ಸವಣೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0

ಕೆರೆಯ ಸುತ್ತಲಿನ ಜಾಗ ಒತ್ತುವರಿ ತೆರವು ಮಾಡದಿದ್ದರೆ ಇತರ ಸರಕಾರಿ ಜಾಗಕ್ಕೆ ಬೇಲಿ ಹಾಕ್ತೇವೆ-ಎಂ.ಎ.ರಫೀಕ್

ಅಂಕತ್ತಡ್ಕದಲ್ಲಿ ವೀರ ಸಾವರ್ಕರ್ ವೃತ್ತ-ಭರತ್ ರೈ

ಸವಣೂರು ; ಸವಣೂರು ಗ್ರಾಮದ ಕಂಚಿಗಾರ ಕೆರೆಯ ಸುತ್ತಲಿನ ಸರಕಾರಿ ಜಾಗವನ್ನು ಒತ್ತುವರಿ ತೆರವು ಮಾಡದಿದ್ದರೆ ಇತರ ಸರಕಾರಿ ಜಾಗಕ್ಕೆ ಬೇಲಿ ಹಾಕುತ್ತೇವೆ ಎಂದು ಸದಸ್ಯ ಎಂ.ಎ.ರಫೀಕ್ ಹೇಳಿದರು. ಅವರು ಸವಣೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣ ಕುಮಾರಧಾರಾದಲ್ಲಿ ನಡೆಯಿತು.

ಕೆರೆಯ ಸುತ್ತಲಿನ ಜಾಗ ಒತ್ತುವರಿ ಮಾಡಿ ವರ್ಷ ಕಳೆದರೂ ಒತ್ತುವರಿ ತೆರವು ಮಾಡಲು ಕಂದಾಯ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಲೋಕಾಯುಕ್ತ ಅಕಾರಿಗಳು ಸ್ಥಳದಲ್ಲಿ ನಾಮ ಫಲಕ ಹಾಕಲು ಸೂಚನೆ ನೀಡಿದರೂ ಹಾಗೂ ಸ್ಥಳದಲ್ಲಿ ಯಾವುದೇ ಕೆಲಸ ಮಾಡಬಾರದು ಎಂದು ತಿಳಿಸಿದರೂ ಒತ್ತುವರಿದಾರರೂ ಕೆಲಸ ಮಾಡುತ್ತಿದ್ದಾರೆ ಎಂದರು. ಕೂಡಲೇ ತೆರವು ಮಾಡಲು ಕ್ರಮ ಕೈಗೊಳ್ಳಬೇಕು,ಇಲ್ಲದಿದ್ದಲ್ಲಿ ನಾವೂ ಸರಕಾರಿ ಜಾಗಕ್ಕೆ ಬೇಲಿ ಹಾಕುತ್ತೇವೆ ಎಂದರು.

ಈ ಕುರಿತಂತೆ ಜಿಲ್ಲಾಕಾರಿಗಳ ಬಳಿಗೆ ಹೋಗಲು ದಿನ ನಿಗದಿಪಡಿಸುವಂತೆ ರಫೀಕ್ ಹೇಳಿದರು. ಸದಸ್ಯ ಅಬ್ದುಲ್ ರಝಾಕ್ ಮಾತನಾಡಿ,ಪ್ರಭಾವಿಗಳು ಅತಿಕ್ರಮಣ ಮಾಡಿದರೆ ಯಾವುದೇ ಕ್ರಮ ಇಲ್ಲ.ಜನ ಸಾಮಾನ್ಯ ಅತಿಕ್ರಮಿಸಿದರೆ ಮಾತ್ರ ಕ್ರಮ,ನಾವೂ ಗೋಮಾಳಕ್ಕೆ ಬೇಲಿ ಹಾಕುತ್ತೇವೆ ಎಂದರು.

ಅಂಕತ್ತಡ್ಕದಲ್ಲಿ ಸಾವರ್ಕರ್ ವೃತ್ತ,ಪ್ರವೀಣ್ ನೆಟ್ಟಾರು ಸ್ಮಾರಕ

ಸದಸ್ಯ ಭರತ್ ರೈ ಪಾಲ್ತಾಡಿ ಮಾತನಾಡಿ, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಯೊಬ್ಬ ಪಾಲ್ತಾಡಿಯ ಅಂಕತ್ತಡ್ಕ ನಿವಾಸಿ ಇದ್ದು, ಇದರಿಂದ ಶಾಂತಿ ಸೌಹಾರ್ಧತೆಗೆ ಪೆಟ್ಟು ಬಿದ್ದಿದೆ.ಪರಸ್ಪರ ಅಪನಂಬಿಕೆಗೆ ಕಾರಣವಾಗಿದೆ. ಈ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಈ ಕುರಿತಂತೆ ರಾಷ್ಟ್ರಪತಿಗಳಿಗೆ, ರಾಜ್ಯಪಾಲರಿಗೆ, ಮುಖ್ಯಮಂತ್ರಿಯವರಿಗೆ ಮನವಿ ಮಾಡಬೇಕು ಎಂದರು.

ಪಾಲ್ತಾಡಿ ಗ್ರಾಮದ ಅಂಕತ್ತಡ್ಕದಲ್ಲಿ ಸಾವರ್ಕರ್ ವೃತ್ತ ನಿರ್ಮಾಣ ಮಾಡಬೇಕು.ಈ ಕುರಿತಂತೆ ನಿರ್ಣಯ ಕೈಗೊಳ್ಳಬೇಕು.ಅಂಕತ್ತಡ್ಕದಲ್ಲಿ ಪ್ರವೀಣ್ ನೆಟ್ಟಾರು ಸ್ಮಾರಕ ನಿರ್ಮಾಣ ಮಾಡುವಂತೆ ಭರತ್ ರೈ ಹೇಳಿದರು.

ಸದಸ್ಯ ಬಾಬು ಎನ್. ಮಾತನಾಡಿ, ಸವಣೂರು ಗ್ರಾ.ಪಂ.ಗೆ ಖಾಯಂ ಪಿಡಿಓ ಹಾಗೂ ಕಾರ್ಯದರ್ಶಿ ಬೇಕು,ಸವಣೂರು ಮಾಂತೂರಿನಲ್ಲಿರುವ ಅಂಬೇಡ್ಕರ್ ಭವನದ ಜಾಗದ ಗಡಿಗುರುತು ಮಾಡಬೇಕು. ಸವಣೂರು ಪೇಟೆಯಲ್ಲಿರುವ ಅಂಬೇಡ್ಕರ್ ಭವನದ ಹೆಸರು ಅಳಿಸಿ ಹೋಗಿದೆ.ಅಲ್ಲಿ ಕಾರ್ಯಕ್ರಮ ನಡೆಯುವಾಗ ಯುವ ಸಭಾಭವನ ಎಂದು ಹಾಕುತ್ತಾರೆ.ಇದು ಸರಿಯಲ್ಲ ಎಂದರು. 

ಸದಸ್ಯ ಗಿರಿಶಂಕರ್ ಸುಲಾಯ ಪ್ರತಿಕ್ರಿಯಿಸಿ, ಯುವಕ ಮಂಡಲದಲ್ಲಿದ್ದ ಅಂಬೇಡ್ಕರ್ ಭವನ ಎಂಬ ಫಲಕ ಬಿದ್ದು ಹೋಗಿರಬಹುದು.ಆದರೆ ವೇದಿಕೆಗೆ ಯುವ ಸಭಾಭವನ ವೇದಿಕೆ ಎಂದು ಹೆಸರು ಇಡಲಾಗಿದೆ.ಈ ಕುರಿತಂತೆ ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ನಡೆದಿದೆ.ಮತ್ತೆ ಮತ್ತೆ ಕೆದಕುವುದು ಬೇಡ ಎಂದರು.

ಅಜಿಲೋಡಿ ರಸ್ತೆ ಬದಿಯಲ್ಲಿ ಅಪಾಯಕಾರಿ ಮರವಿದ್ದು ಅದನ್ನು ತೆರವು ಮಾಡಬೇಕು,ಪುಣ್ಚಪ್ಪಾಡಿ ಅಂಗನವಾಡಿ ಕೇಂದ್ರದ ಬಳಿ ಇರುವ ಮರವನ್ನು ಏಲಂ ಮಾಡುವ ಕುರಿತಂತೆ ಅರಣ್ಯ ಇಲಾಖೆಗೆ ಬರೆಯಬೇಕು ಎಂದು ಗಿರಿಶಂಕರ ಸುಲಾಯ ಹೇಳಿದರು.

ಪಾಲ್ತಾಡಿ ಗ್ರಾಮದ ಮಾಡತ್ತಾರು ಬೊಳಿಯಾಲ ನಳೀಲು-ಸರಸ್ವತಿಮೂಲೆ-ನೆಟ್ಟಾರು ಸಂಪರ್ಕ ರಸ್ತೆಯ ಅಭಿವೃದ್ದಿ ಕುರಿತಂತೆ ಸಮಾಜ ಕಲ್ಯಾಣ ಇಲಾಖೆಗೆ ಬರೆದುಕೊಳ್ಳುವಂತೆ ಸದಸ್ಯ ತಾರಾನಾಥ ಬೊಳಿಯಾಲ ಹೇಳಿದರು.

ಈ ರಸ್ತೆಯಲ್ಲಿ ವಿಕಲ ಚೇತನರು,ಪರಿಶಿಷ್ಟ ವರ್ಗಗಳ ಕುಟುಂಬದ ಮನೆಗಳಿಗೆ ಸೇರಿದಂತೆ ಹಲವು ಕುಟುಂಬಗಳಿರುವ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ.ಅನಾರೋಗ್ಯ ಪೀಡಿತರನ್ನು ಈ ರಸ್ತೆಯಲ್ಲಿ ಹೊತ್ತುಕೊಂಡು ಹೋಗಬೇಕಾದ ಸ್ಥಿತಿ ಇದೆ ಎಂದು ತಾರಾನಾಥ್ ಹೇಳಿದರು.

ಸದಸ್ಯ ತೀರ್ಥರಾಮ ಕೆಡೆಂಜಿ ಮಾತನಾಡಿ,ಸವಣೂರಿನ ಜಂಕ್ಷನ್ ನಲ್ಲಿರುವ ರಾಣಿ ಅಬ್ಬಕ್ಕ ವೃತ್ತಕ್ಕೆ ಕನ್ನಡ ಧ್ವಜ ಹಾಕಬೇಕು.ಸವಣೂರು ಗ್ರಾಮದ ಆರೇಲ್ತಡಿ ಶಾಲಾ ಜಾಗದಲ್ಲಿದ್ದ ಅಕೇಶಿಯಾ ಮರಗಳನ್ನು ಅರಣ್ಯ ಇಲಾಖೆಯ ವತಿಯಿಂದ ಕಟಾವು ಮಾಡಲಾಗಿದ್ದು,ಒಪ್ಪಂದದಂತೆ ಮರದ ಬೆಲೆಯ ಶೇ.೫೦ನ್ನು ಶಾಲೆಗೆ ಅರಣ್ಯ ಇಲಾಖೆಯವರು ನೀಡಬೇಕಾಗಿತ್ತು.ಆದರೇ ಈವರೆಗೂ ಯಾವುದೇ ಮೊತ್ತವನ್ನು ಅರಣ್ಯ ಇಲಾಖೆ ನೀಡಿಲ್ಲ.ಈ ಕುರಿತಂತೆ ಪುತ್ತೂರು ಹಾಗೂ ಸುಳ್ಯ ವಲಯ ಅರಣ್ಯಾಕಾರಿ,ಮಂಗಳೂರು ,ಬೆಂಗಳೂರಿನ ಅರಣ್ಯ ಇಲಾಖಾ ಕಛೇರಿಗೆ ಬರೆದುಕೊಳ್ಳುವಂತೆ ನಿರ್ಣಯಿಸಲಾಯಿತು.

ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ ,ಸದಸ್ಯರಾದ ಚೆನ್ನು,ಚಂದ್ರಾವತಿ ಸುಣ್ಣಾಜೆ,ಸುಂದರಿ,ಹರಿಕಲಾ ರೈ ಕುಂಜಾಡಿ,ಯಶೋಧಾ,ಜಯಶ್ರೀ,ಇಂದಿರಾ ಬೇರಿಕೆ,ಗಿರಿಶಂಕರ ಸುಲಾಯ,ಅಬ್ದುಲ್ ರಝಾಕ್,ತಾರಾನಾಥ ಬೊಳಿಯಾಲ,ತೀರ್ಥರಾಮ ಕೆಡೆಂಜಿ,ಭರತ್ ರೈ ,ಬಾಬು ಎನ್,ರಫೀಕ್ ಎಂ.ಎ ಕಲಾಪದಲ್ಲಿ ಪಾಲ್ಗೊಂಡರು.

ಗ್ರಾ.ಪಂ.ಅಭಿವೃದ್ಧಿ ಅಕಾರಿ ಎ.ಮನ್ಮಥ ಸ್ವಾಗತಿಸಿ,ಸಿಬಂದಿ ದಯಾನಂದ ಮಾಲೆತ್ತಾರು ವಂದಿಸಿದರು.ಸಿಬಂದಿಗಳಾದ ಪ್ರಮೋದ್ ಕುಮಾರ್ ರೈ,ಜಯಶ್ರೀ,ಶಾರದಾ,ಯತೀಶ್ ಕುಮಾರ್ ಸಹಕರಿಸಿದರು.

LEAVE A REPLY

Please enter your comment!
Please enter your name here