ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆ: ಮೂವರಿಗೆ ಸನ್ಮಾನ

0

ಪುತ್ತೂರು: ಪುರುಷರಕಟ್ಟೆ ಶಿವಕೃಪ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಮೂರ್ತೆದಾರರ ಸೇವಾ ಸಹಕಾರಿ ಸಂಘ ನರಿಮೊಗರು ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.28 ರಂದು ಪೂರ್ವಾಹ್ನ ನರಿಮೊಗರು ಸೇವಾ ಸಹಕಾರಿ ಬ್ಯಾಂಕಿನ ರೈತ ಭವನ ಸಭಾಂಗಣದಲ್ಲಿ ಅಧ್ಯಕ್ಷ ವಿಜಯಕುಮಾರ್ ಸೊರಕೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಅಧ್ಯಕ್ಷತೆ ವಹಿಸಿದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಜಯಕುಮಾರ್ ಸೊರಕೆಯ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆದಂತಹ ಹೋರಾಟದ ಫಲವಾಗಿ ಇಂದು ಮೂರ್ತೆದಾರರ ಸೇವಾ ಸಹಕಾರಿ ಸಂಘ ಉಳಿದು ನಿಂತಿದೆ. ಪುತ್ತೂರು ತಾಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಐದು ಸೊಸೈಟಿಗಳು ಗುಣಮಟ್ಟದ ಸೇವೆಯನ್ನು ಸರಿಯಾದ ರೀತಿಯಲ್ಲಿ ಒದಗಿಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕಿಗಿಂತ ನಮ್ಮಲ್ಲಿ ಠೇವಣಿಯ ಮೇಲೆ ಬಡ್ಡಿದರ ಜಾಸ್ತಿ ನೀಡೋದ್ರಿಂದ ಪ್ರತೀ ಬಿಲ್ಲವರು ನಮ್ಮ ಬ್ಯಾಂಕಿನಲ್ಲಿ ಸದಸ್ಯರಾಗುವ ಮೂಲಕ ಬ್ಯಾಂಕಿನ ಪ್ರಗತಿಗೆ ಸಾಕ್ಷಿದಾರರಾಗಬೇಕು. ಮೂರ್ತೆದಾರಿಕೆ ಕಡಿಮೆಯಾದರೂ ಮೂರ್ತೆದಾರಿಕೆ ವೃತ್ತಿ ಮಾಡುತ್ತಿದ್ದ ಕುಟುಂಬಕ್ಕೆ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ ಎಂದು ಹೇಳಿ ಸರ್ವರ ಸಹಕಾರ ಕೋರಿದರು.
ಮುಖ್ಯ ಅತಿಥಿ, ದ.ಕ ಜಿಲ್ಲಾ ಮೂರ್ತೆದಾರರ ಮಹಾಮಂಡಲ ಬಿ.ಸಿ ರೋಡ್ ಇದರ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಮಾತನಾಡಿ, ಸಾಲದಲ್ಲಿದ್ದ ಈ ಮೂರ್ತೆದಾರರ ಸೇವಾ ಸಹಕಾರಿ ಸಂಘವು ಇಂದು ಲಾಭದತ್ತ ಮುನ್ನೆಡೆಯಲು ಅಧ್ಯಕ್ಷರಾದ ವಿಜಯಕುಮಾರ್ ಸೊರಕೆಯವರ ನೇತೃತ್ವದ ಆಡಳಿತ ಮಂಡಳಿ ಕಾರಣವಾಗಿದೆ. ಸಂ-ಸಂಸ್ಥೆಗಳು ಅಭಿವೃದ್ಧಿಗೊಳ್ಳಬೇಕಾದರೆ ಅದರಲ್ಲಿನ ಸದಸ್ಯರ ಮುಕ್ತವಾದ ಚರ್ಚೆ ಪ್ರಮುಖ ಕಾರಣವಾಗುತ್ತದೆ. ಬಿಲ್ಲವ ಸಮಾಜ ಹಿಂದೆ ಮೂರ್ತೆದಾರಿಕೆ ಕಸುಬು ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಇಂದು ಐಟಿ, ಬಿಟಿ ಅಂತ ಉನ್ನತ ಉದ್ಯೋಗಕ್ಕೆ ತಮ್ಮ ಮಕ್ಕಳು ಪರಿವರ್ತನೆಗೊಂಡು ಮೂರ್ತೆದಾರಿಕೆ ಕಸುಬು ಕಡಿಮೆಯಾಗತೊಡಗಿದೆ. ನಾರಾಯಣಗುರುಗಳು ಹೇಳಿದಂತೆ ಪ್ರತಿಯೋರ್ವರೂ ವಿದ್ಯಾಸಂಪನ್ನರಾಗಿ, ಸಂಘಟನೆಯನ್ನು ಬಲಯುತ ಮಾಡಿ ಎಂಬತೆ ಮುಂದಡಿಯಿಡಬೇಕಾಗಿದೆ ಎಂದರು.
ಮೂರ್ತೆದಾರರ ಸೇವಾ ಸಹಕಾರಿ ಸಂಘ ನರಿಮೊಗರು ಇದರ ನಿರ್ದೇಶಕ ಹಾಗೂ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಮೂರ್ತೆದಾರರ ಸೇವಾ ಸಹಕಾರಿ ಸಂಘ ನರಿಮೊಗರು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯಾಗುತ್ತಲಿದೆ. ಅಂದು ಬಿಲ್ಲವ ಸಂಘದ ಅಧ್ಯಕ್ಷರಾಗಿದ್ದ ವಿಜಯಕುಮಾರ್ ಸೊರಕೆಯವರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂಘವನ್ನು ಅಭಿವೃದ್ಧಿಪಥದಲ್ಲಿ ಮುನ್ನೆಡಿಸಿದ್ದಾರೆ. ಕೇವಲ ಬಿಲ್ಲವ ಸಮಾಜ ಮಾತ್ರವಲ್ಲ ಎಲ್ಲಾ ಸಮಾಜ ಬಾಂಧವರು ಇಲ್ಲಿ ಹಣವನ್ನ ಠೇವಣಿ ಇಟ್ಟಿದ್ದಾರೆ. ಸೌಲಭ್ಯವನ್ನೂ ಪಡೆದಿದ್ದಾರೆ. ಆದ್ದರಿಂದ ಬಿಲ್ಲವ ಬಾಂಧವರು ತಮ್ಮ ಠೇವಣಿಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ನಮ್ಮ ಸೊಸೈಟಿಗಳಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.

ರೂ.4.76 ಲಕ್ಷ ನಿವ್ವಳ ಲಾಭ, 11% ಡಿವಿಡೆಂಡ್:
ವರದಿ ಸಾಲಿನಲ್ಲಿ `ಎ’ ತರಗತಿಯ 31 ಮಂದಿ ಸದಸ್ಯರು ಸೇರ್ಪಡೆಗೊಂಡು ವರ್ಷಾಂತ್ಯಕ್ಕೆ ಒಟ್ಟು 432 ಮಂದಿ ಸದಸ್ಯರಿದ್ದು ರೂ,6,89,304 ಪಾವತಿಯಾದ ಪಾಲುಧನ ಮತ್ತು ಸರಕಾರದ `ಬಿ’ ತರಗತಿಯ ರೂ,20000 ಪಾಲುಧನ ಇರುತ್ತದೆ. ಸದಸ್ಯರಿಂದ ಉಳಿತಾಯ ಖಾತೆ, ನಿರಖು ಠೇವಣಿ, ದೈನಿಕ ಠೇವಣಿ ಮತ್ತು ನಗದು ಪತ್ರಗಳ ಮೂಲಕ ವರದಿ ವರ್ಷದಲ್ಲಿ ರೂ,7,93,38,622ನ್ನು ಸಂಗ್ರಹಿಸಲಾಗಿದೆ. ವರದಿ ಸಾಲಿನಲ್ಲಿ ರೂ,4,76,399 ನಿವ್ವಳ ಲಾಭ ಗಳಿಸಿದ್ದು, ಶೇ.11 ಡಿವಿಡೆಂಡ್‌ನ್ನು ನೀಡಲಾಗುತ್ತದೆ ಎಂದು ಅಧ್ಯಕ್ಷ ವಿಜಯಕುಮಾರ್ ಸೊರಕೆಯವರು ಘೋಷಣೆ ಮಾಡಿದರು.

ಸಂಘದ ಕಾರ್ಯಕ್ಷೇತ್ರ:
ಸಂಘದ ಕಾರ್ಯಕ್ಷೇತ್ರವು ಪುತ್ತೂರು ತಾಲೂಕಿನ ನರಿಮೊಗರು, ಶಾಂತಿಗೋಡು, ಮುಂಡೂರು, ಕೆಮ್ಮಿಂಜೆ, ಸರ್ವೆ ಹಾಗೂ ಕಡಬ ತಾಲೂಕಿನ ಸವಣೂರು, ಪುಂಚಪ್ಪಾಡಿ, ಕುದ್ಮಾರು, ಕಾಮಣ, ಬೆಳಂದೂರು, ಕಾಣಿಯೂರು, ಚಾರ್ವಾಕ ಮತ್ತು ದೋಲ್ಪಾಡಿ ಗ್ರಾಮಗಳನ್ನು ಒಳಗೊಂಡಿದೆ.

ಸನ್ಮಾನ/ಪ್ರೋತ್ಸಾಹಧನ ವಿತರಣೆ:
ಮೂರ್ತೆ ಕಸುಬುದಾರಿಕೆಯಲ್ಲಿ ಸೇವೆ ನೀಡಿ ನಿವೃತ್ತಿ ಹೊಂದಿರುವ ಹಿರಿಯರಾದ ಕೃಷ್ಣಪ್ಪ ಪೂಜಾರಿ ಮರಕ್ಕೂರು(51 ವರ್ಷ ಸೇವೆ), ಜನಾರ್ದನ ಪೂಜಾರಿ ಕುರೆಮಜಲು(41 ವರ್ಷ ಸೇವೆ), ದಾಸಪ್ಪ ಪೂಜಾರಿ ಸೊರಕೆ(50ವರ್ಷ ಸೇವೆ)ವರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು. ಅಲ್ಲದೆ ಸಂಘದ ಕಾರ್ಯವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಕ್ತ ಮೂರ್ತೆದಾರರಾದ ಸಂಘದ ನಿರ್ದೇಶಕ ಪಿ.ಕೃಷ್ಣಪ್ಪ ಪೂಜಾರಿ, ಕಾಣಿಯೂರು ಕೇಂದ್ರದ ಆನಂದ ಪೂಜಾರಿ ಮತ್ತು ಗಂಗಾಧರ ಪೂಜಾರಿ, ಶಾಂತಿಗೋಡು ಕೇಂದ್ರದ ಶೀನಪ್ಪ ಪೂಜಾರಿ, ಪುರುಷರಕಟ್ಟೆ ಕೇಂದ್ರದ ಉದಯ ಪೂಜಾರಿ, ಪುಂಚಪ್ಪಾಡಿ ಕೇಂದ್ರದ ರಾಧಾಕೃಷ್ಣ ಪೂಜಾರಿರವರಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ:
ಈ ಸಂದರ್ಭದಲ್ಲಿ ಎಸೆಸ್ಸೆಲ್ಸಿಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಪಾಲ್ತಾಡಿ ಮಂಜುನಾಥನಗರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸೌಜನ್ಯ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾದಲ್ಲಿ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿ ಲಿಖಿತ್ ಪಿರವರನ್ನು ಗುರುತಿಸಿ ಅಭಿನಂದಿಸಲಾಯಿತು.
ಸಂಘದ ಉಪಾಧ್ಯಕ್ಷ ಕೆ.ಪದ್ಮನಾಭ ಪೂಜಾರಿ ಬೆದ್ರಾಳ, ನಿರ್ದೇಶಕರಾದ ನಾಗರಾಜ ಪೂಜಾರಿ ದೋಳ, ಅಣ್ಣಿ ಪೂಜಾರಿ ಎಚ್ ಹಿಂದಾರು, ಪಿ.ಕೆ ಕೃಷ್ಣಪ್ಪ ಪೂಜಾರಿ ಕೊಡಂಗೆ, ಹೊನ್ನಪ್ಪ ಪೂಜಾರಿ ಕುರೆಮಜಲು, ಪದ್ಮಾವತಿ ಮುಂಡೋಡಿ, ಸುಜಾತ ಮರಕ್ಕೂರು, ಸಂಘದ ಗೌರವ ಸಲಹೆಗಾರ ಸಂತೋಷ್ ಕುಮಾರ್ ಮರಕ್ಕಡರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ ಪದ್ಮಾವತಿ ಮುಂಡೋಡಿ ಹಾಗೂ ವಿಮಲ ಮುಂಡೋಡಿರವರು ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಕಲ್ಲೇರಿ ಜಮಾ ಖರ್ಚಿನ ತಃಖ್ತೆ, ಲಾಭ ನಷ್ಟದ ತಃಖ್ತೆ, ಆಸ್ತಿ ಮತ್ತು ಜವಾಬ್ದಾರಿ ತಃಖ್ತೆಯನ್ನು ಓದಿದರು. ಸವಣೂರು ಶಾಖೆಯ ವ್ಯವಸ್ಥಾಪಕ ಶ್ರೀಶನ್ ಎ. ಅಂದಾಜು ಬಜೆಟ್(ಆಯ-ವ್ಯಯ) ತಃಖ್ತೆಯನ್ನು ಓದಿದರು. ಸಂಘದ ಮಾಜಿ ಉಪಾಧ್ಯಕ್ಷ ವೇದನಾಥ ಸುವರ್ಣ, ಆನಂದ ಪೂಜಾರಿ, ಮಹೇಶ್ಚಂದ್ರ ಸಾಲಿಯಾನ್‌ರವರು ಸಲಹೆ ಸೂಚನೆಯನ್ನು ನೀಡಿದರು. ಸಂಘದ ನಿರ್ದೇಶಕ ಉದಯಕುಮಾರ್ ಕೋಲಾಡಿ ಸ್ವಾಗತಿಸಿ, ಸಂತೋಷ್ ಕುಮಾರ್ ಮರಕ್ಕೂರು ವಂದಿಸಿದರು. ಸಿಬ್ಬಂದಿಗಳಾದ ರಮ್ಯಶ್ರೀ ಕೆ, ರೂಪಿಕಾ, ಚಂದ್ರಶೇಖರ ಕುರೆಮಜಲು, ಕಿರಣ್ ಕೋಡಿಬೈಲು, ಜನಾರ್ದನ ಆಚಾರ್ಯ, ದಾಮೋದರ ಆಚಾರ್ಯರವರು ಸಹಕರಿಸಿದರು.

ಶೀಘ್ರವೇ ಕೆಮ್ಮಿಂಜೆ ಶಾಖೆ, ಸ್ವಂತ ಕಟ್ಟಡ…
ಗ್ರಾಹಕರ ವ್ಯವಹಾರಕ್ಕೆ ಅನುಕೂಲವಾಗುವಂತೆ ಸವಣೂರಿನ ಅಶ್ವಿನಿ ಕಾಂಪ್ಲೆಕ್ಸ್ನಲ್ಲಿ ಈಗಾಗಲೇ ಪೂರ್ಣಪ್ರಮಾಣದ ಶಾಖೆಯು ಲೋಕಾರ್ಪಣೆಗೊಂಡಿರುತ್ತದೆ. ಅಂದಿನಿಂದ 2022 ಸಾಲಿನಲ್ಲಿ ಒಟ್ಟು ರೂ.4,76,20,187 ವ್ಯವಹಾರ ನಡೆಸಿದ್ದು ಗ್ರಾಹಕರಿಗೆ ಎಲ್ಲಾ ರೀತಿಯ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಠಸ್ಸೆ ಪೇಪರ್ ವಿಸ್ತರಣಾ ಕೇಂದ್ರ, ಸಂದೇಶ ರವಾನೆ, ನೆಫ್ಟ್/ಆರ್‌ಟಿಜಿಎಸ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಭದ್ರತೆಗಾಗಿ ಸಿ.ಸಿ ಟಿವಿ, ಸೈರನ್ ಅಳವಡಿಸಲಾಗಿದೆ. ಮುಂದಿನ ಯೋಜನೆಯಂತೆ ಶೀಘ್ರವೇ ಕೆಮ್ಮಿಂಜೆ ವ್ಯಾಪ್ತಿಯಲ್ಲಿ ಶಾಖೆಯನ್ನು ತೆರೆಯುವುದಾಗಿ ಹಾಗೂ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡುವುದಾಗಿ ಆಡಳಿತ ಮಂಡಳಿ ಸಭೆಯಲ್ಲಿ ಸಮಾಲೋಚಿಸಿ ತೀರ್ಮಾನಿಸಲಾಗಿದೆ.
-ವಿಜಯಕುಮಾರ್ ಸೊರಕೆ, ಅಧ್ಯಕ್ಷರು, ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘ

ಸಾಲ ಸೌಲಭ್ಯಗಳು..
ಆಭರಣ ಈಡಿನ ಸಾಲ(3/6 ತಿಂಗಳು, 1 ವರ್ಷದ ಅವಧಿಗೆ)
ಠೇವಣಿ ಸಾಲ, ಪಿಗ್ಮಿ ಆಧಾರಿತ ಸಾಲ, ವಾಹನ ಸಾಲ,
ಇತರ ಉದ್ಧೇಶದ ಸಾಲ, ಮೂರ್ತೆಗಾರಿಕೆ ಸಾಲ
ಜಾಮೀನು ಸಾಲ, ಸ್ವ-ಸಹಾಯ ಸಂಘ ಗುಂಪು ಸಾಲ
ವೇತನಾಧಾರಿತ ಸಾಲ

ಠೇವಣಿ ಸೌಲಭ್ಯಗಳು…
ಉಳಿತಾಯ ಖಾತೆ, ನಿರಖು ಠೇವಣಿ, ದೈನಿಕ ಠೇವಣಿ,
ಶುಭಲಾಭ ನಗದು ಪತ್ರ(7.50 ವರ್ಷದಲ್ಲಿ ದ್ವಿಗುಣ)
ಆವರ್ತನ ಠೇವಣಿ(ಆರ್.ಡಿ)

-ಭಾರತದಾದ್ಯಂತ ಆರ್‌ಟಿಜಿಎಸ್/ನೆಫ್ಟ್ ಸೌಲಭ್ಯ
-ಠೇವಣಿಗಳಿಗೆ ಆಕರ್ಷಕ ಬಡ್ಡಿದರ
-ಹಿರಿಯ ನಾಗರಿಕರಿಗೆ/ಸಂಘ-ಸAಸ್ಥೆಗಳಿಗೆ/ಸೈನಿಕರಿಗೆ/
ನಿವೃತ್ತ ಸೈನಿಕರಿಗೆ ಶೇ.0.50 ಹೆಚ್ಚುವರಿ ಬಡ್ಡಿ

LEAVE A REPLY

Please enter your comment!
Please enter your name here