ನೆಲ್ಯಾಡಿ: ಮಡಿಕೇರಿ- ಸಂಪಾಜೆ ನಡುವಿನ ಕೋಯನಾಡು ಸಮೀಪ ರಸ್ತೆ ಬಿರುಕು ಬಿಟ್ಟಿದ್ದು ಸದ್ರಿ ರಸ್ತೆಯಲ್ಲಿ ಲಘು ವಾಹನ ಸಂಚಾರ ಹೊರತುಪಡಿಸಿ ಉಳಿದಂತೆ ಇತರೆ ವಾಹನ ಸಂಚಾರಕ್ಕೆ ಸುರಕ್ಷಿತವಾಗದ ಕಾರಣ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನಲ್ಲಿ ವಾಹನಗಳ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಸಡಿಲಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಮಾರನಹಳ್ಳಿಯಲ್ಲಿ ರಸ್ತೆ ಕುಸಿತಗೊಂಡ ಹಿನ್ನೆಲೆಯಲ್ಲಿ ದೊಣಿಗಲ್-ಹೆಗ್ಗದ್ದೆವರೆಗಿನ ಶಿರಾಡಿ ಘಾಟ್ ರಸ್ತೆಯಲ್ಲಿ ರಾತ್ರಿ ವೇಳೆ ಘನ ವಾಹನಗಳ ಸಂಚಾರ ನಿಷೇಧಿಸಿ ಹಾಸನ ಜಿಲ್ಲಾಧಿಕಾರಿಯವರು ಆದೇಶಿಸಿದ್ದರು. ಇದೀಗ ಮಡಿಕೇರಿ-ಸಂಪಾಜೆ ರಸ್ತೆ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್‌ನಲ್ಲಿ ಪ್ರಯಾಣಿಕ ಬಸ್‌ಗಳು ರಾತ್ರಿ ವೇಳೆಯೂ ಸಂಚರಿಸಲು ಅನುಮತಿ ನೀಡಲಾಗಿದೆ. ಸಾರ್ವಜನಿಕರು ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು, ರಾಜಹಂಸ, ಐರಾವತ, ಅಂಬಾರಿ, ಡ್ರೀಮ್ ಕ್ಲಾಸ್ ಸ್ಲೀಪರ್, ನಾನ್ ಎಸಿ ಸ್ಲೀಪರ್, ಸ್ಕ್ಯಾನಿಯಾ, ಮಲ್ಟಿ ಆಕ್ಸೆಲ್ ವೋಲ್ವೊ ಬಸ್‌ಗಳಲ್ಲಿ ರಾತ್ರಿ ವೇಳೆಯೂ ಸಂಚರಿಸಬಹುದಾಗಿದೆ. ದೊಣಿಗಲ್-ಹೆಗ್ಗದ್ದೆ ಮಾರ್ಗದಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಮಳೆ ಹೆಚ್ಚಾದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯವರು ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಕ್ತ ಕ್ರಮ ವಹಿಸಲು ಸೂಚಿಸಲಾಗಿದೆ.
ಮಳೆಯಿಂದಾಗಿ ದೋಣಿಗಲ್‌ನಲ್ಲಿ ಭೂಕುಸಿತವಾದ ಹಿನ್ನೆಲೆಯಲ್ಲಿ ಜುಲೈ ೧೫ರಿಂದ ೨೧ರ ತನಕ ಶಿರಾಡಿ ಘಾಟ್‌ನಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಆ ಬಳಿಕ ಜು.೨೧ರಿಂದ ಬೆಳಿಗ್ಗೆ ೬ರಿಂದ ಸಂಜೆ ೬ರ ತನಕ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.
Hope it will stand still till the end of monsoon