ಬಿಳಿನೆಲೆ ಗ್ರಾ.ಪಂ. ಸಾಮಾನ್ಯ ಸಭೆ; ಮಳೆಗಾಲದಲ್ಲಿ ಪಂಚಾಯತ್ ರಸ್ತೆಗಳಲ್ಲಿ ಘನ ವಾಹನಗಳಿಗೆ ನಿರ್ಬಂಧ

0

ಕಡಬ: ಮಳೆಗಾಲದಲ್ಲಿ ಪಂಚಾಯತ್ ರಸ್ತೆಗಳು ತೀರಾ ಹದಗೆಡುತ್ತಿರುವುದರಿಂದ ಮರ ಸಾಗಾಟ, ಕಲ್ಲು ಸಾಗಾಟದಂತಹ ಘನ ವಾಹನಗಳಿಗೆ ನಿರ್ಬಂಧ ವಿಧಿಸುವ ಬಗ್ಗೆ ಚರ್ಚೆ ನಡೆಸಿ, ನಿರ್ಣಯ ಕೈಗೊಂಡಿರುವುದು, ಪಂಚಾಯತ್ ಕುಡಿಯುವ ನೀರಿನ ಶುಲ್ಕವನ್ನು ಬಾಕಿ ಇರಿಸಿಕೊಂಡವರ ಸಂಪರ್ಕ ಕಡಿತ ಹಾಗೂ ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿರುವ ಬಗ್ಗೆ ಕ್ರಮ ಕೈಗೊಳ್ಳುವುದು ಮೊದಲಾದ ವಿಚಾರಗಳ ಬಗ್ಗೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದು ಬಿಳಿನೆಲೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ. ಸಭೆಯು ಗ್ರಾ.ಪಂ. ಅಧ್ಯಕ್ಷ ಶಿವಶಂಕರ್ ಅವರ ಅಧ್ಯಕ್ಷತೆಯಲ್ಲಿ ಜೂ.27ರಂದು ನಡೆಯಿತು.

ಘನ ವಾಹನಗಳಿಗೆ ನಿರ್ಬಂಧ:

ಗ್ರಾ.ಪಂ. ಸದಸ್ಯ ಸುಧೀರ್ ಕುಮಾರ್ ಶೆಟ್ಟಿ ವಿಷಯ ಪ್ರಸ್ತಾಪಿಸಿ, ಸಾಮಾನ್ಯವಾಗಿ ಮಳೆಗಾಲದಲ್ಲಿ ಮೂರು ತಿಂಗಳು ಪ್ರಾಕೃತಿಕ ವಿಕೋಪಗಳು ನಡೆಯುತ್ತದೆ, ಅಂತೆಯೇ ಗ್ರಾಮೀಣ ರಸ್ತೆಗಳು ಕೂಡ ಹದಗೆಡುತ್ತದೆ, ರಸ್ತೆಗಳಲ್ಲಿ ಮರ ಸಾಗಾಟ, ಕೆಂಪು ಕಲ್ಲುಗಳ ಸಾಗಾಟ ಮೊದಲಾದ ಘನ ವಾಹನಗಳ ಸಂಚಾರದಿಂದ ರಸ್ತೆ ಮತ್ತಷ್ಟು ಹದಗೆಡುತ್ತದೆ ಈ ಹಿನ್ನಲೆಯಲ್ಲಿ ಮಳೆಗಾಲದಲ್ಲಿ ಪಂಚಾಯತ್ ರಸ್ತೆಗಳಲ್ಲಿ ಘನ ವಾಹನಗಳಿಗೆ ನಿಷೇಧ ಹೇರುವಂತೆ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ ಆಗ್ರಹಿಸಿದರು. ಈ ಬಗ್ಗೆ ಮಾತನಾಡಿದ ಉಪಾಧ್ಯಕ್ಷೆ ಶಾರಾದ ದಿನೇಶ್ ಅವರು, ಒಂದು ವೇಳೆ ಸಂಚರಿಸಲೇ ಬೇಕಾದ ಅನಿವಾರ್ಯ ಸಂದರ್ಭದಲ್ಲಿ ರಸ್ತೆಗಳು ಹಾಳಾದರೆ ಅವರನ್ನೆ ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದರು. ಪಂಚಾಯತ್ ರಸ್ತೆಗಳಲ್ಲಿ ಘನ ವಾಹನಗಳಿಗೆ ನಿರ್ಬಂಧ ವಿಧಿಸುವ ಬಗ್ಗೆ ಅಧ್ಯಕ್ಷರು ಹಾಗೂ ಇತರ ಸದಸ್ಯರು ಒಪ್ಪಿಗೆ ಸೂಚಿಸಿದರು, ಬಳಿಕ ಈ ಬಗ್ಗೆ ನಿರ್ಣಯ ಬರೆಯಲಾಯಿತು.

ನೀರಿನ ಶುಲ್ಕ ಬಾಕಿ, ಕುಡಿಯುವ ನೀರು ಇತರ ಉದ್ದೇಶಗಳಿಗೆ ಬಳಕೆ-ಚರ್ಚೆ

ಈಗಾಗಲೇ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಶುಲ್ಕ ಬಾಕಿ ಇರಿಸಿಕೊಂಡಿರುವ ಬಗ್ಗೆ ಹಾಗೂ ಕುಡಿಯುವ ನೀರನ್ನು ಇತರ ಉದ್ದೇಶಗಳಿಗೆ ಬಳಸುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈಗಾಗಲೇ ಕೆಲ ಕುಡಿಯುವ ನೀರಿನ ಫಲಾನುಭವಿಗಳು ನೀರಿನ ಶುಲ್ಕ ಬಾಕಿ ಇರಿಸಿಕೊಂಡಿದ್ದಾರೆ, ಪಾವತಿಸಲು ವಿನಂತಿಸಿದರೂ ಪಾವತಿಸುತ್ತಿಲ್ಲ ಎಂದು ಪಿಡಿಒ ಸಭೆಗೆ ತಿಳಿಸಿದರು. ಈ ಬಗ್ಗೆ ಅಧ್ಯಕ್ಷ ಶಿವಶಂಕರ್ ಅವರು ಮಾತನಾಡಿ, ಕುಡಿಯುವ ನೀರಿನ ಶುಲ್ಕವನ್ನು ಗ್ರಾಮಸ್ಥರು ಯಾರು ಬಾಕಿ ಇರಿಸಿಕೊಳ್ಳಬಾರದು, ಇದರಿಂದ ಎಲ್ಲರಿಗೂ ನೀರಿನ ಸರಬರಾಜಿಗೆ ತೊಂದರೆಯಗುತ್ತದೆ, ಇನ್ನು ಮುಂದೆ ನೀರಿನ ಶುಲ್ಕ ಬಾಕಿ ಇರಿಸಿಕೊಂಡವರ ಸಂಪರ್ಕವನ್ನು ನಿರ್ದಾಕ್ಷಿಣ್ಯವಾಗಿ ಕಡಿತ ಮಾಡಲಾಗುವುದು. ಅಲ್ಲದೆ ಕೆಲವರು ಅತೀ ಬುದ್ದಿವಂತಿಗೆ ತೋರಿಸಿ ಕುಡಿಯುವ ನೀರನ್ನು ಕೃಷಿ ಅಥಾವ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವುದು ಕೂಡ ನಮ್ಮ ಗಮನಕ್ಕೆ ಬಂದಿದೆ, ಮುಂದೆ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಿಗೆ ಅಧ್ಯಕ್ಷರು ಸೂಚಿಸಿದರು.

ವ್ಯಾಪಾರ ಪರವಾನಿಗೆ ಶುಲ್ಕ ಹೆಚ್ಚಳಕ್ಕೆ ಸಭೆಯಲ್ಲಿ ನಿರ್ಣಯ:

ಬಿಳಿನೆಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಿಗೆಗೆ ಈ ಹಿಂದೆ ವಿಧಿಸಲಾದ ಶುಲ್ಕವೂ ಅವೈಜ್ಞಾನಿಕವಾಗಿದೆ ಕೆಲವು ದೊಡ್ಡ ವ್ಯಾಪಾರಸ್ಥರಿಗೂ ಕಡಿಮೆ ಶುಲ್ಕ ವಿಧಿಸಲಾಗಿದೆ, ಈ ಹಿನ್ನಲೆಯಲ್ಲಿ ಎಲ್ಲ ಅಂಗಡಿಗಳನ್ನು ಪಿಡಿಒ ಅವರು ಖುದ್ದಾಗಿ ಪರಿಶೀಲನೆ ಮಾಡಿ, ವ್ಯಾಪಾರಕ್ಕನುಗುಣವಾಗಿ ಸಮರ್ಪಕ ಶುಲ್ಕ ವಿಧಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚಿಸಿದರು.

ಇತರ ಚರ್ಚೆಗಳು:

15ನೇ ಹಣಕಾಸು ಯೋಜನೆಯ ಕ್ರೀಯಾ ಯೋಜನೆಯನ್ನು ನಮಗೆ ತೋರಿಸಿದ ಬಳಿಕವೇ ಫೈನಲ್ ಮಾಡಿ, ನಮ್ಮ ಗಮನಕ್ಕೆ ತಾರದೆ ಅನುಮೋದನೆಗೆ ಕಳುಹಿಸಬೇಡಿ ಎಂದು ಸದಸ್ಯ ಸುಧೀರ್ ಕುಮಾರ್ ಶೆಟ್ಟಿಯವರು ಪಿಡಿಒ ಅವರಿಗೆ ಹೇಳಿದರು. ಪಂಚಾಯತ್ ಆವರಣದಲ್ಲಿರುವ ಶೌಚಾಲಯ ಮತ್ತು ಪಂಚಾಯತ್ ವಠಾರದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಸದಸ್ಯರು ಗ್ರಾ.ಪಂ. ಅಭಿವೃದ್ದಿ ಅಧಿಕಾರಿಯವರಿಗೆ ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು. ನೆಟ್ಟಣದಲ್ಲಿ ಅಂಗಡಿ ಕೊಣೆಯನ್ನು ಏಲಂ ಮಾಡಲಾಗಿದ್ದರೂ ಇದುವರೆಗೆ ಪಂಚಾಯತ್‌ನವರು ಕೀ ನೀಡಲಿಲ್ಲ, ಅಗ್ರಿಮೆಂಟ್ ಕೂಡ ಆಗಿಲ್ಲ ಯಾಕೆ ಈ ರೀತಿ ಎಂದು ಪ್ರಶ್ನಿಸಿದ ಸುಧೀರ್ ಕುಮಾರ್ ಶೆಟ್ಟಿಯವರು ನೀವು ಕೂಡಲೇ ಏಲಂ ಪಡೆದುಕೊಂಡವರಿಗೆ ಸರಿಯಾದ ವ್ಯವಸ್ಥೆ ಮಾಡಿಕೊಡಿ ಎಂದರು. ಇದಕ್ಕೆ ಪಿಡಿಒ ಹಾಗೂ ಕಾರ್ಯದರ್ಶಿಯವರು ಉತ್ತರಿಸಿ, ಅಂಗಡಿ ಏಲಂ ಪಡೆದುಕೊಂಡವರು ಕೀ ನಮ್ಮಲ್ಲಿ ಕೇಳಲಿಲ್ಲ ಎಂದು ಹೇಳಿದರು. ಅಂಗಡಿ ಕೊಣೆಯನ್ನು ಏಲಂನಲ್ಲಿ ಪಡೆದುಕೊಂಡವರು ಇದುವರೆಗೆ ಕೀ ಪಡೆದುಕೊಂಡಿಲ್ಲ ಯಾಕೆ ಎಂಬ ಬಗ್ಗೆಯೂ ಚರ್ಚೆ ನಡೆಯಿತು. ಈ ವಿಚಾರದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ ಎಂಬ ಆರೋಪವೂ ವ್ಯಕ್ತವಾಯಿತು. ಮುಂದಿನ ಗ್ರಾಮ ಸಭೆಗೆ ಎಲ್ಲಾ ಇಲಾಖಾಧಿಕಾರಿಗಳು ಬರುವಂತಾಗಬೇಕು ಈ ನಿಟ್ಟಿನಲ್ಲಿ ಹಿಂದಿನ ಗ್ರಾಮ ಸಭೆಯ ನಿರ್ಣಯಗಳು ಏನು ಆಗಿದೆ, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆಯೇ, ಕಳೆದ ಗ್ರಾಮ ಸಭೆಯ ನಿರ್ಣಯ ಓದಿ ಎಂದು ಸದಸ್ಯ ಸುಧೀರ್ ಕುಮಾರ್ ಶೆಟ್ಟಿ ಅವರು ಹೇಳಿದರು. ಬಳಿಕ ಗ್ರಾಮ ಸಭೆಯ ನಿರ್ಣಯಗಳನ್ನು ಓದಲಾಯಿತು. ಬಳಿಕ ಮಾತನಾಡಿದ ಅಧ್ಯಕ್ಷರು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದು ಉತ್ತರ ಪಡೆದುಕೊಂಡಿರಬೇಕು, ನಾವು ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಗೆ ಉತ್ತರ ನೀಡಬೇಕಾಗುತ್ತದೆ, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಪಿಡಿಒರವರಿಗೆ ಸೂಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಶಾರಾದದಿನೇಶ್, ಪಂಚಾಯತ್ ಪ್ರಭಾರ ಅಭಿವೃದ್ದಿ ಅಧಿಕಾರಿ ಸುಜಾತ, ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ಚಂದ್ರಾವತಿ, ಬೇಬಿ, ಸತೀಶ್ ಕಳಿಗೆ, ಶಾರಾದ ಬಿಳಿನೆಲೆ, ಭವ್ಯಾ ಕುಕ್ಕಾಜೆ, ಮುರಳೀಧರ ಎರ್ಮಾಯಿಲ್ ಅವರು ಉಪಸ್ಥಿತರಿದ್ದರು. ಗ್ರಾ.ಪಂ. ಕಾರ್ಯದರ್ಶಿ ಶೀನ ವರದಿ ಮಂಡಿಸಿದರು.

ಗ್ರಾ.ಪಂ.ಕಾರ್ಯದರ್ಶಿ ಶೀನ ಅವರು ವರದಿ ಮಂಡಿಸಿದರು,

LEAVE A REPLY

Please enter your comment!
Please enter your name here