ಪುತ್ತೂರು : ಕ್ರೀಡಾ ಕ್ಷೇತ್ರದ ಸಾದನೆಗೆ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ದೀಕ್ಷಾರವರಿಗೆ ಕರ್ನಾಟಕ ರಾಜ್ಯ ಸರಕಾರ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಕ್ರೀಡಾದಿನವಾದ ಆ.29ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು.
ಕಡಬ ತಾಲೂಕಿನ ಚಾರ್ವಾಕ ಗ್ರಾಮದ ದೀಕ್ಷಾ 8 ಬಾರಿ ರಾಷ್ಟ್ರೀಯ ಖೋ-ಖೋ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದು ತಲಾ 4 ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿದ್ದಾರೆ. ಅಖಿಲ ಭಾರತ ಅಂತರ ವಿ.ವಿ ಕೂಟಗಳಲ್ಲಿ 4 ಬಾರಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದು ತಲಾ 1 ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದಿದ್ದಾರೆ.
ಕ್ರೀಡಾ ಸಾಧನೆ : ಚಾರ್ವಾಕ ಗ್ರಾಮದ ಕುಕ್ಕುನಡ್ಕ ನಿವಾಸಿ ಕೊರಗಪ್ಪ ಗೌಡ ಎಂಬವರ ಪುತ್ರಿಯಾಗಿರುವ ದೀಕ್ಷಾರವರು, ಬಾಲ್ಯದಲ್ಲಿಯೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದು ಚಾರ್ವಾಕ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪೂರೈಸಿ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿದರು. ಭಾರತೀಯ ಖೋಖೋ ತಂಡದಲ್ಲಿ ಸ್ಥಾನ ಪಡೆದು ಮಧ್ಯ ಪ್ರದೇಶದ ಇಂದೋರ್‌ನ ಮೈದಾನದಲ್ಲಿ ನಡೆದ ಏಷಿಯನ್ ಖೋಖೋ ಚಾಂಪಿಯನ್‌ಶಿಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಉತ್ತಮ ಆಟವನ್ನು ಪ್ರದರ್ಶಿಸಿ ಭಾರತ ಖೋಖೋ ತಂಡಕ್ಕೆ ಜಯವನ್ನು ತಂದುಕೊಟ್ಟಿದ್ದಾರೆ.
ಆಳ್ವಾಸ್‌ನಿಂದ ಕರ್ನಾಟಕ ರಾಜ್ಯ ಖೋಖೋ ತಂಡಕ್ಕೆ ಆಯ್ಕೆಯಾಗಿ, ರಾಜ್ಯ ಖೋಖೋ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ದ್ವಿತಿಯ ಸ್ಥಾನ ಪಡೆದಿದ್ದಾರೆ. ಕರ್ನಾಟಕದಿಂದ ಭಾರತೀಯ ಖೋಖೋ ತಂಡಕ್ಕೆ ದೀಕ್ಷಾ ಆಯ್ಕೆಯಾಗಿ ನವದೆಹಲಿಯಲ್ಲಿ ನಡೆದ ೨೦ ದಿನಗಳ ಖೋ-ಖೋ ತರಬೇತಿ ಶಿಬಿರದಲ್ಲಿ ತರಬೇತಿಯನ್ನು ಪಡೆದು ಭಾರತೀಯ ಖೋಖೋ ತಂಡದಲ್ಲಿ ಪ್ರದರ್ಶನ ನೀಡಿದ್ದಾರೆ.