ನೆಲ್ಯಾಡಿ: ಹೊಸಗದ್ದೆಯಲ್ಲಿರುವ ಸಾಮಾಜಿಕ ಅರಣ್ಯ ನೆಡುತೋಪಿನಿಂದ ಬೆಲೆಬಾಳುವ ಮರಗಳ ಕಟಾವು ಮಾಡಿ ಮಾರಾಟ ಮಾಡಿರುವ ಪ್ರಕರಣದ ತನಿಖೆಗೆ ಕೋರಿ ಕಳೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಡಿಸಿ, ಡಿಎಫ್‌ಒಗೆ ಮಾಡಿರುವ ಮನವಿಗೆ ಈ ತನಕ ಯಾವುದೇ ಉತ್ತರ ಸಿಗದೇ ಇರುವ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಕುರಿತಂತೆ ಆ.17ರಂದು ನಡೆದ ಬಜತ್ತೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಸಭೆ ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ ಬಿ.ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು. ಬಜತ್ತೂರು ಗ್ರಾಮದ ಪೆರಿಯಡ್ಕ ಹೊಸಗದ್ದೆ ಸಾಮಾಜಿಕ ಅರಣ್ಯ ನೆಡುತೋಪಿನಲ್ಲಿ ಗಾಳಿ ಮತ್ತು ಅಕೇಶಿಯಾ ಮರಗಳ ಕಟಾವು ಸಮಯದಲ್ಲಿ ಬೆಲೆಬಾಳುವ ಇನ್ನಿತರ ಮರಗಳನ್ನು ಕಟಾವು ಮಾಡಿ ಮಾರಾಟ ಮಾಡಿರುವ ವಿಚಾರದ ಕುರಿತು ಕಳೆದ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಮನವಿ ಮಾಡಲಾಗಿತ್ತು. ಆದರೆ ಈ ಮನವಿಗೆ ಈ ತನಕವೂ ಗ್ರಾಮ ಪಂಚಾಯತಿಗೆ ಯಾವುದೇ ಸಮಜಾಯಿಷಿಕೆ ನೀಡದಿರುವುದಕ್ಕೆ ಸದಸ್ಯರು ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಮರ ಕಳ್ಳತನ ಪ್ರಕರಣದಲ್ಲಿ ಟೆಂಡರ್ ಗುತ್ತಿಗೆದಾರರೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳೂ ಸಹ ಭಾಗಿಯಾಗಿರುವ ಗುಮಾನಿ ಕಂಡುಬರುತ್ತಿದೆ ಎಂದು ಅಭಿಪ್ರಾಯಿಸಿದ ಸದಸ್ಯರು, ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ಹೋರಾಟ ನಡೆಸುವ ಕುರಿತು ಚರ್ಚೆ ನಡೆಸಿದರು.
ರಾತ್ರಿ ಪೊಲೀಸ್ ಗಸ್ತಿಗೆ ಮನವಿಗೆ ನಿರ್ಣಯ: ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರಿಯಡ್ಕ, ಪಂರ್ದಾಜೆ, ಪೊರೋಳಿ, ಮಂಜಿಪಳ್ಳ, ಕಾಂಚನ, ಶಾಂತಿನಗರ ಮತ್ತು ಮೇಲೂರು ಪರಿಸರದಲ್ಲಿ ಇತ್ತೀಚೆಗೆ ಕಳ್ಳರ ಹಾವಳಿ ಜಾಸ್ತಿಯಾಗಿದೆ. ಮನೆಗಳ ಕಂಪೌಂಡ್ ಗೇಟ್‌ಗಳ ಕಳ್ಳತನ ಆಗುತ್ತಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಸದ್ರಿ ಪರಿಸರದಲ್ಲಿ ರಾತ್ರಿ ಹೊತ್ತು ಪೊಲೀಸ್ ಗಸ್ತು ತಿರುಗುವಂತೆ ಕೇಳಿಕೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಹಳೆ ಅಂಗನವಾಡಿ ಕಟ್ಟಡ ತೆರವಿಗೆ ಮನವಿ: ಬೆದ್ರೋಡಿ ಎಂಬಲ್ಲಿ ಶಿಶು ಅಭಿವೃದ್ಧಿ ಯೋಜನೆ ಇಲಾಖೆಗೆ ಸಂಬಂಧಿಸಿದ ಉಪಯೋಗದಲ್ಲಿ ಇಲ್ಲದ ಹಳೆ ಅಂಗನವಾಡಿ ಕಟ್ಟಡವನ್ನು ತೆರವುಗೊಳಿಸಿ ಇಲ್ಲಿ ಅಂಗನವಾಡಿ ಮಕ್ಕಳಿಗೆ ಆಟದ ಮೈದಾನ ನಿರ್ಮಾಣಗೊಳಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲು ನಿರ್ಣಯಿಸಲಾಯಿತು. ಉಳಿದಂತೆ ಕಾಮಗಾರಿಗಳ ಪ್ರಗತಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಉಪಾಧ್ಯಕ್ಷೆ ಸ್ಮಿತಾ, ಸದಸ್ಯರಾದ ಮೋನಪ್ಪ ಗೌಡ, ಪ್ರೆಸಿಲ್ಲಾ ಡಿ.ಸೋಜ, ಉಮೇಶ್ ಓಡ್ರಪಾಲು, ಗಂಗಾಧರ ಪಿ.ಎನ್., ಮಾಧವ ಪೂಜಾರಿ, ಗಂಗಾಧರ ಕೆ.ಎಸ್., ವಿಮಲ, ರತ್ನ, ಯಶೋದಾ, ಭಾಗೀರಥಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್‌ಕುಮಾರ್ ಡಿ. ಸ್ವಾಗತಿಸಿ ಸರಕಾರದ ಸುತ್ತೋಲೆಗಳನ್ನು ಸಭೆಯಲ್ಲಿ ತಿಳಿಸಿದರು. ಕಾರ್ಯದರ್ಶಿ ಗಿರಿಯಪ್ಪ ಗೌಡ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.