ಫಿಲೋಮಿನಾ ಪಿಯು ಕಾಲೇಜ್‌ನಲ್ಲಿ ಶಿಕ್ಷಕರ ದಿನಾಚರಣೆ

0
  • ಸಾಧನೆಯನ್ನು ನೇರವಾಗಿ ಗುರುತಿಸಿ ಪ್ರಶಸ್ತಿ ನೀಡುವಂತಾಗಲಿ-ಶಶಿಕುಮಾರ್ ರೈ

ಪುತ್ತೂರು: ಶಿಕ್ಷಕರೇ ತಮ್ಮ ಸಾಧನೆಯ ಬಯೋಡಾಟವನ್ನು ಕಳುಹಿಸಿ ಪ್ರಶಸ್ತಿ ಪಡೆಯುವುದು ವಿಪರ್‍ಯಾಸವಾಗಿದೆ. ಇಲಾಖೆಯು ಶಿಕ್ಷಕರ ಸಾಧನೆಯನ್ನು ನೇರವಾಗಿ ಗುರುತಿಸಿ ಪ್ರಶಸ್ತಿಯನ್ನು ನೀಡುವಂತಾಗಬೇಕು ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಫಿಲೋಮಿನಾ ಪಿಯು ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಹೇಳಿದರು.

ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಡಾ|ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನೋತ್ಸವ ಅಂಗವಾಗಿ ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಸೆ.೫ ರಂದು ಜರಗಿದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಹಿಂದಿನ ಹಿರಿಯ ಶಿಕ್ಷಕ ಗುರುಗಳಿಗೆ ವಿದ್ಯಾರ್ಥಿಗಳು ತುಂಬಾ ಗೌರವ ಕೊಡುತ್ತಿದ್ದರು. ಆದರೆ ಇಂದು ಶಿಕ್ಷಕರನ್ನು ಅಡ್ಡ ನಾಮಧೇಯದಲ್ಲಿ ಕರೆಯಲ್ಪಡುವ ಪರಿಪಾಠ ಬೆಳೆದಿದೆ. ಶಿಸ್ತುಬದ್ಧ ಶಿಕ್ಷಣದಿಂದ ವಿದ್ಯಾರ್ಥಿಗಳು ತಮ್ಮ ಸುಂದರ ಭವಿಷ್ಯವನ್ನು ರೂಪಿಸುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಅಡಿಪಾಯ ಹಾಕುವ ಶಿಕ್ಷಕರು ಉದಾತ್ತತೆಯ ಗುಣವುಳ್ಳ ಅನನ್ಯ ವ್ಯಕ್ತಿಗಳಾಗಿದ್ದಾರೆ. ವಿದ್ಯಾರ್ಥಿಗಳ ತಪ್ಪನ್ನು ತಿದ್ದಿ ತೀಡಿ ಅವರನ್ನು ಸಮಾಜದ ಉತ್ತಮ ನಾಗರಿಕರನ್ನಾಗಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.

ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಫುಲ್ಲ ಜ್ಯೋತ್ಸ್ನಾ ನೊರೋನ್ಹಾ ಸ್ವಾಗತಿಸಿ, ಅಧ್ಯಕ್ಷ ಶ್ರೀನಿವಾಸ್ ಹೆಗ್ಡೆ ವಂದಿಸಿದರು. ಜೊತೆ ಕಾರ್ಯದರ್ಶಿ ರಶ್ಮಿ ಎಂ.ಡಿರವರು ಶಿಕ್ಷಕರ ದಿನಾಚರಣೆಯ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿ ಅನಘಾ ಎಸ್.ರೈ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಕಾಲೇಜಿನ ಉಪನ್ಯಾಸಕ ಹಾಗೂ ಆಡಳಿತ ಸಿಬ್ಬಂದಿ ವರ್ಗದವರಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿದ್ಯಾರ್ಥಿನಿಯರಾದ ಕ್ಯಾರಲ್ ಸಿಕ್ವೇರಾ ಹಾಗೂ ಅಲಿಟ ರೊಡ್ರಿಗಸ್‌ರವರು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಿಕೊಟ್ಟರು.

ಭವಿಷ್ಯ ರೂಪಿಸುವ ಶಿಕ್ಷಕರಿಗೆ ಸೆಲ್ಯೂಟ್…
ವ್ಯಕ್ತಿ ಸಮಾಜದಲ್ಲಿ ಎಷ್ಟೇ ಉನ್ನತ ಮಟ್ಟಕ್ಕೇರುವುದಕ್ಕೆ ಶಿಕ್ಷಕರು ಹಾಕಿಕೊಟ್ಟ ಶಿಕ್ಷಣದ ಭದ್ರ ಬುನಾದಿ ಕಾರಣವಾಗಿದೆ ಮಾತ್ರವಲ್ಲದೆ ಪ್ರೀತಿಯಿಂದ ಸೇವೆ ಮಾಡಲು ನಮಗೆ ದಾರಿದೀಪವಾಗಿದೆ. ನಿಜವಾಗಿಯೂ ನಾವು ನಮ್ಮ ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ ಸೆಲ್ಯೂಟ್ ಹೊಡೆಯಬೇಕು. ನಮ್ಮ ಪ್ರೀತಿಯ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆಯ ದಿನದಂದು ಶುಭಾಶಯ ಕೋರಿ ಸಂದೇಶ ಕಳುಹಿಸುವುದು ಅದುವೇ ನಾವು ಅವರಿಗೆ ನೀಡುವ ದೊಡ್ಡ ಕಾಣಿಕೆಯಾಗಿದೆ –ವಂ|ಸ್ಟ್ಯಾನಿ ಪಿಂಟೋ, ಕ್ಯಾಂಪಸ್ ನಿರ್ದೇಶಕರು, ಫಿಲೋಮಿನಾ ಕಾಲೇಜು

ಫಿಲೋಮಿನಾ ಪಿಯು ಕಾಲೇಜಿನಲ್ಲಿ ಕಳೆದ ಎರಡು ವರ್ಷ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here