ನೆಲ್ಯಾಡಿ: ಕಳೆದ ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಿರಾಡಿ ಗ್ರಾಮ ಪಂಚಾಯತ್‌ನ ಸಿಬ್ಬಂದಿ, ಶಿರಾಡಿ ಗ್ರಾಮದ ಮಿತ್ತಮಜಲು ನಿವಾಸಿ ತೇಜಸ್(32ವ.)ರವರು ಸೆ.3ರಂದು ರಾತ್ರಿ 9.30ರ ವೇಳೆಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ತೇಜಸ್‌ರವರು ಕಳೆದ ಆರು ತಿಂಗಳಿನಿಂದ ಶಿರಾಡಿ ಗ್ರಾಮ ಪಂಚಾಯಿತಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲ ಸಮಯದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆ ಮಂಗಳೂರಿನ ಫಾದರ್ ಮುಲ್ಲಾರ್ ಆಸ್ಪತ್ರೆಗೆ ದಾಖಲಾಗಿದ್ದರು. ಇಲ್ಲಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಅವರ ಆರೋಗ್ಯದಲ್ಲಿ ಸುಧಾರಣೆಯಾಗದೇ ಇದ್ದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಸೆ.3ರಂದು ಸಂಜೆ ಮನೆಗೆ ಕರೆತರಲಾಗಿತ್ತು. ಮನೆಯಲ್ಲಿದ್ದವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿ ರಾತ್ರಿ 9.30ರ ವೇಳೆಗೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.
ಮೃತರು ತಂದೆ ತೋಮಸ್ ವಿ.ಎಂ., ತಾಯಿ ಪಿಲೋಮಿನಾ, ಸಹೋದರ ಟೈಟಸ್‌ರವರನ್ನು ಅಗಲಿದ್ದಾರೆ. ಮೃತರ ಮನೆಗೆ ಶಿರಾಡಿ ಗ್ರಾ.ಪಂ.ಅಧ್ಯಕ್ಷೆ ವಿನೀತಾ ತಂಗಚ್ಚನ್, ಉಪಾಧ್ಯಕ್ಷ ಕಾರ್ತಿಕೇಯನ್, ಸದಸ್ಯರು ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.