ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಸುಮಾರು 1200 ವರ್ಷಗಳಷ್ಟು ಹಿಂದಿನ ಪುರಾಣ ಪ್ರಸಿದ್ಧವಾದ ಪವಿತ್ರ ಕ್ಷೇತ್ರ. ಪುತ್ತೂರಿನಿಂದ ಸಾಮಾನ್ಯ 14 ಕಿ.ಮೀ ದೂರದಲ್ಲಿರುವ ಬೆಟ್ಟ, ಗುಡ್ಡ, ಬಯಲು, ತೋಟಗಳ ಮಧ್ಯೆ ಕಂಗೊಳಿಸುವ ಈ ದೇವಾಲಯವು ಬೆಟ್ಟಂಪಾಡಿ ಗ್ರಾಮದಲ್ಲಿದ್ದು ಇರ್ದೆ, ನಿಡ್ಪಳ್ಳಿ, ಪಾಣಾಜೆ ಗ್ರಾಮಗಳಿಂದ ಆವೃತವಾಗಿದೆ. ಇಲ್ಲಿ ತಂತ್ರಿವರ್ಯರ ಯೋಗ್ಯ ಮಾರ್ಗದರ್ಶನದಂತೆ ಅರ್ಚಕರು ಸದಾ ಪೂಜೆ, ಅಭಿಷೇಕ, ಅರ್ಚನೆ ಮೊದಲಾದ ಧಾರ್ಮಿಕ ಕಾರ್ಯಗಳನ್ನು ಶ್ರಧ್ಧೆಯಿಂದ ನಿರ್ವಹಿಸುತ್ತಿದ್ದು ಭಕ್ತರು ರುದ್ರಜಪ, ಭಜನೆ, ಕಲಾಸೇವಾದಿಗಳನ್ನು ಮಾಡುವುದರ ಮೂಲಕ ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ. ಇಲ್ಲಿ ನಡೆಯುವ ಉತ್ಸವಾದಿಗಳ ಸಂದರ್ಭದಲ್ಲಿ ಅನ್ನದಾನಾದಿಗಳೂ ನಿಯಮದಂತೆ ನಡೆಯುತ್ತಿದೆ. ಶಿವನು ನಂಬಿದ ಭಕ್ತರ ಬದುಕು ಭಾಗ್ಯಗಳನ್ನು ಬೆಳಗಿಸುತ್ತಾ ಅಜ್ಞಾನವೆಂಬ ಕತ್ತಲಿನಿಂದ ಸುಜ್ಞಾನವೆಂಬ ಬೆಳಕಿನೆಡೆಗೆ ಕರೆಯುತ್ತಿದ್ದಾನೆ.
ಶ್ರೀ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ, ಶ್ರೀ ದೇವರ ಸಾನಿಧ್ಯವೃಧ್ಧಿಗಾಗಿ ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಊರಪರವೂರ ಭಕ್ರವೃಂದದವರ ಅಪೇಕ್ಷೆಯಂತೆ ಇದೇ ಮೂರನೇ ಶ್ರಾವಣ ಶನಿವಾರ ಸೆ. 03 ರಂದು ಶ್ರೀ ದೇವರಿಗೆ ಮಹಾರುದ್ರಜಪಾಭಿಷೇಕ ಜರುಗಲಿರುವುದು. ಇದರ ಅಂಗವಾಗಿ ದೇವತಾ ಪ್ರಾರ್ಥನೆಯೊಂದಿಗೆ ಮಹಾ ಸಂಕಲ್ಪ, ಸಕಲ ವಿಘ್ನಗಳ ನಿವಾರಣೆಗಾಗಿ ಶ್ರೀ ಮಹಾಗಣಪತಿಹೋಮ, ರುದ್ರ ಪ್ರಿತ್ಯರ್ಥವಾಗಿ ರುದ್ರ ಹವನ, ಅಭಿಷೇಕ ಪ್ರಿಯನಾದ ಲಿಂಗರೂಪಿಯಾದ ಈಶ್ವರನಿಗೆ ಪಂಚಾಮೃತ ಅಭಿಷೇಕ, ಸೀಯಾಳಾಭಿಷೇಕ, ಜಲಾಭಿಷೇಕ, ಬಿಲ್ವಾರ್ಚನೆಗಳೊಂದಿಗೆ ವಿಶಿಷ್ಟವಾಗಿ ಶಿವಾರಾಧನೆಯು ನಡೆಯಲಿದೆ.
ಶ್ರೀ ಕ್ಷೇತ್ರದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಈ ಪುಣ್ಯಪ್ರದವಾದ ‘ಮಹಾರುದ್ರಜಪಾಭಿಷೇಕ’ವೆಂಬ ಅಪರೂಪದ ಸೇವೆಯು ನಡೆಯಲಿದ್ದು ಸಾವಿರಾರು ಊರಪರವೂರ ಭಕ್ತಮಹಾಶಯರು ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಕಲ ಸಂಕಟಗಳನ್ನು ನಿವಾರಿಸುವವನಾದ್ದರಿಂದ ಶಿವನಿಗೆ ‘ರುದ್ರ’ ಎಂಬ ಇನ್ನೊದು ಹೆಸರಿದೆ. ಶಿವನಿಗೆ ಪ್ರಿಯವಾದ ರುದ್ರಾಧ್ಯಾಯವನ್ನು ಪಠಿಸಿ ಜಪಾಭಿಷೇಕ ನಡೆಸಲು 121 ಮಂದಿ ಯತ್ವಿಜರು 11 ಸಲ (ಒಟ್ಟು 1331 ಸಲ ) ಆವೃತ್ತಿ ನಡೆಸುತ್ತಾರೆ. ನಮಕವೆಂದು ಕರೆಸಿ ಕೊಂಡಿರುವ ರುದ್ರಮಂತ್ರದೊಡನೆ ಹೇಳುವ ಚಮಕ ಮಂತ್ರಗಳಲ್ಲಿ ತಾನು ಮಾಡುವ ಯಜ್ಞದಿಂದ, ಹವನದಿಂದ ಅನ್ನಾದಿ ಸಕಲ ಸಂಪತ್ತು ಸಿಧ್ಧಿಸಲಿ ಭಗವಂತನ ಆರಾಧನೆಗಾಗಿಯೇ ಎಲ್ಲವೂ ನನಗೆ ಉಂಟಾಗಲಿ ಎಂಬ ಸುಂದರ ಪ್ರಾರ್ಥನೆಯು ಸಮ್ಮಿಲಿತವಾಗಿರುತ್ತದೆ. ರುದ್ರ ಹವನದಲ್ಲಿ “ವಸೋರ್ಧಾರ” ಎಂಬ ಪೂರ್ಣಾಹುತಿಯನ್ನು ಕೊಡುವಾಗ ಇದೇ ಚಮಕಮಂತ್ರಗಳಿಂದ ಧಾರಾಕಾರವಾಗಿ ಆಜ್ಞಾಹುತಿಯನ್ನು ಕೊಡಲಾಗುತ್ತದೆ.
ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ನಡೆಯಲಿರುವ ಮಹಾರುದ್ರಜಪಾಭಿಷೇಕದ ಮಹತ್ಕಾರದಿಂದ ಎಲ್ಲರ ಚಿತ್ತಶುಧ್ಧಿಯಾಗಿ ದೇಹಮನಸ್ಸುಗಳ ಆರೋಗ್ಯ ಹೆಚ್ಚುವಂತಾಗಲಿ, ಪ್ರಸನ್ನತೆ, ಏಕಾಗ್ರತೆ, ಶಾಂತಿ, ಸಮಾಧಾನ, ವಿವೇಕೋದಯ ವೃದ್ಧಿಯಾಗಲಿ. ಭಕ್ತಿಪುರಃಸರವಾಗಿ ಸೇವಾ ರೂಪದಿಂದ ನಡೆಯಲಿರುವ ಈ ಪುಣ್ಯಕಾರ್ಯದಿಂದ ಪರಮಶಿವನು ಸಂತುಷ್ಟನಾಗಲಿ. ಕ್ಷೇತ್ರದಲ್ಲಿ ಸಾನಿಧ್ಯವನ್ನು ಹೊಂದಿರುವ ಮಹಾಗಣಪತಿ, ದುರ್ಗೆ, ನಾಗದೇವತೆ ಹಾಗೂ ಇತರ ದೇವತಾ ಶಕ್ತಿಗಳು ದೇವಾಲಯದಲ್ಲಿ ನಡೆಯುವ ಅಭಿವೃಧ್ಧಿ ಕಾರ್ಯಗಳು ಶೀಘ್ರವಾಗಿ ಪೂರ್ಣಗೊಳ್ಳುವಂತೆ ಅನುಗ್ರಹಿಸಲಿ. “ಲೋಕಾಃ ಸಮಸ್ತಾಃ ಸುಖಿನೋಭವಂತು” ಎಂಬುದೇ ನಮ್ಮೆಲ್ಲರ ಆಶಯವಾಗಲಿ.
ಲೇಖನ – ಮಂಜುಳಗಿರಿ ವೆಂಕಟರಮಣ ಭಟ್ಟ, ಬೆಟ್ಟಂಪಾಡಿ