ಆ.31- ಸೆ.1: ಪೆರಿಯಡ್ಕದಲ್ಲಿ 25ನೇ ವರ್ಷದ ಗಣೇಶೋತ್ಸವ, `ಕಟೀಲ್ದಪ್ಪೆ ಉಳ್ಳಾಲ್ದಿ’ ಪೌರಣಿಕ ನಾಟಕ

0

ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರೀ ಸೇವಾ ಟ್ರಸ್ಟ್ (ರಿ), ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ವತಿಯಿಂದ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವವು ಈ ಬಾರಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಆ.31ರಿಂದ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.

ಶ್ರೀ ದುರ್ಗಾ ಪರಮೇಶ್ವರೀ ಭಜನಾ ಮಂದಿರದಲ್ಲಿ ಆ.31ರಂದು ಬೆಳಗ್ಗೆ 9:30ಕ್ಕೆ ಗಣಪತಿ ಪ್ರತಿಷ್ಠೆ ಮತ್ತು ಗಣಪತಿ ಹವನ, ಮಧ್ಯಾಹ್ನ 12:30ಕ್ಕೆ ಶ್ರೀ ದೇವರಿಗೆ ಕಲ್ಪೋಕ್ತ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 3 ರಿಂದ 5.00ರವರೆಗೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಸದಸ್ಯರಿಂದ ಭಜನಾ ಸೇವೆ, ಸಂಜೆ 6:30ರಿಂದ ಶ್ರೀ ದೇವರಿಗೆ ಕಲ್ಪೋಕ್ತ ಪೂಜೆ, ರಂಗಪೂಜೆ ನಡೆದು, ರಾತ್ರಿ 7:30ರಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 8ಕ್ಕೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಅಧ್ಯಕ್ಷ ಸುರೇಶ್ ಗೌಂಡತ್ತಿಗೆ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಉಪ್ಪಿನಂಗಡಿ ಸಹಕಾರಿ ವ್ಯವಸಾಹಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಭಾಗವಹಿಸಲಿದ್ದಾರೆ. ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ. ರಾಧಾ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 9ರಿಂದ ಲಯನ್ ಕಿಶೋರ್ ಡಿ. ಶೆಟ್ರ ಕೂಟದ ಕಲಾವಿದರಿಂದ `ಕಟೀಲ್ದಪ್ಪೆ ಉಳ್ಳಾಲ್ದಿ’ ಅದ್ದೂರಿ ತುಳು ಪೌರಣಿಕ ನಾಟಕ ನಡೆಯಲಿದೆ.

ಸೆ.1ರಂದು ಬೆಳಗ್ಗೆ ಗಂಟೆ 8:30ಕ್ಕೆ ಪುಣ್ಯಾಹವಾಚನ, ಮಹಾಸಂಕಲ್ಪ, ಕಲಶ ಸ್ಥಾಪನೆ, ಅಷ್ಟೋತ್ತರ ನಾರಿಕೇಳ (108 ಕಾಯಿ)ಅಷ್ಟದ್ರವ್ಯ ಮಹಾಗಣಪತಿ ಹವನ ನಡೆಯಲಿದೆ. ಮಧ್ಯಾಹ್ನ ಗಂಟೆ 12.00ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 4 ಕ್ಕೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಿಂದ ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದವರೆಗೆ ಶ್ರೀ ದೇವರ ಜಲಸ್ತಂಭನ ಶೋಭಾಯಾತ್ರೆಯು ನಡೆಯಲಿದೆ ಎಂದು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಸುರೇಶ್ ಗೌಂಡತ್ತಿಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here