ಕೊಣಾಲು: ಪುತ್ತೂರು ತಾ| ಮಟ್ಟದ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರ ಖೋ ಖೋ ಪಂದ್ಯಾಟ

0

ದೇಶಕ್ಕೆ ಹೆಸರು ತರುವ ಕ್ರೀಡಾಪಟುಗಳಾಗಿ ಬೆಳೆಯಬೇಕು: ಎಸ್.ಅಂಗಾರ

ನೆಲ್ಯಾಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೊಣಾಲು ಇದರ ಸಹಯೋಗದೊಂದಿಗೆ 2022ನೇ ಸಾಲಿನ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರ ಖೋ ಖೋ ಪಂದ್ಯಾಟ ಆ.26ರಂದು ಕೊಣಾಲು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಬಂದರು ಮತ್ತು ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಅವರು ಪಂದ್ಯಾಟ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿನ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಆರ್ಹ ಕ್ರೀಡಾಪಟುಗಳ ಆಯ್ಕೆಯಿಂದ ಅವರು ಮುಂದೆ ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಒಳ್ಳೆಯ ಹೆಸರು ತರುವ ಕ್ರೀಡಾಪಟುವಾಗಿ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದರು. ಕೊಣಾಲು ಶಾಲೆಗೆ ಕೊಠಡಿ ನಿರ್ಮಾಣಕ್ಕೆ ಎಸ್‌ಡಿಎಂಸಿಯವರು ನೀಡಿದ ಮನವಿ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಎಸ್.ಅಂಗಾರ ಅವರು, ಪ್ರಾಕೃತಿಕ ವಿಕೋಪ, ಕೋವಿಡ್‌ನಿಂದಾಗಿ ಆರ್ಥಿಕ ಸಮಸ್ಯೆಯೂ ಎದುರಾಗಿದ್ದು ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಕೊರತೆಯೂ ಎದುರಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಸರಕಾರದಿಂದ ಅನುದಾನ ಬಿಡುಗಡೆಯಾಗಲಿದ್ದು, ಕೊಣಾಲು ಶಾಲೆಗೆ ಕೊಠಡಿ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡರವರು ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ. ಇದರ ಸದುಪಯೋಗ ಪಡೆದುಕೊಂಡು ಗ್ರಾಮಕ್ಕೆ, ಶಾಲೆಗೆ, ಪೋಷಕರಿಗೆ ಹೆಮ್ಮೆ ತರುವ ಕೆಲಸ ಮಾಡಬೇಕೆಂದು ಹೇಳಿದ ಅವರು, ಕ್ರೀಡೆಗಳಿಗೆ ಸರಕಾರ ಹೆಚ್ಚಿನ ಅನುದಾನ ಒದಗಿಸಿಕೊಡಬೇಕೆಂದು ಹೇಳಿದರು. ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್‌ರವರು ಮಾತನಾಡಿ, ಮಕ್ಕಳು ಲವಲವಿಕೆಯಿಂದ ಕ್ರೀಡಾಕೂಟದಲ್ಲಿ ಭಾಗವಹಿಸಬೇಕೆಂದು ಹೇಳಿದರು. ಕೊಣಾಲು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೆ.ಇ.ಮಹಮ್ಮದ್ ರಫೀಕ್‌ರವರು ಮಾತನಾಡಿ, ಕೊಣಾಲು ಶಾಲೆಗೆ 62 ವರ್ಷಗಳ ಇತಿಹಾಸವಿದೆ. ಇಲ್ಲಿ ಒಂದು ವರ್ಷದಲ್ಲಿ 610 ಮಕ್ಕಳು ಕಲಿಯುತ್ತಿದ್ದ ಕಾಲವಿತ್ತು. ಈಗ 165 ಮಕ್ಕಳಿದ್ದಾರೆ. ಶಾಲಾ ಕೊಠಡಿಯ ಅಗತ್ಯವಿದ್ದು ನಮ್ಮ ಮನವಿಗೆ ಸಚಿವರು ಸ್ಪಂದಿಸಿ ಕೊಠಡಿ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡಬೇಕೆಂದು ಹೇಳಿದರು. ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ದೈಹಿಕ ಶಿಕ್ಷಣ ಪರವೀಕ್ಷಣಾಧಿಕಾರಿ ಸುಂದರ ಗೌಡರವರು, ಪುತ್ತೂರು ತಾಲೂಕಿನ 5 ವಲಯಗಳಲ್ಲಿ ನಡೆದ ಪಂದ್ಯಾಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು ತಾಲೂಕು ಮಟ್ಟದಲ್ಲಿ ಭಾಗವಹಿಸುತ್ತಿವೆ. ಇಲ್ಲಿ 5 ವಲಯಗಳ ಬಾಲಕರ 10 ಹಾಗೂ ಬಾಲಕಿಯರ 10 ತಂಡ ಭಾಗವಹಿಸಲಿದೆ. ಇಲ್ಲಿ ಗೆದ್ದವರು ಸೆ.9ರಂದು ಐವರ್ನಾಡಿನಲ್ಲಿ ನಡೆಯುವ ಜಿಲ್ಲಾಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾಮಟ್ಟದಲ್ಲಿ ಪುತ್ತೂರು ತಾಲೂಕಿನ ತಂಡ ಜಯಗಳಿಸಬೇಕೆಂದು ಹೇಳಿದರು. ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ, ಬಜತ್ತೂರು ಕ್ಲಸ್ಟರ್‌ನ ಸಿಆರ್‌ಪಿ ಮಂಜುನಾಥ ಕೆ.ವಿ., ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿಮಲ್‌ಕುಮಾರ್ ನೆಲ್ಯಾಡಿ, ಕಡಬ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ, ಕೊಣಾಲು ಸರಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ಚಂದ್ರ, ಕೊಣಾಲು ಸರಕಾರಿ ಉ.ಹಿ.ಪ್ರಾ.ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಕೆ.ಇಸ್ಮಾಯಿಲ್ ಕೋಲ್ಪೆ, ಎಸ್‌ಡಿಎಂಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಕೆನರಾ ಬ್ಯಾಂಕ್‌ನ ನೆಲ್ಯಾಡಿ ಶಾಖಾ ಮೇನೇಜರ್ ಸುಮಿತ್‌ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಗಿರಿಜಾ ಪಿ.ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡ ವಂದಿಸಿದರು. ಶಿಕ್ಷಕಿ ರತಿಲತಾ ಕಾರ್ಯಕ್ರಮ ನಿರೂಪಿಸಿದರು.

ಬಾಲಕ, ಬಾಲಕಿಯರ ವಿಭಾಗದಲ್ಲಿ ಹಳೆನೇರೆಂಕಿ ಶಾಲೆ ಪ್ರಥಮ:

ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಹಳೆನೇರೆಂಕಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ತಂಡ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದೆ. ಬಾಲಕರ ವಿಭಾಗದಲ್ಲಿ ಕೊಣಾಲು ಸರಕಾರಿ ಉನ್ನತ ಹಿ.ಪ್ರಾ.ಶಾಲೆ ದ್ವಿತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ಕಾಣಿಯೂರು ಸರಕಾರಿ ಹಿ.ಪ್ರಾ.ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ತಲಾ ೧೦ ತಂಡಗಳು ಭಾಗವಹಿಸಿದ್ದವು.

LEAVE A REPLY

Please enter your comment!
Please enter your name here