ಭಾರತೀಯ ಜನತಾ ಪಾರ್ಟಿ ಎಸ್ಟಿ ಸಮುದಾಯಕ್ಕೆ ಬಹಳಷ್ಟು ಪ್ರಾಮುಖ್ಯತೆ ನೀಡಿದೆ ಬಿಜೆಪಿಯನ್ನು ಟೀಕಿಸುವ ಯಾವ ನೈತಿಕತೆಯೂ ಕಾಂಗ್ರೆಸ್ ನಾಯಕರಿಗಿಲ್ಲ: ಹರೀಶ್ ಬಿಜತ್ರೆ

0

ಪುತ್ತೂರು: ಬಿಜೆಪಿ ಎಸ್ಟಿ ಸಮುದಾಯಕ್ಕೆ ಅಮೋಘವಾದ ಕೊಡುಗೆಗಳನ್ನು ನೀಡಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಎಸ್ಟಿ ಸಮುದಾಯದ ಆಧುನಿಕ ಭಗೀರಥ ಅಮೈ ಮಹಾಲಿಂಗ ನಾಯ್ಕರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕರ್ನಾಟಕದ ವಿಧಾನ ಪರಿಷತ್ತಿಗೆ ಎರಡು ಜನ ಎಸ್ಟಿ ಸಮುದಾಯದವರಿಗೆ ಸದಸ್ಯತ್ವ ನೀಡಿದೆ. ಬಿಜೆಪಿಯ ಕಾರ್ಯಕರ್ತರಾಗಿದ್ದ ಹೇಮಲತಾ ನಾಯ್ಕ್ ಮತ್ತು ಶಾಂತರಾಮ್ ಸಿದ್ದಿಯವರನ್ನು ವಿಧಾನಪರಿಷತ್ತಿಗೆ ಕಳಿಸಲಾಗಿದೆ. ದೇಶದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯನ್ನಾಗಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದೆ. ಎಸ್ಟಿ ಸಮುದಾಯಕ್ಕೆ ಇಷ್ಟೊಂದು ಪ್ರಾಮುಖ್ಯತೆ ನೀಡಿರುವ ಬಿಜೆಪಿಯನ್ನು ಟೀಕಿಸುವ ಯಾವ ನೈತಿಕತೆಯೂ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಬಿಜತ್ರೆ ಹೇಳಿದ್ದಾರೆ.

ಜೂ.28ರಂದು ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 8 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿ ಭಾರತೀಯ ಜನತಾ ಪಾರ್ಟಿಯು ಹಲವು ಕಾರ್ಯಕ್ರಮಗಳನ್ನು ಹಲವು ಮೋರ್ಚಾಗಳ ಮೂಲಕ ಹಮ್ಮಿಕೊಂಡಿದೆ. ಈ ಸಮಾವೇಶದಲ್ಲಿ ಎಸ್‌ಟಿ ಮೋರ್ಚಾದ ವತಿಯಿಂದ ಪುತ್ತೂರಿನಲ್ಲಿ ಎಸ್‌ಟಿ ಸಮುದಾಯದ ಕಾರ್ಯಕರ್ತರು ಮತ್ತು ಫಲಾನುಭವಿಗಳನ್ನು ಸೇರಿಸಿಕೊಂಡು ಮಾಡಿದ್ದ ಸಮಾವೇಶ ಯಶಸ್ವಿಯಾದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಮತಿಭ್ರಮಣೆಗೊಂಡು ಪುತ್ತೂರಿನಲ್ಲಿ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷರು, ಬಿಜೆಪಿಯು ಎಸ್ಟಿ ಸಮುದಾಯಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸಿದ್ದಾರೆ. ಆದರೆ ಅವರು 70 ವರ್ಷಗಳಲ್ಲಿ ಕಾಂಗ್ರೆಸ್ ಎಸ್ಟಿಗಳಿಗೆ ಏನು ಮಾಡಿದೆ ಎನ್ನುವುದನ್ನು ಅರಿತುಕೊಂಡು ಮಾತನಾಡಬೇಕಿತ್ತು ಎಂದು ಹೇಳಿದರು.

ಬಿಜೆಪಿಯಲ್ಲಿ ಹುದ್ದೆ ಕೇಳಿದ ಮಹಾಲಿಂಗ ನಾಯ್ಕ:

ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿಯ ಬಾಗಿಲಿಗೆ ಇಪ್ಪತ್ತೈದು ಸಾರಿ ಬಂದು ನನಗೆ ಪಾರ್ಟಿಯಲ್ಲಿ ಒಂದು ಹುದ್ದೆಯನ್ನು ಕೊಡಿ ಎಂದು ಅಂಗಲಾಚಿದವರು ಈಗ ಭಾರತೀಯ ಜನತಾ ಪಾರ್ಟಿಯ ಬಗ್ಗೆ ಮಾತನಾಡುತ್ತಾರೆ. ಜೊತೆಗೆ ಶಾಸಕರ ಬಗೆಗೂ ಮಾತನಾಡುತ್ತಾರೆ. ಸಂಜೀವ ಮಠಂದೂರು ಅವರನ್ನು ಮನೆಗೆ ಕರೆಸಿ ನನಗೊಂದು ಹುದ್ದೆ ಕೊಡಿ ಎಂದು ಹೇಳಿದ್ದ ಮಹಾಲಿಂಗ ನಾಯ್ಕರು ಕಾಂಗ್ರೆಸ್‌ನಲ್ಲಿ ಖಾಲಿ ಇರುವ ಹುದ್ದೆಯನ್ನು ತುಂಬಿಸಿಕೊಳ್ಳಲು ಹೋಗಿದ್ದಾರೆ ಎಂದು ಹರೀಶ್ ಬಿಜತ್ರೆ ಟೀಕಿಸಿದರು.

ಕಳೆದ 70 ವರ್ಷಗಳಿಂದ ಪರಿಶಿಷ್ಟ ಪಂಗಡವನ್ನು ಓಟ್‌ಬ್ಯಾಂಕ್‌ಗೋಸ್ಕರ ಕಾಂಗ್ರೆಸ್ ಇಟ್ಟುಕೊಂಡಿತ್ತು. ಆದರೆ ಸಮುದಾಯದ ಜನರು ಶಿಕ್ಷಣವಂತರು. ಇಂದು ಎಸ್‌ಸಿ, ಎಸ್ಟಿಗಳ ಜಾಗವನ್ನು ಕಬಳಿಸುವ ಜನರು ಅನೇಕರಿದ್ದಾರೆ. ಕಡಿಮೆ ಬೆಲೆಗೆ ಜಾಗ ಖರೀದಿಸಿ, ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವಂತಹ ಷಡ್ಯಂತ್ರವಾಗುತ್ತಿದೆ. ಪರಿಶಿಷ್ಟ ಪಂಗಡದವರು ತಮ್ಮ ಜಮೀನು ಕಳೆದುಕೊಳ್ಳಬಾರದು ಎನ್ನುವ ನಿಟ್ಟಿನಲ್ಲಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಜಮೀನು ಭೂಪರಿವರ್ತನೆ ಮಾಡುವುದನ್ನು ನಿಷೇಧಿಸಿದೆ. ಮುಂದೆ ಜನರಿಗೆ ಪೂರಕವಾಗಿ ಭೂಪರಿವರ್ತನೆ ಮಾಡಬಹುದು ಎನ್ನುವ ಸೂಕ್ತ ಕ್ರಮಗಳನ್ನು ಸರ್ಕಾರ ಮುಂದಿನ ದಿನಗಳಲ್ಲಿ ಮಾಡುತ್ತದೆ. ಕಾಂಗ್ರೆಸ್‌ನವರು ಇನ್ನಾದರೂ ಬಿಜೆಪಿಯನ್ನು ಟೀಕಿಸುವುದನ್ನು ನಿಲ್ಲಿಸಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿ ಮಾನವನ್ನು ಉಳಿಸಿಕೊಳ್ಳಿ ಎಂದು ಹರೀಶ್ ಬಿಜತ್ರೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಎನ್.ಎಸ್., ಎಸ್ಟಿ ಮೋರ್ಚಾದ ನಗರ ಮಂಡಲ ಅಧ್ಯಕ್ಷ ಅಶೋಕ್ ಕುಮಾರ್, ಎಸ್ಟಿ ಮೋರ್ಚಾದ ಗ್ರಾಮಾಂತರ ಮಂಡಲ ಅಧ್ಯಕ್ಷ ಶಿವಪ್ಪ ನಾಯ್ಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here