ಅಜಿರಂಗಳ : ಶ್ರೀಬಾಲಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದ ನೂತನ ಗರ್ಭಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ-ಧಾರ್ಮಿಕ ಸಭೆ

0

  • ಸಮಾಜದಲ್ಲಿ ಮಾನವೀಯ ಮೌಲ್ಯಗಳು ವೃದ್ದಿಯಾಗಬೇಕು- ಒಡಿಯೂರು ಶ್ರೀ
ಒಡಿಯೂರು ಶ್ರೀಗಳಿಂದ ಆಶೀರ್ವಚನ

ಕಾಣಿಯೂರು : ಆಧ್ಯಾತ್ಮ -ವಿಜ್ಞಾನ ಜತೆಯಲ್ಲಿ ಸಾಗಬೇಕು. ನಾವೆಲ್ಲರೂ ಧರ್ಮದ ಬೆಳವಣಿಗೆಗಾಗಿ ಧರ್ಮ ಸೇನಾನಿಯಾಗಬೇಕು. ಸಮಾಜದಲ್ಲಿ ಮಾನವೀಯ ಮೌಲ್ಯಗಳು ವೃದ್ದಿಯಾಗಬೇಕು. ನಶಿಸಿ ಹೋದ ದೇವಸ್ಥಾನವನ್ನು ಪುನರುತ್ಥಾನಗೊಳಿಸುವುದು ಪುಣ್ಯದ ಕಾರ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

 

ಅವರು ಜೂ.1ರಂದು ಬೆಳಂದೂರು ಗ್ರಾಮದ ಅಜಿರಂಗಳದಲ್ಲಿ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಗರ್ಭಗುಡಿಯ ಶಿಲಾನ್ಯಾಸದ ಮುಹೂರ್ತದಲ್ಲೇ ಅಜಿರಂಗಳದ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿದೆ.ಕ್ಷೇತ್ರದ ಜೀರ್ಣೋದ್ದಾರದಿಂದ ಊರಿನಲ್ಲಿ ಸಮೃದ್ದಿ ನೆಲೆಯಾಗಲಿದೆ ಎಂದು ಅವರು ಹೇಳಿದರು. ಬದುಕು ನಿಂತ ನೀರಾಗಬಾರದು,ಹರಿಯುವ ನೀರಾಗಬೇಕು,ಹರಿಯುವುದು ಎಂದರೆ ಸಂಸ್ಕೃತಿ ಎಂದು ಹೇಳಿದ ಶ್ರೀಗಳು ಶ್ರದ್ದೆ ಯಶಸ್ವಿನ ಕೀಲಿ ಕೈ, ನಮ್ಮಿಂದ ಇನ್ನೊಬ್ಬರ ಬದುಕು ಕಟ್ಟುವ ಕೆಲಸವಾಗಲಿ ಎಂದರು.

 

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ, ನಿವೃತ ಡಿವೈಎಸ್ಪಿ, ಬಾಲಸುಬ್ರಹ್ಮಣ್ಯ ಸೇವಾ ಟ್ರಸ್ಟ್‌ನ ಗೌರವ ಸಲಹೆಗಾರ ಜಗನ್ನಾಥ ರೈ ನುಳಿಯಾಲು ಮಾದೋಡಿ, ಅಜಿರಂಗಳ ಎಂಬಲ್ಲಿ ನೂತನವಾಗಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನವನ್ನು ಅಂದಾಜು ರೂ ೮ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ. ದೇವಸ್ಥಾನದ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತು ಪೌಳಿ ಸಹಿತ ಕಪ್ಪು ಶಿಲೆಯ ಕೆತ್ತನೆಯಲ್ಲಿ ನಿರ್ಮಾಣವಾಗಲಿದೆ. ಕಪ್ಪು ಶಿಲೆಯನ್ನು ತಮಿಳುನಾಡಿನಿಂದ ಕಾರ್ಕಳಕ್ಕೆ ತಂದು ಅಲ್ಲಿ ಕೆತ್ತನೆ ಕೆಲಸಗಳನ್ನು ತಂಜವೂರಿನ ಮತ್ತು ಕಾರ್ಕಳದ ಶಿಲ್ಪಿಗಳು ಮಾಡಲಿದ್ದಾರೆ. ಇಲ್ಲಿ ನಿರ್ಮಾಣವಾಗಲಿರುವ ದೇವಸ್ಥಾನವು ಯಾತ್ರಾಸ್ಥಳವಾಗಿ ಮೂಡಿಬರಬೇಕು. ಈ ನಿಟ್ಟಿನಲ್ಲಿ ಸುಂದರ ದೇವಸ್ಥಾನ ನಿರ್ಮಾಣದ ಕೈಂಕರ್ಯದಲ್ಲಿ ಊರ, ಪರವೂರ ಭಕ್ತರ ಸಹಕಾರ ಅಗತ್ಯ ಎಂದರು.

ವಾಸ್ತು ಶಿಲ್ಪ ಶಾಸ್ತ್ರಜ್ಞ ಪ್ರಸಾದ ಮುನಿಯಂಗಳ ಮಾತನಾಡಿ,ಬಾಲಸುಬ್ರಹ್ಮಣ್ಯ ಕ್ಷೇತ್ರದ ಪ್ರಗತಿಯಾಗಲಿ ಇದರಿಂದ ಎಲ್ಲರಿಗೂ ಅನುಗ್ರಹ ಪ್ರಾಪ್ತವಾಗಲಿದೆ.ಸ್ಥಳದಲ್ಲಿ ದೈವೀಕ ಸಾನಿಧ್ಯದ ಕುರುಹು ಗೋಚರವಾಗಿದ್ದು, ಶ್ರೀ ದೇವರ ದೇವಳವು ಕೃಷ್ಣ ಶಿಲೆಯಿಂದ ನಿರ್ಮಾಣವಾಗುವ ಮೂಲಕ ಮಾದರಿ ದೇವಳವಾಗಿ ರೂಪುಗೊಳ್ಳಲಿದೆ ಎಂದರು. ದೇವಾಲಯದ ರಚನೆ ಶಾಶ್ವತ, ನಮ್ಮಲ್ಲಿರುವುದನ್ನು ಭಗವಂತನಿಗೆ ಸಮರ್ಪಿಸಿ ಅನುಗ್ರಹ ಪಡೆಯಬೇಕು. ಅಜಿರಂಗಳದ ದೇವಸ್ಥಾನವು ವಿಶ್ವಮಾನ್ಯ ದೇವಾಲಯವಾಗಲಿ ಎಂದವರು ಹೇಳಿದರು.

ವಿದ್ವಾನ್ ವೆಂಕಟೇಶ್ವರ ಭಟ್ ಹಿರಣ್ಯ ಧಾರ್ಮಿಕ ಉಪನ್ಯಾಸ ನೀಡಿ,ಬಾಲಸುಬ್ರಹ್ಮಣ್ಯ ದೇವರ ಸಾನಿಧ್ಯವೆಂದರೆ ಅದು ಸಕಲಾಭೀಷ್ಟಗಳನ್ನು ಈಡೇರಿಸುವ ಶಕ್ತಿಯ ನೆಲೆ,ಅಜಿರಂಗಳ ದೇವಾಲಯವು ಎರಡು ನದಿಗಳ ಸಂಗಮ ಸ್ಥಳದಲ್ಲಿರುವುದರಿಂದ ವಿಶೇಷತೆ ಹೆಚ್ಚಿದೆ.ದೇವಾಲಯ ನಿರ್ಮಾಣವಾಗುವ ಸ್ಥಳದಲ್ಲಿ ವಿಶೇಷವಾಗಿ ಜಲರಾಶಿಯಿರುವುದರಿಂದ ಇದು ಸಮೃದ್ದಿಯ ಸಂಕೇತ ಎಂದರು.

ಜೆಸಿಬಿ ಇಂಡಿಯಾ ಲಿಮಿಟೆಡ್ ಇದರ ಸಿಇಓ ಜಾಗೂ ಎಂ.ಡಿ, ದೀಪಕ್ ಶೆಟ್ಟಿ ಮಾತನಾಡಿ, ಶ್ರದ್ಧಾ ಭಕ್ತಿಯ ಸಂಗಮ ಕ್ಷೇತ್ರ ದೇವಸ್ಥಾನ. ಪಾಶ್ಚಾತ್ಯ ದೇಶಗಳಲ್ಲಿ ಎಲ್ಲಾ ಐಶ್ವರ್ಯಗಳಿದ್ದರೂ ಮಾನಸಿಕ ನೆಮ್ಮದಿ ಕಡಿಮೆ,ಕಾರಣ ಅಲ್ಲಿ ದೇವಾಲಯಗಳಿಲ್ಲ,ಭಾರತದಲ್ಲಿ ಬಡವನ ಮೊಗದಲ್ಲು ಮಂದಸ್ಮಿತವಿದೆ. ಕಾರಣ ಭಾರತದಲ್ಲಿರುವ ಶ್ರದ್ದಾ ಕೇಂದ್ರಗಳ ಧನಾತ್ಮಕ ಪರಿಣಾಮ.ಮಾನಸಿಕ ನೆಮ್ಮದಿ ದೇವಸ್ಥಾನ ದರ್ಶನದಿಂದ ಸಾಧ್ಯ,ನಾವು ಅಳಿಯಬಹುದು ಆದರೆ ದೇವಸ್ಥಾನಗಳು ಭವಿಷ್ಯದ ಸೂಚನೆ ಎಂದರು. ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ಬೆಳಂದೂರು ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣಮಾಡುವ ಸುಯೋಗ ಒದಗಿ ಬಂದಿದೆ. ಎರಡು ನದಿಗಳ ಸಂಗಮ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಇನ್ನಷ್ಟು ಹೆಮ್ಮೆಯ ವಿಚಾರ ಎಂದರು.

ವೇದಿಕೆಯಲ್ಲಿ ಗೌರವ ಸಲಹೆಗಾರರಾದ ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ ,ಚಂದ್ರಶೇಖರ ರೈ ಮಾದೋಡಿ,ಪ್ರಭಾಕರ ರೈ ಎಣ್ಮೂರು ಪಟ್ಟೆ, ವಿಜಯ ಕುಮಾರ್ ಸೊರಕೆ, ಶ್ರೀಧರ ರೈ ಮಾದೋಡಿ, ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ, ದೀನಬಂಧು ರೈ ಮಾದೋಡಿ, ಉಪಸ್ಥಿತರಿದ್ದರು. ಉದಯ ರೈ ಮಾದೋಡಿ ಅತಿಥಿಗಳಿಗೆ ಶಾಲು ನೀಡಿ ಗೌರವಿಸಿದರು. ದೀನಬಂಧು ರೈ ಮಾದೋಡಿಯವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಗತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ವಂದಿಸಿದರು. ಶಿಕ್ಷಕರಾದ ವಿನಯ ವಿ.ಶೆಟ್ಟಿ, ಅನಿತಾ ಜೆ.ರೈ ಕಾರ್ಯಕ್ರಮ ನಿರೂಪಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಗರ್ಭಗುಡಿಯ ಶಿಲಾನ್ಯಾಸದ ಮುಹೂರ್ತ ದಿನದಂದೇ ಅಜಿರಂಗಳದ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿದೆ. ಕ್ಷೇತ್ರದ ಜೀರ್ಣೋದ್ದಾರದಿಂದ ಊರಿನಲ್ಲಿ ಸಮೃದ್ದಿ ನೆಲೆಯಾಗಲಿದೆ. – ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು

ಬೆಳಿಗ್ಗೆ 10-7ರ ಕರ್ಕಾಟಕ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಶ್ರೀ ವೇ.ಮೂ.ಸುಬ್ರಹ್ಮಣ್ಯ ಬಳ್ಳಕ್ಕುರಾಯ ತಂತ್ರಿಯವರ ನೇತೃತ್ವದಲ್ಲಿ ಅಜಿರಂಗಳ ಶ್ರೀ ಬಾಲಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದ ನೂತನ ಗರ್ಭಗುಡಿಯ ಶಿಲಾನ್ಯಾಸ ನೆರವೇರಿತು. ಈ ಸಂದರ್ಭದಲ್ಲಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ,ಬಾಲಸುಬ್ರಹ್ಮಣ್ಯ ಸ್ವಾಮಿ ಸೇವಾ ಟ್ರಸ್ಟ್‌ನ ಮೆನೇಜಿಂಗ್ ಟ್ರಸ್ಟಿ, ಟ್ರಸ್ಟಿಗಳು ಗೌರವ ಸಲಹೆಗಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here