ದಾನಿಗಳ ನೆರವಿನಿಂದ ಮನೆ ನಿರ್ಮಿಸಿ ಹಸ್ತಾಂತರ
ಹಿರೆಬಂಡಾಡಿ: ಕಡಬ ತಾಲೂಕಿನ ಕೊಯಿಲ ಗ್ರಾಮದ ಮರ‍್ವದಗುರಿ ಎಂಬಲ್ಲಿ ಬಡ ಮಹಿಳೆ ಲಲಿತಾ ಎಂಬವರ ಕುಟುಂಬಕ್ಕೆ ಕೊಯಿಲ ಶಾಖೆಪುರದ ಸಂಜೀವಿನಿ ಮಿತ್ರವೃಂದ ಹಾಗೂ ಶಾಖೆಪುರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ವತಿಯಿಂದ ನಿರ್ಮಿಸಿಕೊಟ್ಟ ನೂತನ ಮನೆ ’ ಸಂಜೀವಿನಿ ನಿಲಯ ’ದ ಗೃಹಪ್ರವೇಶ ಹಾಗೂ ಮನೆ ಹಸ್ತಾಂತರ ಕಾರ್ಯಕ್ರಮ ಆ.20ರಂದು ನಡೆಯಿತು. ಬಡ ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸಿರುವ ಶಾಖೆಪುರ ಸಂಜೀವಿನಿ ಮಿತ್ರವೃಂದದ ಯುವಕರ ತಂಡದ ಮಾದರಿ ಕೆಲಸ ಗ್ರಾಮಸ್ಥರ ಶ್ಲಾಘನೆಗೆ ಪಾತ್ರವಾಗಿದೆ.
ಲಲಿತಾ ಅವರಿಗೆ ನೂತನ ಮನೆಯ ಕೀ ಹಸ್ತಾಂತರ ಮಾಡಿ ಮಾತನಾಡಿದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಭಟ್ ಅವರು, ಊರಿನ ಬಡ ಮಹಿಳೆಯ ಸಂಕಷ್ಟ ಅರಿತ ಸಂಜೀವಿನಿ ಮಿತ್ರವೃಂದದ ತರುಣರೆಲ್ಲರೂ ಸೇರಿಕೊಂಡು ಮನೆ ನಿರ್ಮಾಣ ಮಾಡಿಕೊಟ್ಟಿರುವ ಕೆಲಸ ಇತರರಿಗೆ ಪ್ರೇರಣೆಯಾಗಲಿ. ಸಮಾಜದಲ್ಲಿನ ಬಡವರಿಗೆ ಸಹಾಯ ಮಾಡುವುದರಿಂದ ಜೀವನ ಸಾರ್ಥಕತೆಯಾಗಲು ಸಾಧ್ಯ ಎಂದರು. ಮುಖ್ಯ ಅತಿಥಿಯಾಗಿದ್ದ ಹಿಂದೂ ಸಂಘಟನೆಗಳ ಮುಖಂಡ ಅರುಣ್‌ಕುಮಾರ್ ಪುತ್ತಿಲ ಮಾತನಾಡಿ, ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಕೆಲಸ ಸಂಜೀವಿನಿ ಮಿತ್ರವೃಂದದವರಿಂದ ಆಗಿದೆ. ಇದೊಂದು ಮಾದರಿ ಹಾಗೂ ಇತರರಿಗೆ ಪ್ರೇರಣೆಯಾಗುವ ಕೆಲಸ ಎಂದರು.
ಕೊಯಿಲ ಗ್ರಾ.ಪಂ.ಅಧ್ಯಕ್ಷ ಹರ್ಷಿತ್, ಉಪಾಧ್ಯಕ್ಷೆ ಕಮಲಾಕ್ಷಿ ಪಾಜಳಿಕೆ, ಹಿರೆಬಂಡಾಡಿ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ ನೆಹರುತೋಟ, ಮನೆಯ ಒಡತಿ ಲಲಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮನೆ ನಿರ್ಮಿಸಲು ವಸ್ತುರೂಪದಲ್ಲಿ ಸಹಾಯ ಮಾಡಿದ ಸದಸ್ಯರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸೋಮೇಶ್ ಕೇಪುಳು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಹಿರೆಬಂಡಾಡಿ ಹಾಗೂ ಕೊಯಿಲ ಗ್ರಾ.ಪಂ.ಸದಸ್ಯರು, ಗ್ರಾಮಸ್ಥರು, ಸಂಜೀವಿನಿ ಮಿತ್ರವೃಂದದ ಸದಸ್ಯರು ಉಪಸ್ಥಿತರಿದ್ದರು. ಮಧ್ಯಾಹ್ನ ಸಿಹಿ ಊಟ ನೀಡಲಾಯಿತು.
3 ಲಕ್ಷ ರೂ.,ವೆಚ್ಚದ ಮನೆ:
ವಾಸಿಸಲು ಸರಿಯಾದ ಸೂರು ಇಲ್ಲದೆ ಹಲವಾರು ವರ್ಷಗಳಿಂದ ಟರ್ಪಾಲು ಹಾಕಿದ ಗುಡಿಸಲಿನಲ್ಲಿ ಲಲಿತಾ ಅವರು ಅಂಗವಿಕಲ ಪತಿ ತನಿಯ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದರು. ತನಿಯ ಅವರು ಇತ್ತೀಚೆಗೆ ನಿಧನ ಹೊಂದಿದರು. ಜೀವನ ಸಾಗಿಸಲು ಪರದಾಟ ನಡೆಸುವ ಪರಿಸ್ಥಿತಿ ಈ ಕುಟುಂಬದಾಗಿತ್ತು. ಈ ಬಗ್ಗೆ ವರ್ಷದ ಹಿಂದೆ ಸುದ್ದಿಬಿಡುಗಡೆ ಪತ್ರಿಕೆ ಹಾಗೂ ಸುದ್ದಿ ನ್ಯೂಸ್ ಚಾನೆಲ್‌ನಲ್ಲಿ ವರದಿ ಪ್ರಸಾರಗೊಂಡಿತ್ತು. ಇದರ ಫಲಶ್ರುತಿ ಎಂಬಂತೆ ಬೆಂಗಳೂರಿನ ವ್ಯಕ್ತಿಯೊಬ್ಬರು ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಇದು ಈಡೇರಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಾಖೆಪುರ ಸಂಜೀವಿನಿ ಮಿತ್ರವೃಂದದ ಸದಸ್ಯರು ಲಲಿತಾ ಅವರ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಮುಂದಾದರು. ದಾನಿಗಳನ್ನು ಸಂಪರ್ಕಿಸಿ ಅವರ ಮೂಲಕ ಮನೆಗೆ ಬೇಕಾದ ಸಾಮಾಗ್ರಿಗಳನ್ನು ತರಿಸಿಕೊಂಡು ಒಂದು ವರ್ಷದೊಳಗೆ ಸುಮಾರು 3 ಲಕ್ಷ ರೂ.,ವೆಚ್ಚದಲ್ಲಿ ಸುಂದರ ಮನೆ ನಿರ್ಮಾಣ ಮಾಡಲಾಗಿದೆ. ನೂತನ ಮನೆಯಲ್ಲಿ ಬೆಳಿಗ್ಗೆ ಗಣಹೋಮ, ಗೃಹಪ್ರವೇಶ ನಡೆಯಿತು.