ವಿಟ್ಲ: ಅಪರೂಪವಾಗಿರುವ ಮುಖದ ಕ್ಯಾನ್ಸರ್ ನಿಂದ ಬಳಲುತ್ತಿದ್ದ 17 ವರ್ಷದ ಬಾಲಕನೋರ್ವನಿಗೆ ದೇರಳಕಟ್ಟೆಯಲ್ಲಿರುವ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್ ಹೇಳಿದರು.
ಈ ಶಸ್ತ್ರ ಚಿಕಿತ್ಸೆಯನ್ನು ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ರವಿವರ್ಮ, ಡಾ.ಗುರುಪ್ರಸಾದ್ ಹಾಗೂ ಡಾ.ನಝೀಬ್ ರವರ ನೇತೃತ್ವದ ತಂಡ ಯಶಸ್ವಿಯಾಗಿ ನಿರ್ವಹಿಸಿದೆ. ಕೊಪ್ಪದ 17 ವರ್ಷದ ಬಾಲಕನಿಗೆ ಮೆದುಳು, ಕಣ್ಣು, ಬಾಯಿ, ದವಡೆಯ ಸಂಪರ್ಕ ಭಾಗದಲ್ಲಿ ಕಾಣಿಸಿಕೊಂಡ ಕ್ಯಾನ್ಸರ್ ಗೆಡ್ಡೆ ದಿನಕಳೆದಂತೆ ಉಲ್ಬಣಿಸುತ್ತಿತ್ತು. ಇದರಿಂದ ಆತನಿಗೆ ಉಸಿರಾಟ, ಆಹಾರ ಸೇವನೆ ಕಷ್ಟಕರವಾಗಿತ್ತು. ಆ ಬಾಲಕನನ್ನು ಹಲವು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಾಲಾಯಿತಾದರೂ ರೋಗ ವಾಸಿಯಾಗದ ಹಿನ್ನೆಲೆಯಲ್ಲಿ ಕಣಚೂರು ಆಸ್ಪತ್ರೆಯ ವೈದ್ಯರ ತಂಡ ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದೆ ಎಂದವರು ವಿವರಿಸಿದರು.
ಆರ್ಥಿಕವಾಗಿ ಹಿಂದುಳಿದಿರುವ ಈ ಬಾಲಕನ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಆಯುಷ್ಮಾನ್ ಭಾರತ ಯೋಜನೆಯಡಿ ಭರಿಸಲು ಸಾಧ್ಯವಾಗದ ಈ ಚಿಕಿತ್ಸೆಯ ದುಬಾರಿ ವೆಚ್ಚವನ್ನು ಆಸ್ಪತ್ರೆಯ ಆಡಳಿತವೇ ಭರಿಸಿದೆ. 1,000 ಹಾಸಿಗೆಗಳುಳ್ಳ ಕಣಚೂರು ಆಸ್ಪತ್ರೆಯಲ್ಲಿ ಈ ರೀತಿಯ ಕ್ಲಿಷ್ಟಕರ ಕ್ಯಾನ್ಸರ್ ಚಿಕಿತ್ಸೆಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ತಜ್ಞ ವೈದ್ಯರ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್ ತಿಳಿಸಿದರು.
ಕ್ಲಿಷ್ಟಕರ ಚಿಕಿತ್ಸೆ: ಬಾಲಕನಿಗೆ ಕೋವಿಡ್ ಸಂದರ್ಭದಲ್ಲಿ ರಾಬ್ಡೋಮಿಯಾ ಸಾರ್ಕೋಮಾ ಎಂದು ಕರೆಯಲ್ಪಡುವ ಈ ಕ್ಯಾನ್ಸರ್ ರೋಗ ಮುಖದ ದವಡೆಯಲ್ಲಿ ಕಾಣಿಸಿ ಕೊಂಡಿತ್ತು. ಸಾಮಾನ್ಯವಾಗಿ ದಶಲಕ್ಷ ಜನರಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುವ ಈ ರೋಗ ಭಾರತದಲ್ಲಿ ಶೇ.1ಕ್ಕಿಂತಲೂ ಕಡಿಮೆ ಜನರಲ್ಲಿ ಕಂಡುಬಂದಿದೆ. ಈ ಕಾಯಿಲೆ ಬಾಲಕನಲ್ಲಿ ಉಲ್ಬಣಿಸಿದ್ದು, ಗೆಡ್ಡೆ ಬೆಳೆದಿದ್ದರಿಂದ ಆತನ ಮುಖ ವಿಕಾರವಾಗಿ ಊದಿಕೊಂಡಿತ್ತು. ಕಿಮೋಥೆರಪಿ, ರೇಡಿಯೋ ಥೆರಪಿ ಚಿಕಿತ್ಸೆ ವಿಫಲ ವಾಗಿದ್ದರಿಂದ ಅಂತಿಮವಾಗಿ ಆತನಿಗೆ ಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದರು. ಕಣ್ಣು ಮೆದುಳು, ಬಾಯಿ ಸಂಪರ್ಕದ ಭಾಗದಲ್ಲಿ ಆವರಿಸಿದ್ಧ ಈ ಗಡ್ಡೆ ದೊಡ್ಡ ಗಾತ್ರದಲ್ಲಿದ್ದ ಕಾರಣ ಅದನ್ನು ಬೇರ್ಪಡಿಸುವುದು ಸವಾಲಾಗಿತ್ತು, ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಇದೀಗ ರೋಗಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ಡಾ.ರವಿವರ್ಮ ಮತ್ತು ಡಾ.ಗುರುಪ್ರಸಾದ್ ಹೇಳಿದರು.
ಸೆ.3ರವರೆಗೆ ಉಚಿತ ಒಳರೋಗಿ ಚಿಕಿತ್ಸೆ:
ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸೆಪ್ಟೆಂಬರ್ 3ರವರೆಗೆ ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗುವವರಿಗೆ 1 ತಿಂಗಳ ಉಚಿತ ಚಿಕಿತ್ಸೆಯನ್ನು ಆಸ್ಪತ್ರೆಯ ವತಿ ಯಿಂದ ನೀಡಲಾಗುತ್ತಿದೆ. ಈ ಯೋಜನೆ ಆ.3ರಿಂದ ಆರಂಭಗೊಂಡಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ.ಸಂಭ್ರಮ್, ಡಾ.ಗುರುಪ್ರಸಾದ್, ಡಾ.ರೋಹನ್ ಮೊನೀಸ್, ಡಾ.ನಝೀಜ್, ಡಾ.ವಿನ್ಸೆಂಟ್ ಮಥಾಯಸ್, ಡಾ.ಪರೀಶ್, ಡಾ.ಮುನೀಶ್ ಶೆಟ್ಟಿ,ಡಾ.ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.