ಪುತ್ತೂರು: ಕುತ್ತಿಗೆಯಲ್ಲಿ ಹಾರ, ತಲೆಗೆ ಪೇಟ, ಕೈಯಲ್ಲಿ ಕವಟ ಹಿಡಿದು ನಿಂತು ರಾತ್ರಿಯಿಂದ ಮುಂಜಾನೆವರೆಗೂ ಪೌರಾಣಿಕ ಕಥೆಗಳನ್ನು ವಿಶಿಷ್ಟವಾಗಿ ಹಾಡುತ್ತಾ, ವಿವರಣೆ ನೀಡುವ ‘ಹರಿಕಥೆ’ ಕಲಾಸೇವೆ ಪುತ್ತೂರಿನಲ್ಲಿ ಮತ್ತೊಮ್ಮೆ ಜನಮಾನಸದಲ್ಲಿ ಮರು ಸ್ಥಾಪಿಸುವ ಪ್ರಯತ್ನ ಹರಿಕಥಾ ಪರಿಷದ್ ಮಂಗಳೂರು ಇದರ ಮೂಲಕ ನಡೆಯುತ್ತಿದ್ದು, ಇದೀಗ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘ, ಹರಿಕಥಾ ಪರಿಷತ್ ಮಂಗಳೂರು ಇದರ ಸಹಯೋಗದೊಂದಿಗೆ ಶೇಣಿ ಗೋಪಾಲಕೃಷ್ಣ ಭಟ್ಟರ ಸಂಸ್ಮರಣಾರ್ಥ ಹರಿಕಥಾ ಸಪ್ತಾಹ ಕಾರ್ಯಕ್ರಮ ಸೆ.5ರಿಂದ 11ರ ತನಕ ಪುತ್ತೂರು ಶ್ರೀ ಮಹಾಲಿಂಗೆಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಜರುಗಲಿದೆ.
ಪತ್ರಿಕಾಗೋಷ್ಟಿಯಲ್ಲಿ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿಯವರು ಮಾತನಾಡಿ ಯಕ್ಷಗಾನ ರಂಗದ ಯುವಪುರುಷರೆಂದೇ ಗುರುತಿಸಲ್ಪಟ್ಟ ಕೀರ್ತಿ ಶೇಷ ಶೇಣಿ ಗೋಪಾಲಕೃಷ್ಣ ಭಟ್ಟರಿಂದಲೇ 2000 ನೇ ಇಸವಿಯಲ್ಲಿ ಯಕ್ಷಗಾನ ಮತ್ತು ಹರಿಕಥೆಯ ಕಲಾ ಸೇವೆಗಾಗಿ ಸ್ಥಾಪಿಸಲ್ಪಟ್ಟ ಸಂಸ್ಥೆಯಾಗಿದೆ. ಪ್ರಸ್ತುತ ಕಾಲಗಟ್ಟದಲ್ಲಿ ಕಲಾಭಿಮಾನಿಗಳ ಮನದಲ್ಲಿ ಮಾಯವಾಗುತ್ತಿರುವ ಕಲಾ ಪ್ರಕಾರಗಳ ಪೈಕಿ ಹರಿಕಥೆಯನ್ನು ಮತ್ತೆ ಜನಮಾನಸದಲ್ಲಿ ಮರು ಸ್ಥಾಪಿಸುವ ಪ್ರಯತ್ನವಾಗಿ ಅಲ್ಲಲ್ಲಿ ಹರಿಕಥಾ ಸಪ್ತಾಹಗಳನ್ನು ಆಯೋಜಿಸುತ್ತಿದ್ದು, ಮಂಗಳೂರು, ಸುಳ್ಯ, ಉಜಿರೆಯಲ್ಲಿ ನೆರವೇರಿಸಲಾಗುತ್ತಿದೆ. ಸೆ.5 ರಿಂದ 11 ತನಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಭಕ್ತಿಗೀತೆ, ಹರಿಭಕ್ತಿಸಾರದ ಉಪನ್ಯಾಸ, ತಾಳಮದ್ದಳೆ ಸಮೇತ ವಿವಿಧ ಹರಿದಾಸರಿಂದ ಹರಿಕಥಾ ಸಪ್ತಾಹ ನಡೆಯಲಿದೆ. ಸೆ.5ರಂದು ಮಧ್ಯಾಹ್ನ ಜ್ಯೂನಿಯರ್ ರಾಜಕುಮಾರ್ ಖ್ಯಾತಿಯ ಜಗದೀಶ ಶಿವಪುರ ಅವರಿಂದ ಭಕ್ತಿಗೀತೆಗಳು, ಸಂಜೆ ಹರಿಕಥಾ ಸಪ್ತಾಹ ಉದ್ಘಾಟನೆ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಚೇತನಾ ಆಸ್ಪತ್ರೆಯ ಡಾ. ಜೆ.ಸಿ. ಅಡಿಗ, ಅಂಬಿಕಾ ಸಮೂಹ ವಿದ್ಯಾಸಂಸ್ಥೆಯ ನ್ಯಾಯವಾದಿ ಸುಬ್ರಹ್ಮಣ್ಯ ನಟ್ಟೋಜ, ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ ಭಾಗವಹಿಸಲಿದ್ದಾರೆ. ಬಳಿಕ ಹರಿದಾಸ ಎಚ್.ಯಜ್ಞೇಶ್ ಆಚಾರ್ ಅವರಿಂದ ‘ಬೇಡರ ಕಣ್ಣಪ್ಪ’ ಹರಿಕಥೆ ನಡೆಯಲಿದೆ. ಹಾಗೆ ಮುಂದೆ ಸೆ.6ಕ್ಕೆ ಹರಿದಾಸ ಪಿ.ವಿ.ರಾವ್ ಅವರಿಂದ ‘ತ್ರಿಪುರ ಮಥನ’, ಸೆ.೭ಕ್ಕೆ ಕಾರ್ಕಳದ ಅನಂತ ಪದ್ಮನಾಭ ಭಟ್ ಅವರಿಂದ ‘ಭೂ ಕೈಲಾಸ’, ಸೆ.೮ಕ್ಕೆ ಹರಿದಾಸ ದೇವಕೀತನಯ ಕೂಡ್ಲು ಅವರಿಂದ ‘ಪಾಶುಪತಾಸ್ತ್ರ”, ಸೆ.9ಕ್ಕೆ ಹರಿದಾಸ ಶಂ.ನಾ ಅಡಿಗ ಕುಂಬ್ಳೆ ಅವರಿಂದ ‘ದಕ್ಷಾಧ್ವರ’, ಸೆ.10ಕ್ಕೆ ಹರಿದಾಸ ಡಾ. ಎಸ್ ಪಿ.ಗುರುದಾಸ ಅವರಿಂದ “ಭಕ್ತ ಮಾರ್ಕಂಡೇಯ’ ಹರಿಕಥೆ ನಡೆಯಲಿದ್ದು, ಅದೇ ದಿನ ಎಂ.ಆರ್.ವಾಸುದೇವ ಅವರಿಂದ ‘ಹರಿಭಕ್ತಿಸಾರ’ ಉಪನ್ಯಾಸ ನಡೆಯಲಿದೆ. ಸೆ.11ಕ್ಕೆ ನಾಯರ್ಪಳ್ಳ ಕು.ಶ್ರದ್ಧಾ ಭಟ್ ಅವರಿಂದ ‘ಗಿರಿಜಾ ಕಲ್ಯಾಣಿ’ ಹರಿಕಥೆ ನಡೆಯಲಿದೆ. ಸೆ.೧೧ರಂದು ಸಮಾರೋಪ ಸಮಾರಂಭದಲ್ಲಿ ನಿಮಾನ ನಿಲ್ದಾಣ ಪ್ರಾಧಿಕಾರದ ನಿವೃತ್ತ ನಿರ್ದೇಶಕ ಎಂ.ಆರ್ ವಾಸುದೇ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅಡಿಕೆ ಪತ್ರಿಕೆ ಉಪಸಂಪಾದಕ ನಾ.ಕಾರಂತ ಪೆರಾಜೆ ಅವರು ಶೇಣಿ ಸಂಸ್ಮರಣೆ ಮಾಡಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್, ಚೇತನಾ ಆಸ್ಪತ್ರೆಯ ಡಾ. ಶ್ರೀಕಾಂತ್ ರಾವ್, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಯಕ್ಷರಂಗ ಪುತ್ತೂರು ಇದರ ಅಧ್ಯಕ್ಷ ಕೆ.ಸೀತಾರಾಮ ಶಾಸ್ತ್ರಿ, ಸುಳ್ಯ ಶ್ರೀ ರಾಘವೇಂದ್ರ ಮಠದ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀರಾಮ ವನಗಮನ ಎಂಬ ಯಕ್ಷಗಾನತಾಳಮದ್ದಳೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಶೇಣಿ ಗೋಪಾಲಕೃಷ್ಣ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಂ.ಅರ್ ವಾಸುದೇವ ಅವರು ಮಾತನಾಡಿ ಯಕ್ಷಗಾನ, ತಾಳಮದ್ದಳೆ, ಹರಿಕಥೆಯಲ್ಲಿ ದೈತ್ಯ ಪ್ರತಿಭೆಯಾಗಿರುವ ಶೇಣಿ ಗೋಪಾಲಕೃಷ್ಣ ಅವರ ನೆನಪಿನಲ್ಲಿ ಹಲವು ಕಾರ್ಯಕ್ರಮ ನಡೆಸಿದೆ. ಅವರ ಶತಮನಾನೋತ್ಸವ ಸಂದರ್ಭದಲ್ಲಿ 103 ಕಡೆ ಹರಿಕಥೆ ನಡೆಸಿದ್ದೇವೆ. ಕಿರಿಯರನ್ನು ಈ ರಂಗದಲ್ಲಿ ತಯಾರು ಮಾಡುವ ಉದ್ದೇಶದಿಂದ ಈ ಸಂಸ್ಥೆ ಕೆಲಸ ಮಾಡಿದೆ. ಹರಿಕಥೆಯನ್ನು ಮನೆ ಮನೆಗೆ ತಲುಪಬೇಕೆಂಬ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ನೀಡುತ್ತಿದ್ದೇವೆ ಎಂದು ಹೇಳಿದರು. ಟ್ರಸ್ಟ್‌ನ ಗೌರವ ಸಲಹೆಗಾರ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಅವರು ಪುತ್ತೂರಿನಲ್ಲಿ ಹರಿಕಥೆ ಕೇಳುಗರನ್ನು ಬೆಳೆಸಬೇಕೆಂಬ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬೊಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಪಿ.ವಿ.ರಾವ್, ಪುತ್ತೂರು ಘಟಕದ ಸಂಚಾಲಕರಾದ ಭಾಸ್ಕರ ಬಾರ್ಯ, ಚಂದ್ರಶೇಖರ್ ಆಳ್ವ ಪಡುಮಲೆ, ದುಗ್ಗಪ್ಪ ಎನ್ ಉಪಸ್ಥಿತರಿದ್ದರು.
ಮನೆ ಮನೆಯಲ್ಲಿ ಹರಿಕಥೆ
ಹರಿಕಥೆಯ ಮೂಲಕ ಪುರಾಣ ಕಥೆಗಳನ್ನು ಮತ್ತೆ ಜನರಲ್ಲಿ ಮೆಗೂಡಿಸುವ ನಿಟ್ಟಿನಲ್ಲಿ ಹರಿಕಥಾ ಪರಿಷತ್‌ನಿಂದ ಮನೆ ಮನೆಗೆ ತೆರಳಿ ಹರಿಕಥೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಕುರಿತು ಈಗಲಾಗಲೇ ಪುತ್ತೂರಿನಲ್ಲಿ ಮನೆ ಮನೆಗೆ ಹರಿಕಥೆ ಕಾರ್ಯಕ್ರಮ ಆಯೋಜಿಸುವವರು ನಮ್ಮನ್ನು ಸಂಪರ್ಕಿಸಬಹುದು. ಕಾರ್ಯಕ್ರಮ ಉಚಿತವಾಗಿ ನೀಡಲಾಗುತ್ತದೆ.
ಕೂಡ್ಲು ಮಹಾಬಲ ಶೆಟ್ಟಿ 9844613010