ಸೆ.2: ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ – ಶಾಸಕರಿಂದ ಅಧಿಕಾರಿಗಳ ಸಭೆ

0

ಎಲ್ಲಾ ಇಲಾಖಾ ಫಲಾನುಭವಿಗಳು ಭಾಗವಹಿಸಲು ವ್ಯವಸ್ಥೆ ಕಲ್ಪಿಸುವಂತೆ ಸಂಜೀವ ಮಠಂದೂರು ಸೂಚನೆ

  • ಸಭೆಯಲ್ಲಿ ಸುಮಾರು 12 ಸಾವಿರ ಫಲಾನುಭವಿಗಳ ಸಂಖ್ಯೆ ಪಟ್ಟಿ
  • ಸುಮಾರು 250 ಬಸ್‌ಗಳು – ಕೆಎಸ್ಸಾರ್ಟಿಸಿ ವ್ಯವಸ್ಥೆ ಮಾಡಬೇಕು
  • ಗ್ರಾ.ಪಂ ಪಿಡಿಒ ಗ್ರಾಮ ಮಟ್ಟದಲ್ಲಿ ನೇತೃತ್ವ ವಹಿಸಬೇಕು

ಪುತ್ತೂರು: ಸೆ.2 ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಪುತ್ತೂರಿನ ವಿವಿಧ ಇಲಾಖೆಯಿಂದ ಕೇಂದ್ರ ಸರಕಾರದ ಯೋಜನಾ ಸೌಲಭ್ಯ ಪಡೆದ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ವ್ಯವಸ್ಥೆ ಕಲ್ಪಿಸುವಂತೆ ಶಾಸಕ ಸಂಜೀವ ಮಠಂದೂರು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಗಳೂರು ನಗರದ ಗೋಲ್ಡ್ ಪಿಂಚ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ಅಧಿಕಾರಿಗಳೊಂದಿಗೆ ಸಭೆಯ ಸಿದ್ಧತೆ, ಭದ್ರತೆ ಬಗ್ಗೆ ಚರ್ಚಿಸಲಾಯಿತು.ಈ ಹಿನ್ನೆಲೆಯಲ್ಲಿ ಶಾಸಕರು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆ.26ರಂದು ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿದರು. ಯೋಜನೆಯನ್ನು ಪಡೆದು ಕೊಂಡ ಫಲಾನುಭವಿಗಳು ಹೇಗಿದ್ದಾರೆಂದು ತಿಳಿಯುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮ ಯಶಸ್ವಿಯಾಗಲು ಪುತ್ತೂರು ತಾಲೂಕಿನಿಂದ ನಿರೀಕ್ಷಿತ ಸಂಖ್ಯೆಯಲ್ಲಿ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಫಲಾನುಭವಿಗಳನ್ನು ಕರೆದುಕೊಂಡು ಹೋಗಲು ಅಲ್ಲಲ್ಲಿ ಸ್ಥಳೀಯವಾಗಿ ಎಲ್ಲೆಲ್ಲಿ ವಾಹನದ ಲಭ್ಯತೆಯನ್ನು ಗುರುತಿಸಬೇಕು. ತಹಶೀಲ್ದಾರ್ ಮತ್ತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಯವರು ಈ ಎಲ್ಲಾ ವ್ಯವಸ್ಥೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳಬೇಕೆಂದರು.


12ಸಾವಿರ ಫಲಾನುಭವಿಗಳು:
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ವಿವಿಧ ಇಲಾಖೆಯ ಫಲಾನುಭವಿಗಳ ಸಂಖ್ಯೆಯನ್ನು ಶಾಸಕರು ಪಡೆದುಕೊಂಡರು. ಸ್ತ್ರಿಶಕ್ತಿ, ಸಂಜೀವಿನಿಯಿಂದ 1ಸಾವಿರ, ಪಿಎಂ.ಕಿಸಾನ್ ಯೋಜನೆಯ ಸುಮಾರು 2500 ಫಲಾನುಭವಿಗಳು, ದೀನ್‌ದಯಾಳ್, ಗ್ರಾಮೀಣ ಬೆಳಕು ಯೋಜನೆಯ 2500 ಫಲಾನುಭವಿಗಳು, ನಗರಸಭೆಯ 500 ಫಲಾನುಭವಿಗಳು, ಜನನಿ ಸುರಕ್ಷ ಯೋಜನೆಯ 150 ಫಲಾನುಭವಿಗಳು, 250 ಆಶಾ ಕಾರ್ಯಕರ್ತೆಯರು, 600 ಸಮುದಾಯ ಆರೋಗ್ಯ ಅಧಿಕಾರಿಗಳು, 200 ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ಇಲಾಖೆಗಳಿಂದ ಸುಮಾರು 12ಸಾವಿರ ಫಲಾನುಭವಿಗಳ ಪಟ್ಟಿ ಮಾಡಲಾಯಿತು. ಇವರೆಲ್ಲರಿಗೂ ಬಸ್‌ಗಳ ವ್ಯವಸ್ಥೆ ಆಗಬೇಕು. ಜೊತೆಗೆ ಮಧ್ಯಾಹ್ನ ಊಟದ ವ್ಯವಸ್ಥೆಯೂ ಆಗಬೇಕು ಎಂದು ಶಾಸಕರು ತಿಳಿಸಿದರು. ಪುತ್ತೂರಿನಿಂದ ಸುಮಾರು 250 ಬಸ್‌ಗಳ ವ್ಯವಸ್ಥೆ ಆಗಬೇಕು ಮತ್ತು ಆಯಾ ಗ್ರಾಮದ ಫಲಾನುಭವಿಗಳನ್ನು ಕರೆ ತರುವಲ್ಲಿ ಗ್ರಾ.ಪಂ ಪಿಡಿಒ ನೇತೃತ್ವ ವಹಿಸಬೇಕೆಂದರು. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ತಹಸೀಲ್ದಾರ್ ನಿಸರ್ಗಪ್ರಿಯ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹೆಚ್, ಡಿವೈಎಸ್ಪಿ ವೀರಯ್ಯ ಹಿರೇಮಠ್, ಪೌರಾಯುಕ್ತ ಮಧು ಎಸ್ ಮನೋಹರ್, ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ತಾ.ಪಂ ಯೋಜನಾಧಿಕಾರಿ ಸುಕನ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here