ಕಣಿಯೂರು ರಕ್ಷಿತಾರಣ್ಯದಿಂದ ಮರ ಕಡಿದು ಸಾಗಾಟ ಯತ್ನ: 3 ಮಂದಿ ವಿರುದ್ಧ ಪ್ರಕರಣ ದಾಖಲು, ಬಂಧನ

0

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕಣಿಯೂರು ಗ್ರಾಮದ ಮಲೆಂಗಲ್ಲು ಎಂಬಲ್ಲಿನ ಸರ್ಕಾರಿ ಮೀಸಲು ರಕ್ಷಿತಾರಣ್ಯದಿಂದ ಬೃಹತ್ ಗಾತ್ರದ ಕಲ್ಬಾಜಿ ಮರವನ್ನು ಅಕ್ರಮವಾಗಿ ಕಡಿದು ಸಾಗಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ಪತ್ತೆ ಹಚ್ಚಿ ಕೇಸು ದಾಖಲಿಸಿದ್ದಾರೆ.

ಮಲೆಂಗಲ್ಲು ಮೀಸಲು ರಕ್ಷಿತಾರಣ್ಯದಿಂದ ಬೃಹತ್ ಗಾತ್ರದ ಕಲ್ಬಾಜಿ ಮರವನ್ನು ಕಡಿಯುತ್ತಿರುವ ಬಗ್ಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್‌ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿಗಳು ಹಠಾತ್ ಧಾಳಿ ನಡೆಸಿ ಪ್ರಕರಣ ಪತ್ತೆ ಹಚ್ಚಿ ಮರದ ದಿಮ್ಮಿ ಸಮೇತ ೩ ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಕೇಸು ದಾಖಲಿಸಿದ್ದಾರೆ.

ಕಾಡಿನಲ್ಲೇ ಯಂತ್ರ ಬಳಸಿ ದಿಮ್ಮಿ ತಯಾರಿ: ಬಂಧಿತ ಆರೋಪಿಗಳು ಪದ್ಮುಂಜ ನಿವಾಸಿಗಳಾದ ದಿನೇಶ್, ಉಮೇಶ ಗೌಡ, ಹೇಮಂತ್ ಎಂಬವರಾಗಿರುತ್ತಾರೆ. ಆರೋಪಿಗಳು ಮರವನ್ನು ಯಂತ್ರದ ಮೂಲಕ ಉರುಳಿಸಿ ಹಾಕಿದ್ದು, ಬಳಿಕ ಕಾಡಿನ ಒಳಗಡೆಯೇ ಅವುಗಳನ್ನು ದಿಮ್ಮಿಗಳನ್ನಾಗಿ ಮಾಡಿ ಸಾಗಾಟ ಮಾಡಲು ತಯಾರಿ ನಡೆಸಿಕೊಂಡಿದ್ದು, ಅರಣ್ಯ ಇಲಾಖೆ ಅಽಕಾರಿಗಳು ಯಂತ್ರಗಳ ಸಹಿತ ಮರಗಳ ದಿಮ್ಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪತ್ತೆ ಕಾರ‍್ಯಾಚರಣೆಯಲ್ಲಿ ಉಪ ಅರಣ್ಯಾಧಿಕಾರಿ ಬಿ. ಜೆರಾಲ್ಡ್ ಡಿ’ಸೋಜ, ಅರಣ್ಯ ರಕ್ಷಕ ಜಗದೀಶ ಕೆ.ಎನ್., ಎಂ.ಎಂ. ಜಗದೀಶ, ಅರಣ್ಯ ವೀಕ್ಷಕ ರವಿ, ಬಿ. ಸೇಸಪ್ಪ ಗೌಡ ಭಾಗವಹಿಸಿದ್ದರು.

ಮರ ದೇವಸ್ಥಾನಕ್ಕೆಂದು ಹೇಳಿಕೊಂಡಿದ್ದಕ್ಕೆ ಆಕ್ಷೇಪಿತ ವಿಡಿಯೋ ವೈರಲ್ ಆಗಿತ್ತು..!!!: ಕಾಡಿನಿಂದ ಮರ ಕಡಿಯುವ ಬಗ್ಗೆ ಗ್ರಾಮದಲ್ಲಿ ಸುದ್ದಿ ಹರಡಿಕೊಂಡಿತ್ತು. ಆ ಸಂದರ್ಭದಲ್ಲಿ ಆರೋಪಿಗಳು ಈ ಮರ ಸ್ಥಳೀಯ ದೇವಸ್ಥಾನಕ್ಕೆ ಎಂದು ಹೇಳಿಕೊಂಡಿದ್ದರೆನ್ನಲಾಗಿ, ಇದಕ್ಕೆ ಆಕ್ಷೇಪ ಸೂಚಿಸಿದ ದೇವಸ್ಥಾನದ ಸಮಿತಿ ಸದಸ್ಯರೋರ್ವರು ಕಾಡಿನಿಂದ ಬೃಹತ್ ಮರ ಕಡಿದಿದ್ದಾರೆ. ಕಡಿದವರು ದೇವಸ್ಥಾನಕ್ಕೆ ಎಂದು ಹೇಳಿಕೊಂಡಿದ್ದಾರೆ, ಆದರೆ ದೇವಸ್ಥಾನದಲ್ಲಿ ಈ ಬಗ್ಗೆ ಯಾವುದೇ ನಿರ್ಧಾರ ಆಗಿರುವುದಿಲ್ಲ, ಈ ಬಗ್ಗೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಸಂಭಾಷಣೆ ಇರುವ ವಿಡಿಯೋ ಸಹಿತ ಆಡಿಯೋ ವೈರಲ್ ಆಗಿತ್ತು.

LEAVE A REPLY

Please enter your comment!
Please enter your name here