತಲುಪುತ್ತಿದ್ದಂತೆ 5 ಮಂದಿ ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಬಂದು ಓಮ್ನಿ ಕಾರಿಗೆ ಅಡ್ಡ ನಿಲ್ಲಿಸಿ ಅಬ್ದುಲ್ ರೆಹಮಾನ್ ಅವರನ್ನು ಹೊರಕ್ಕೆ ಎಳೆದು ಚೂರಿ ಮತ್ತು ಮರದ ದೊಣ್ಣೆಯಿಂದ ಅವರ ಮೇಲೆ ಹಲ್ಲೆ ಮಾಡಿ ಅವರ ಪಾಸ್‌ಪೋರ್ಟ್, ಹಣ ಮತ್ತು ಮೊಬೈಲ್ ಇರುವ ಸೂಟ್‌ಕೇಸ್ ಅನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದರೆಂದು ಆರೋಪಿಸಲಾಗಿದೆ. ಘಟನೆ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳಲ್ಲಿ ನೌಶದ್ ಹಾಗೂ ನೌರೀಝ್ ದಾಸಳಿಕೆಯ ನಿವಾಸಿಗಳಾಗಿದ್ದರೂ, ಅವರು ಬಜಪೆಯ ತಮ್ಮ ಸಂಬಂಧಿಕರ ಮನೆಯಲ್ಲಿದ್ದರು ಎನ್ನಲಾಗಿದೆ.

LEAVE A REPLY

Please enter your comment!
Please enter your name here