ಪುತ್ತೂರು:ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಸರಕು(ಎಫ್‌ಎಂಸಿಜಿ)ವಲಯದಲ್ಲಿ ಏಕಸ್ವಾಮ್ಯ ಸಾಧಿಸಲು ದಾಪುಗಾಲಿಡುತ್ತಿರುವ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಪುತ್ತೂರಿನ ಪ್ರಖ್ಯಾತ ಬ್ರ್ಯಾಂಡ್ `ಬಿಂದು’ ಮೇಲೆ ಕಣ್ಣಿಟ್ಟಿದ್ದು ಬಿಂದು ಬ್ರ್ಯಾಂಡ್ ಖರೀದಿಗೆ ಆಫರ್ ಮುಂದಿಟ್ಟಿದೆ.ಆದರೆ ರಿಲಯನ್ಸ್‌ನ ಈ ಆಫರನ್ನು `ಬಿಂದು’ ಮಾಲಕರು ನಿರಾಕರಿಸಿದ್ದಾರೆ.
ಸ್ಥಳೀಯವಾಗಿ ಪ್ರಾರಂಭವಾದ ಬಿಂದು ಬ್ರ್ಯಾಂಡ್‌ನ ಖರೀದಿಗೆ ರಿಲಯನ್ಸ್ ಮುಂದಾಗಿದ್ದು ಒಂದು ವೇಳೆ ಈ ಖರೀದಿ ನಡೆದಿದ್ದರೆ ಸಾವಿರಾರು ಕೋಟಿ.ರೂ ಒಪ್ಪಂದ ಏರ್ಪಡುವ ಸಾಧ್ಯತೆ ಇತ್ತು ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.
ಕ್ಯಾವಿನ್ ಕೇರ್‌ನ ಗಾರ್ಡನ್ಸ್ ನಮ್‌ಕೀನ್, ಲಹೋರಿ ಜೀರಾ ಹಾಗೂ ಬಿಂದು ಬಿವರೇಜರ್ ಅನ್ನು ಸ್ವಾಧೀನಪಡಿಸಿಕೊಳ್ಳಲು ರಿಲಯನ್ಸ್ ಇಂಡಸ್ಟ್ರೀಸ್ ಮುಂದಾಗಿದೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.ಇತ್ತೀಚೆಗಷ್ಟೇ ರಿಲಯನ್ಸ್ ದೆಹಲಿ ಮೂಲದ ಪ್ಯೂರ್ ಡ್ರಿಂಕ್ಸ್ ಗ್ರೂಪ್‌ನಿಂದ ಸಾಫ್ಟ್ ಡ್ರಿಂಕ್ಸ್ ಬ್ರ್ಯಾಂಡ್ `ಕ್ಯಾಂಪಾ’ವನ್ನು ೨೨ ಕೋಟಿ ರೂ.ಗೆ ಖರೀದಿಸಿತ್ತು.ಈಗಾಗಲೇ ಕೋಕಾಕೋಲಾ ಮತ್ತು ವಿಪ್ರೋ ಸಹಿತ ವಿದೇಶಿ ಕಂಪನಿಗಳೂ ಬಿಂದು ಬ್ರ್ಯಾಂಡ್ ಖರೀದಿಗೆ ಮುಂದೆ ಬಂದಿದ್ದವು.ಅವರ ಡೀಲ್ ಅನ್ನು ಕೂಡ ಬಿಂದು ಕಂಪನಿ ನಿರಾಕರಿಸಿತ್ತು.
ಮಧ್ಯಮ ವರ್ಗದ ಕೃಷಿ ಕುಟುಂಬದಿಂದ ಬಂದಿರುವ ಸತ್ಯಶಂಕರ್ ಭಟ್ ಅವರು ಮೇಕ್ ಇನ್ ಇಂಡಿಯಾ ಕಲ್ಪನೆಗೆ ಪೂರಕವಾಗಿ 20 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಬಿಂದು ಮಿನರಲ್ ವಾಟರ್‌ನೊಂದಿಗೆ ಎಸ್‌ಜಿ ಕಾರ್ಪೋರೇಟ್ಸ್ ಉದ್ಯಮ ಆರಂಭಿಸಿದ್ದರು.ಕಂಪನಿ ಆರಂಭಿಸಿದ `ಬಿಂದು ಫಿಜ್ ಜೀರಾ’ ಭಾರೀ ಜನಪ್ರಿಯವಾಗಿ, ಕಂಪೆನಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.
ಬಿಂದು ಮಿನರಲ್ ವಾಟರ್, ಬಿಂದು ಫಿಝ್ ಝೀರಾ, ಸಿಪ್ ಆನ್ ಸೇರಿದಂತೆ ಪ್ರಸ್ತುತ ಸುಮಾರು 50ಕ್ಕೂ ಅಧಿಕ ಉತ್ಪನ್ನಗಳನ್ನು ಎಸ್‌ಜಿ ಕಾರ್ಪೊರೇಟ್ಸ್ ಉತ್ಪಾದಿಸುತ್ತಿದ್ದು ದೇಶದ ವಿವಿಧ ಭಾಗಗಳಲ್ಲಿ ಉತ್ತಮ ಮಾರುಕಟ್ಟೆ ಹೊಂದಿದೆ.ಇಡೀ ದೇಶವೇ ಗುರುತಿಸುವಂಥ ಸಂಸ್ಥೆಯನ್ನು ಪುತ್ತೂರಿನಲ್ಲಿ ಸ್ಥಾಪಿಸಿರುವ ಎಸ್‌ಜಿ ಕಾರ್ಪೊರೇಟ್ಸ್ ಸಾವಿರ ಕೋಟಿ ರೂ.ಗಳ ವ್ಯವಹಾರದ ಗುರಿಯನ್ನು ಹೊಂದಿ ಕಾರ್ಯನಿರ್ವಹಿಸುತ್ತಿದೆ.ಸಣ್ಣದಾಗಿ ಪ್ರಾರಂಭಗೊಂಡಿದ್ದ ಸಂಸ್ಥೆ ಇಂದು ಕೋಟ್ಯಾಂತರ ರೂ. ವ್ಯವಹಾರ ಮಾಡುತ್ತಾ ದಕ್ಷಿಣ ಭಾರತದಾದ್ಯಂತ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.ಆಂಧ್ರದಲ್ಲಿ ಈಗಾಗಲೇ ಕಂಪನಿ ಫ್ಯಾಕ್ಟರಿ ತೆರೆಯಲು ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ಎಸ್‌ಜಿ ಕಾರ್ಪೊರೇಟ್ಸ್‌ಗೆ ಜಾಗ ನೀಡಿದ್ದಾರೆ.ಶೀಘ್ರವೇ ಅಲ್ಲಿ ತಯಾರಿಕಾ ಘಟಕ ನಿರ್ಮಿಸುವ ಗುರಿಯನ್ನು ಹೊಂದಿರುವ ಎಸ್‌ಜಿ ಕಾರ್ಪೊರೇಟ್ಸ್ ಸಂಸ್ಥೆ,ರಿಲಯನ್ಸ್ ಆಫರನ್ನು ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ.
ಕಂಪೆನಿ ಮಾರಾಟ ಮಾಡುವ ಯಾವುದೇ ನಿರ್ಧಾರ ನಮ್ಮ ಮುಂದಿಲ್ಲ
ಬಿಂದು ಬ್ರ್ಯಾಂಡ್‌ನ ಖರೀದಿಗೆ ರಿಲಯನ್ಸ್‌ನಿಂದ ಆಫರ್ ಬಂದದ್ದು ಹೌದು.ಆದರೆ ಅದನ್ನು ನಾನು ತಿರಸ್ಕರಿಸಿದ್ದೇನೆ.ಇದಕ್ಕಿಂತ ಮುಂಚೆಯೂ ಹಲವಾರು ಕಂಪೆನಿಗಳು ಬಿಂದು ಬ್ರ್ಯಾಂಡ್ ಖರೀದಿಗೆ ಮುಂದಾಗಿದ್ದು ಆಫರ್ ನೀಡಿದ್ದರು.ಆವಾಗಲೂ ತಿರಸ್ಕರಿಸಿದ್ದೆ.ಕಂಪೆನಿಯನ್ನು ಮಾರಾಟ ಮಾಡುವ ಯಾವುದೇ ನಿರ್ಧಾರ ನಮ್ಮ ಮುಂದಿಲ್ಲ.ನಾವೇ ನಮ್ಮ ಕಂಪೆನಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ – ಸತ್ಯ ಶಂಕರ್ , ಆಡಳಿತ ನಿರ್ದೇಶಕರು, ಎಸ್‌ಜಿ ಕಾರ್ಪೊರೇಟ್ಸ್