ನೆಲ್ಯಾಡಿ: ಮೈಸೂರು ನಿವಾಸಿ ಲಾರಿ ಚಾಲಕರೋರ್ವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಆ.23ರಂದು ಬೆಳಿಗ್ಗೆ ನಡೆದಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಠದಕೊಪ್ಪಲು ಗ್ರಾಮದ ನಿವಾಸಿ ಅಣ್ಣೇಗೌಡರ ಪುತ್ರ ಮಹಾದೇವ(36ವ.) ಮೃತಪಟ್ಟವರಾಗಿದ್ದಾರೆ. ಮೃತಪಟ್ಟ ಮಹಾದೇವ ಅವರು ತನ್ನ ಸ್ನೇಹಿತ ಟ್ಯಾಂಕರ್ ಚಾಲಕರಾಗಿರುವ ಮಳಲಿ ಗ್ರಾಮದ ಚಂದ್ರಹಾಸ(38ವ.)ರವರ ಜೊತೆಗೆ ಆ.15ರಿಂದ ಚಾಲಕನಾಗಿ ಕೆಲಸ ಮಾಡುವುದಾಗಿ ಬಂದಿದ್ದರು. ಇಬ್ಬರೂ ಟ್ಯಾಂಕರ್‌ನಲ್ಲಿ (ಕೆಎ 19, ಎಬಿ 9393) ಚಾಲಕರಾಗಿದ್ದು ಆ.22ರಂದು ಸಂಜೆ ಮಂಗಳೂರಿನ ಎಂಆರ್‌ಪಿಎಲ್‌ನಿಂದ ಬೆಂಗಳೂರು ಕಡೆಗೆ ಟ್ಯಾಂಕರ್ ಚಲಾಯಿಸಿಕೊಂಡು ಬಂದಿದ್ದು ರಾತ್ರಿ ಸುಮಾರು 11ಗಂಟೆ ವೇಳೆಗೆ ಅಡ್ಡಹೊಳೆಗೆ ತಲುಪಿದ್ದಾರೆ. ಶಿರಾಡಿ ಘಾಟಿಯಲ್ಲಿ ರಾತ್ರಿ ಸರಕು ಸಾಗಾಟದ ವಾಹನಗಳಿಗೆ ನಿರ್ಬಂಧವಿದ್ದ ಹಿನ್ನೆಲೆಯಲ್ಲಿ ಅಡ್ಡಹೊಳೆಯಲ್ಲಿ ರಸ್ತೆ ಬದಿ ಟ್ಯಾಂಕರ್ ಲಾರಿ ನಿಲ್ಲಿಸಿ ಇಬ್ಬರೂ ಲಾರಿಯಲ್ಲಿಯೇ ಮಲಗಿದ್ದರು. ಆ.23ರಂದು ಬೆಳಗ್ಗಿನ ಜಾವ 3.45ರ ವೇಳೆಗೆ ಮಹಾದೇವ ಎದ್ದು ಲಾರಿಯಿಂದ ಕೆಳಗೆ ಇಳಿದವರು ಮೂತ್ರ ವಿಸರ್ಜನೆ ಮಾಡಿ ಮತ್ತೆ ಲಾರಿಯ ಮೇಲೆ ಹತ್ತಲು ಸಾಧ್ಯವಾಗದೇ ಎದೆನೋವು ಎಂಬುದಾಗಿ ತಿಳಿಸಿದ್ದರು. ಈ ವೇಳೆ ಜೊತೆಗಿದ್ದ ಚಂದ್ರಹಾಸರವರು ಉಪಚರಿಸಿದರೂ ಮಹಾದೇವ ಅವರಿಗೆ ಎದೆನೋವು ಹೆಚ್ಚಾದ ಹಿನ್ನೆಲೆಯಲ್ಲಿ ಶಿರಾಡಿಯ 108 ಆ್ಯಂಬುಲೆನ್ಸ್ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದರು. ಅಲ್ಲಿ ವೈದ್ಯರು ಪರೀಕ್ಷಿಸಿ ಮಹಾದೇವ ಮೃತಪಟ್ಟಿರುವುದಾಗಿ ತಿಳಿಸಿದ್ದರು ಎಂದು ವರದಿಯಾಗಿದೆ. ಈ ಬಗ್ಗೆ ಚಂದ್ರಹಾಸರವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.